ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಟ್ರಂಪ್ ಮತ್ತು ಪುಟಿನ್ ಚರ್ಚಿಸಿದ್ದಾರೆ. ಉಕ್ರೇನಿಯನ್ ಪಡೆಗಳ ಜೀವ ಉಳಿಸಲು ಪುಟಿನ್ ಅವರನ್ನು ಟ್ರಂಪ್ ಒತ್ತಾಯಿಸಿದ್ದಾರೆ ಮತ್ತು ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರನ್ನು ಶ್ವೇತಭವನಕ್ಕೆ ಕರೆಸಿ ಅವರಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ಸರಿಯಾಗಿ ಬೈದ ನಂತರ ಉಕ್ರೇನ್ ರಷ್ಯಾ ಯುದ್ಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈ ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ ಮತ್ತು ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉಪಯುಕ್ತ ಚರ್ಚೆಗಳನ್ನು ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ . ಮಾತುಕತೆಯ ಸಮಯದಲ್ಲಿ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟಿರುವ ಉಕ್ರೇನಿಯನ್ ಪಡೆಗಳ ಜೀವಗಳನ್ನು ಉಳಿಸುವಂತೆ ಅವರು ಪುಟಿನ್ ಅವರನ್ನು ಒತ್ತಾಯಿಸಿದರು ಎಂದು ತಿಳಿದು ಬಂದಿದೆ. ಜೊತೆಗೆ ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳುವ ಉತ್ತಮ ಅವಕಾಶ ಇದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ನಾವು ನಿನ್ನೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಮತ್ತು ಉತ್ಪಾದಕ ಚರ್ಚೆಗಳನ್ನು ನಡೆಸಿದ್ದೇವೆ ಮತ್ತು ಈ ಭಯಾನಕ, ರಕ್ತಸಿಕ್ತ ಯುದ್ಧವು ಅಂತಿಮವಾಗಿ ಕೊನೆಗೊಳ್ಳುವ ಉತ್ತಮ ಅವಕಾಶವಿದೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಉಕ್ರೇನಿಯನ್ ಪಡೆಗಳು ದುರ್ಬಲ ಸ್ಥಿತಿಯಲ್ಲಿವೆ ಮತ್ತು ರಷ್ಯಾ ಕರುಣೆ ತೋರಿಸದಿದ್ದರೆ, ಅದು ಭೀಕರ ಹತ್ಯಾಕಾಂಡಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಯುದ್ಧ ಕೊನೆಗಾಣಿಸಲು ಮತ್ತೆ ಸಂಧಾನಕ್ಕೆ ಅಮೆರಿಕ, ಉಕ್ರೇನ್!
ಈಗಾಗಲೇ, ಸಾವಿರಾರು ಉಕ್ರೇನಿಯನ್ ಪಡೆಗಳು ರಷ್ಯಾದ ಮಿಲಿಟರಿಯಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಟ್ಟಿದ್ದು, ಉಕ್ರೇನ್ ಸೇನೆ ಅತ್ಯಂತ ಕೆಟ್ಟ ಮತ್ತು ದುರ್ಬಲ ಸ್ಥಿತಿಯಲ್ಲಿದೆ. ಅವರ ಜೀವಗಳನ್ನು ಉಳಿಸಬೇಕೆಂದು ನಾನು ಅಧ್ಯಕ್ಷ ಪುಟಿನ್ ಅವರನ್ನು ಬಲವಾಗಿ ವಿನಂತಿಸಿದ್ದೇನೆ. ಒಂದು ವೇಳೆ ಯುದ್ಧ ನಿಲ್ಲದಿದ್ದರೆ ಇದು ಎರಡನೇ ಮಹಾಯುದ್ಧದ ನಂತರ ಕಂಡಿರದ ಭಯಾನಕ ಹತ್ಯಾಕಾಂಡವಾಗಿರುತ್ತದೆ. ದೇವರು ಅವರೆಲ್ಲರನ್ನೂ ಆಶೀರ್ವದಿಸಲಿ ಎಂದು ಅಮೆರಿಕ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ 30 ದಿನಗಳ ಕದನ ವಿರಾಮವನ್ನು ಅಮೆರಿಕ ಪ್ರಸ್ತಾಪಿಸಿದ ಕೆಲವೇ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ನಡುವೆ ಫೋನ್ ಸಂಭಾಷಣೆ ನಡೆದಿದೆ. ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕಾದ ಈ ಸಲಹೆಯನ್ನು ಒಪ್ಪಿಕೊಂಡಿದ್ದಾರೆ ಮತ್ತು ಪುಟಿನ್ ಕೂಡ ತಾತ್ವಿಕವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಗುರುವಾರ ರಷ್ಯಾ ಅಮೆರಿಕಾದ ಈ ಒಪ್ಪಂದಕ್ಕೆ ತನ್ನ ಒಪ್ಪಿಗೆಯನ್ನು ದೃಢಪಡಿಸಿತು, ಆದರೆ ಪುಟಿನ್ ನಿಯಮಗಳನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ ಎಂದು ಒತ್ತಿ ಹೇಳಿದ್ದರು ಮತ್ತು ಯಾವುದೇ ಕದನ ವಿರಾಮವು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಟ್ರಂಪ್ ಜೂಜಾಟ: ಯುರೋಪ್ ಮತ್ತು ಜೆಲೆನ್ಸ್‌ಕಿ ವಿಧಿಯನ್ನೇ ಬದಲಿಸಬಲ್ಲದು ಅಮೆರಿಕಾದ ಆಟ!
ಯುದ್ಧ ನಿಲ್ಲಿಸುವ ಈ ಕಲ್ಪನೆ ಸರಿಯಾಗಿದೆ ಮತ್ತು ನಾವು ಅದನ್ನು ಖಂಡಿತವಾಗಿಯೂ ಬೆಂಬಲಿಸುತ್ತೇವೆ. ಆದರೆ ನಾವು ಚರ್ಚಿಸಬೇಕಾದ ವಿಷಯಗಳಿವೆ, ಮತ್ತು ನಾವು ನಮ್ಮ ಅಮೇರಿಕನ್ ಸಹೋದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ಅದರ ಬಗ್ಗೆ ಮಾತನಾಡಬೇಕು ಮತ್ತು ಬಹುಶಃ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಕರೆ ಮಾಡಿ ಅವರೊಂದಿಗೆ ಚರ್ಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಪುಟಿನ್ ಮಾಸ್ಕೋದಲ್ಲಿ ಹೇಳಿದ್ದರು.
ಶುಕ್ರವಾರ ಅಮೆರಿಕದ ವಿಶೇಷ ರಾಯಭಾರಿಯ ಮೂಲಕ ಉಕ್ರೇನ್ ಜೊತೆಗಿನ ಕದನ ವಿರಾಮ ಪ್ರಸ್ತಾಪದ ಬಗ್ಗೆ ಪುಟಿನ್ ಟ್ರಂಪ್‌ಗೆ ಸಂದೇಶವನ್ನು ಕಳುಹಿಸಿದರು ಮತ್ತು ಅದರ ಅಭಿಪ್ರಾಯವನ್ನು ಒಪ್ಪಬಹುದೆಂಬುದಕ್ಕೆ ಅದು ಆಧಾರವನ್ನು ಕಂಡಿದೆ ಎಂದು ರಷ್ಯಾ ಹೇಳಿದೆ. ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ನಾನು ಕದನ ವಿರಾಮದ ಬಗ್ಗೆ ತುಂಬಾ ಗಂಭೀರವಾಗಿರುತ್ತೇನೆ ಮತ್ತು ನನಗೆ, ಯುದ್ಧವನ್ನು ಕೊನೆಗೊಳಿಸುವುದು ಮುಖ್ಯವಾಗಿದೆ. ಅಮೆರಿಕದ ಕಡೆಯಿಂದ ಪ್ರಸ್ತಾಪಿಸಿದಂತೆ ನಾವು 30 ದಿನಗಳ ಕಾಲ ಕದನ ವಿರಾಮಕ್ಕೆ ಸಿದ್ಧರಿದ್ದೇವೆ ಎಂದು ಝೆಲೆನ್ಸ್ಕಿ ಕೈವ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.