
ಇಸ್ಲಾಮಾಬಾದ್ : ಉಗ್ರವಾದವನ್ನು ಬಿತ್ತಿ ಭಾರತದೊಂದಿಗೆ ಸಂಘರ್ಷಕ್ಕಿಳಿರುವ ಪಾಕಿಸ್ತಾನ ಗುರುವಾರ 79ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡಿದ್ದು, ಈ ವೇಳೆಯಲ್ಲೂ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಲಿ ಭಾರತ ಜತೆಗಿನ ಸಮರದಲ್ಲಿ ತಾವೇ ಗೆದ್ದಿದ್ದು ಎಂದು ಸುಳ್ಳು ಹೇಳಿದ್ದಾರೆ. ಪಾಕ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮತ್ತು ಅಧ್ಯಕ್ಷರು ತಮ್ಮ ದೇಶದ ಪ್ರಜೆಗಳಿಗೆ ಪ್ರತ್ಯೇಕವಾಗಿ ಸಂದೇಶ ಕಳುಹಿಸಿದ್ದಾರೆ.
ಅಧ್ಯಕ್ಷ ಜರ್ದಾರಿ ಅಲಿ ಮಾತನಾಡಿ‘ ಈ ವರ್ಷದ ಮೇ ತಿಂಗಳಿನಲ್ಲಿ ಬಾಹ್ಯ ಅಕ್ರಮಣದ ನಡುವೆಯೂ ದೇಶ ಗೆದ್ದು ಬೀಗಿದ್ದರಿಂದ ಈ ಸ್ವಾತಂತ್ರ್ಯ ದಿನವನ್ನು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಇದು ಆತ್ಮವಿಶ್ವಾಸ ನೀಡಿದೆ. ಜಾಗತಿಕವಾಗಿ ಸ್ಥಾನಮಾನ ಹೆಚ್ಚಿಸಿದೆ’ ಎಂದರು.
ಷರೀಫ್ ಮಾತನಾಡಿ,‘ ಜಲ ಸಂಪನ್ಮೂಲ ಸೇರಿದಂತೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಜಾಗರೂಕರಾಗಿರುತ್ತೇವೆ. ಜಾಗತಿಕ ಸಮಸ್ಯೆಗಳನ್ನು ಸಂವಾದ ಮತ್ತು ರಾಜತಾಂತ್ರಿ ಕತೆಯ ಮೂಲಕ ಪರಿಹರಿಸುವ ನಂಬಿಕೆಯಿದೆ’ ಎಂದರು.
ದ್ವೇಷಮಾತು ನಿಲ್ಲಿಸಿ : ಪಾಕ್‌ಗೆ ಭಾರತ ಎಚ್ಚರಿಕೆ
ನವದೆಹಲಿ : ಭಾರತದ ವಿರುದ್ಧ ಅಣು ಯುದ್ಧದಂಥ ದ್ವೇಷಪೂರಿತ ಮಾತುಗಳನ್ನಾಡುತ್ತಿರುವ ಪಾಕಿಸ್ತಾನಕ್ಕೆ ಗುರುವಾರ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇಂಥ ದುಸ್ಸಾಹಸವನ್ನು ನಿಲ್ಲಿಸದಿದ್ದರೆ ನೋವಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಭಾರತದ ಮೇಲೆ ಪರಮಾಣು ದಾಳಿ ಮಾಡುವುದಾಗಿ ಪಾಕ್ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಹೇಳಿಕೆ ನೀಡಿದ್ದರು. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಆಗಾಗ ಭಾರತದ ವಿರುದ್ಧ ವಿಷ ಕಾರುತ್ತಲೇ ಇರುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, ‘ಭಾರತದ ವಿರುದ್ಧ ಪಾಕ್ ನಾಯಕತ್ವದಿಂದ ಅಜಾಗರೂಕ, ಯುದ್ಧೋನ್ಮಾದಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನಿರಂತರವಾಗಿ ಕೇಳುತ್ತಿದ್ದೇವೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಭಾರತವಿರೋಧಿ ವಾಕ್ಚಾತುರ್ಯವನ್ನು ಪದೇ ಪದೇ ಪ್ರದರ್ಶಿಸುವುದು ಪಾಕಿಸ್ತಾನದ ಕಾರ್ಯತಂತ್ರವಾಗಿದೆ. ಇಂಥ ಹೇಳಿಕೆಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಇದು ನೋವಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ