
ನವದೆಹಲಿ [ಮಾ.18]: ವಿಶ್ವದಾದ್ಯಂತ ತಲ್ಲಣ ಹುಟ್ಟುಹಾಕಿರುವ ಕೊರೋನಾ ವೈರಸ್ ತಡೆ ಮತ್ತು ನಿವಾರಣೆ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ಒ) ಬಹುವಾಗಿ ಮೆಚ್ಚಿಕೊಂಡಿದೆ. ಅಲ್ಲದೆ ಕೊರೋನಾ ವೈರಸ್ ಅನ್ನು ನಿರ್ವಹಿಸುವಲ್ಲಿ ಭಾರತ ವಿಶ್ವಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಹಾಡಿ ಹೊಗಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಮ್, ‘ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಸರ್ಕಾರದ ಬದ್ಧತೆ ಮತ್ತು ಪ್ರಧಾನಿ ಕಚೇರಿಯ ಕಾರ್ಯ ಅಗಾಧ ಮತ್ತು ಅತ್ಯಂತ ಶ್ಲಾಘನೀಯ. ಹೀಗಾಗಿ ಭಾರತ ಇದೀಗ ಸುಸ್ಥಿತಿಯಲ್ಲಿದೆ. ಈ ಹೋರಾಟಕ್ಕೆ ಎಲ್ಲರನ್ನೂ ಒಂದುಗೂಡಿಸಿದ್ದನ್ನು ಕಂಡು ನಾನು ಬಹಳ ಪ್ರಭಾವಿತನಾಗಿದ್ದೇನೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಸೋಂಕಿಗೆ ಕಾರಣವಾಗುವ ಸಾರ್ಸ್- ಕೋವ್-2 ಎಂಬ ವೈರಾಣುವನ್ನು ಬೇರ್ಪಡಿಸುವಲ್ಲಿ ಯಶಸ್ವಿ ಆಗಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕಾರ್ಯಕ್ಕೆ ಹೆಂಕ್ ಬೆಕೆಡಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಆರೋಗ್ಯ ಸಂಶೋಧನಾ ಇಲಾಖೆ ಅತ್ಯುತ್ತಮ ಸಂಶೋಧನಾ ವ್ಯವಸ್ಥೆಯನ್ನು ಹೊಂದಿದೆ. ಭಾರತದ ವಿಜ್ಞಾನಿಗಳು ವೈರಾಣುವನ್ನು ಗುರುತಿಸುವಲ್ಲಿ ಯಶಸ್ವಿ ಆಗಿದ್ದಾರೆ. ಕೊರೋನಾ ವೈರಸ್ಗೆ ಸಂಶೋಧನೆ ಕೈಗೊಂಡಿರುವ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆ ಆಗಿದೆ ಎಂದು ಹೇಳಿದ್ದಾರೆ.
ಕೊರೋನಾ ಪೀಡಿತ ಚೀನಾದ ವುಹಾನ್ನಿಂದ ವಿದ್ಯಾರ್ಥಿಗಳು ಮರಳಿದಾಗ ಅವರಲ್ಲಿ ಮೂವರಿಂದ ಮಾದರಿಗಳನ್ನು ಸಂಗ್ರಹಿಸಿ ಪುಣೆಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ ಸೋಂಕುಕಾರಕ ರೋಗಾಣುವನ್ನು ಪತ್ತೆ ಮಾಡುವಲ್ಲಿ ಯಶಸ್ವಿ ಆಗಿದೆ. ಸೋಂಕು ಕಾರಕ ವೈರಾಣುವನ್ನು ಬೇರ್ಪಡಿಸಿದ್ದರಿಂದ ಲಾಭವೆಂದರೆ ಭವಿಷ್ಯದಲ್ಲಿ ಭಾರತ ಕೊರೋನಾಗೆ ತನ್ನದೇ ಆದ ಲಸಿಕೆಯನ್ನು ಕಂಡುಹಿಡಿಯುವುದಕ್ಕೆ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ