
ಸೋಲ್ (ದ.ಕೊರಿಯಾ) [ಮಾ.17]: ದಕ್ಷಿಣ ಕೊರಿಯಾದಲ್ಲಿ ಕೊರೋನಾ ವೈರಸ್ ಈವರೆಗೆ 8000ಕ್ಕೂ ಹೆಚ್ಚು ಜನರಿಗೆ ತಗುಲಿ, 75 ಜನರನ್ನು ಬಲಿ ಪಡೆದಿದೆ. ಫೆ.18ರವರೆಗೆ ದೇಶದಲ್ಲಿ ಕೇವಲ 30 ಜನರಿಗೆ ತಗುಲಿದ್ದ ಸೋಂಕು, ನಂತರದ 1 ತಿಂಗಳ ಅವಧಿಯಲ್ಲಿ 8 ಸಾವಿರದ ಗಡಿ ದಾಟಿದ್ದು ಹೇಗೆ ಎಂಬ ಪ್ರಶ್ನೆಗೆ ಬೆಚ್ಚಿ ಬೀಳಿಸುವ ಉತ್ತರ ದೊರಕಿದೆ.
ದೇಶದಲ್ಲಿ ಕೊರೋನಾ ಅಂದಾಜು ಮೀರಿ ವ್ಯಾಪಿಸಲು ಕಾರಣವಾಗಿದ್ದೇ ‘ಪೇಷಂಟ್ 31’ ಎಂದು ನಾಮಾಂಕಿತವಾಗಿರುವ ಮಹಿಳಾ ಕೊರೋನಾ ವೈರಸ್ ರೋಗಿ. ಅಂದರೆ ಈಕೆ ದೇಶದ 31ನೇ ಕೊರೋನಾ ಪೀಡಿತೆ. ಹೌದು. ಈ ಒಬ್ಬಳೇ ಮಹಿಳೆಯಿಂದ ಸುಮಾರು 1,160 ಜನರಿಗೆ ಕೊರೋನಾ ಅಂಟಿದೆ. ಈ ಜನರಿಂದ ಮತ್ತಷ್ಟುಸಾವಿರ ಜನರಿಗೆ ಕೊರೋನಾ ವ್ಯಾಪಿಸಿದೆ ಎಂದು ಕೊರಿಯಾ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಈಕೆಯಿಂದ ರೋಗ ಹರಡಿದ್ದು ಹೇಗೆ?:
61 ವರ್ಷದ ಈ ಮಹಿಳೆಗೆ ಫೆ.6ರಂದು ಸಣ್ಣ ರಸ್ತೆ ಅಪಘಾತವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿಕೊಂಡಿದ್ದ ಆಕೆ, ಕೆಲ ಸಾಮಾನು ತರುವುದಾಗಿ ಹೇಳಿ ಮನೆಗೆ ತೆರಳಿದ್ದರು. ಹೀಗೆ ಹೋದವಳು ಫೆ.9ರಂದು ಕೊರಿಯಾದ ‘ಶಿಂಚೆಯೋನ್‌ಜಿ ಚರ್ಚ್’ ನಡೆಸಿದ, ಸಾವಿರಾರು ಜನರು ಭಾಗಿಯಾಗಿದ್ದ ಸಭೆಯೊಂದರಲ್ಲಿ ಪಾಲ್ಗೊಂಡಳು. ಸರ್ಕಾರದ ಸೂಚನೆಯನ್ನು ಮೀರಿ, ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದೆ ಈ ಚರ್ಚ್ ಸಾವಿರಾರು ಜನರನ್ನು ಒಂದು ಕಡೆ ಸೇರಿಸಿ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಪಾಲ್ಗೊಂಡು ಮತ್ತೆ ಆಸ್ಪತ್ರೆಗೆ ಮರಳಿದ ಆಕೆಯಲ್ಲಿ ಕಾಣಿಸಿಕೊಂಡಿತು. ಆದರೆ ಪರೀಕ್ಷೆ ನಡೆಸಿದಾಗ ‘ನೆಗೆಟಿವ್’ ವರದಿ ಬಂತು. ಆದರೂ ಆಕೆಯಲ್ಲಿನ ಜ್ವರ ಬಾಧೆ ನಿಲ್ಲಲಿಲ್ಲ.
ಕರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ...
ಈ ನಡುವೆ, ಫೆ.15ರಂದು ‘ನಿಮಗೆ ಕೊರೋನಾ ವೈರಸ್ ಇರಬಹುದು. ಪರೀಕ್ಷಿಸೋಣ’ ಎಂದು ವೈದ್ಯರು ಆಕೆಗೆ ಹೇಳಿದರು. ಆಗ ಆಕೆ, ‘ನಾನೇಕೆ ಕೊರೋನಾ ಪರೀಕ್ಷೆಗೆ ಒಳಪಡಲಿ? ನಾನು ಯಾವ ವಿದೇಶೀಯನನ್ನೂ ಭೇಟಿಯಾಗಿಲ್ಲ. ವಿದೇಶಕ್ಕೂ ಹೋಗಿಲ್ಲ. ನನಗೆ ಕೊರೋನಾ ಬಂದಿಲ್ಲ’ ಎಂದು ವೈದ್ಯರ ಜತೆ ಜಗಳವಾಡಿದಳು. ತಪಾಸಣೆ ಮಾಡಿಸಿಕೊಳ್ಳದೆ ಅಲ್ಲಿಂದ ತೆರಳಿದಳು.
ಈ ನಡುವೆ, ಫೆ.16ರಂದು ಮತ್ತೆ ಅದೇ ಚರ್ಚ್ ನಡೆಸಿದ ಸಾವಿರಾರು ಭಕ್ತರು ಭಾಗಿಯಾಗಿದ್ದ ಸಭೆಯಲ್ಲಿ ಪಾಲ್ಗೊಂಡಳು. ಫೆ.17ರಂದು ಮತ್ತೆ ‘ಪರೀಕ್ಷೆಗೆ ಗುರಿಯಾಗಿ’ ಎಂದು ಆಕೆಗೆ ವೈದ್ಯರು ಬಲವಂತ ಮಾಡಿದಾಗ, ಒಲ್ಲದ ಮನಸ್ಸಿನಿಂದಲೇ ತಪಾಸಣೆಗೆ ಗುರಿಯಾದಳು. ಆಗ ಆಕೆಯಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಆದರೆ ಯಾರಿಂದ ಆಕೆಗೆ ಕೊರೋನಾ ಅಂಟಿತು ಎಂದು ತಿಳಿದುಬರಲಿಲ್ಲ. ಈಕೆ ಕೊರಿಯಾದ 31ನೇ ಕೊರೋನಾ ಸೋಂಕಿತೆಯಾಗಿದ್ದಳು.
ಅಷ್ಟರಲ್ಲೇ ಆಕೆ 1,160 ಜನರನ್ನು ಭೇಟಿ ಮಾಡಿಯಾಗಿತ್ತು. ಅವರಿಗೂ ಕೊರೋನಾ ಅಂಟಲು ಆಕೆಯ ಭೇಟಿ ಕಾರಣವಾಗಿತ್ತು. ದೇಶದ ಕೊರೋನಾಪೀಡಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಲು ಈಕೆಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದುಬಂತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ