ಕಳೆದೊಂದು ವರ್ಷದ ಕಾಲ ಇಡೀ ವಿಶ್ವದ ನಿದ್ದೆಗೆಡಿಸಿರುವ ಕೊರೋನಾ ವೈರಸ್| ವುಹಾನ್‌ನ ಮತ್ತೊಂದು ಆಸ್ಪತ್ರೆಗೆ WHO ತಂಡ ಭೇಟಿ!
ವುಹಾನ್(ಜ.31): ಕಳೆದೊಂದು ವರ್ಷದ ಕಾಲ ಇಡೀ ವಿಶ್ವದ ನಿದ್ದೆಗೆಡಿಸಿರುವ ಕೊರೋನಾ ವೈರಸ್‌ನ ಉಗಮ ಸ್ಥಾನದ ಪತ್ತೆಗಾಗಿ ಚೀನಾದ ವುಹಾನ್‌ಗೆ ಬಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಶನಿವಾರ ಜಿನ್ಯಾಂಟನ್ ಎಂಬ ಮತ್ತೊಂದು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದೆ. ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ತಂಡದ ಸದಸ್ಯರು 2 ದಿನಗಳಲ್ಲಿ 2ನೇ ಆಸ್ಪತ್ರೆಗೆ ಭೇಟಿ ನೀಡಿದಂತಾಗಿದೆ.
2020ರಲ್ಲಿ ಕೊರೋನಾ ವೈರಸ್ ಎಂದೇ ಗೊತ್ತಿರದಿದ್ದ ನಿಗೂಢ ಕಾಯಿಲೆಗೆ ತುತ್ತಾಗುತ್ತಿದ್ದವರನ್ನು ಜಿನ್ಯಾಂಟನ್ ಆಸ್ಪತ್ರೆಯಲ್ಲೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಂಡವು ಈ ಆಸ್ಪತ್ರೆಯಲ್ಲಿ ದಾಖಲಾತಿ ಪರಿಶೀಲನೆ ಸೇರಿದಂತೆ ಇನ್ನಿತರ ಕಾರ್ಯಾಚರಣೆ ನಡೆಸುತ್ತಿದೆ.
undefined
ಶುಕ್ರವಾರ ಹುಬೇಯಲ್ಲಿರುವ ವೆಸ್ಟರ್ನ್ ಮೆಡಿಸಿನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಈ ತಂಡವು ಆಹಾರ ಸುರಕ್ಷತಾ, ವೈರಾಲಜಿ(ಸೂಕ್ಷ್ಮ ರೋಗಗಳ ವೈಜ್ಞಾನಿಕ ಅಧ್ಯಯನ), ಪ್ರಾಣಿಗಳ ಆರೋಗ್ಯ ಸೇರಿದಂತೆ ಇನ್ನಿತರ ವಿಶೇಷ ತಜ್ಞರು ಹಾಗೂ ಚೀನಾದ ವಿಜ್ಞಾನಿಗಳ ಜೊತೆ ಮುಖಾಮುಖಿ ಸಭೆ ನಡೆಸಿತ್ತು.
ಚೀನಾದಲ್ಲಿ ಕೊರೋನಾಕ್ಕೆ ಸಂಬಂಧವಿರುವ ಆಸ್ಪತ್ರೆಗಳು, ಮಾರುಕಟ್ಟೆಗಳು ಸೇರಿದಂತೆ ಇನ್ನಿತರ ಸ್ಥಳಗಳಿಗೆ ಖುದ್ದು ಭೇಟಿ ನೀಡಲಿರುವ ಈ ತಂಡವು ಆ ನಂತರ ವಿಸ್ತೃತ ವರದಿ ಸಿದ್ಧಪಡಿಸಿ ವಿಶ್ವಸಂಸ್ಥೆಗೆ ಸಲ್ಲಿಸಲಿದೆ.