
ಢಾಕಾ: ಭಾರತ ವಿರೋಧಿ ಯುವ ಮುಖಂಡ ಉಸ್ಮಾನ್ ಹದಿ ಹ*ತ್ಯೆ ತನಿಖೆ ಎಫ್‌ಬಿಐ ರೀತಿಯ ಪಾರದರ್ಶಕತೆಯಿಂದ ನಡೆಯಬೇಕು ಎಂದು ಇನ್‌ಕಿಲಾಬ್ ಮಂಚ್ ಪಕ್ಷ ಆಗ್ರಹಿಸಿದೆ. ಜತೆಗೆ, ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಪದಚ್ಯುತಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ.
2024ರ ಜುಲೈ ವಿದ್ಯಾರ್ಥಿ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ಇನ್‌ಕಿಲಾಬ್ ಮಂಚ್ ಪಕ್ಷದ ಸಂಸ್ಥಾಪಕ ಉಸ್ಮಾನ್ ಹದಿಯನ್ನು ಹತ್ತಿರದಿಂದ ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಹತ್ಯೆ ಬೆನ್ನಲ್ಲೇ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ಹತ್ಯೆ ಆರೋಪಿಗಳನ್ನು ತಕ್ಷಣ ಬಂಧಿಸಲು ಸಾಧ್ಯವಾಗದಿದ್ದರೆ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಕೆಳಗಿಳಿಸುವುದಾಗಿ ಇನ್‌ಕಿಲಾಬ್ ಮಂಚ್ ಎಚ್ಚರಿಸಿದೆ. ಇದೇ ವೇಳೆ, ಹದಿ ಹತ್ಯೆ ಕುರಿತು ಶೀಘ್ರ ತನಿಖಾ ನ್ಯಾಯಾಧಿಕರಣ ರಚಿಸಬೇಕು, ಪಾರದರ್ಶಕತೆಗಾಗಿ ಎಫ್‌ಬಿಐ ಅಥವಾ ಸ್ಕಾಟ್‌ಲ್ಯಾಂಡ್ ಯಾರ್ಡ್‌ನಂಥ ಅಂತಾರಾಷ್ಟ್ರೀಯ ವೃತ್ತಿಪರ ಏಜೆನ್ಸಿಗಳ ನೆರವು ಪಡೆಯಬೇಕು ಎಂದು ಆಗ್ರಹಿಸಿದೆ.
ಆಂತರಿಕ ಸಂಘರ್ಷ ಭುಗಿಲೆದ್ದಿರುವ ಬಾಂಗ್ಲಾದೇಶದಲ್ಲಿ ಭಾರತವಿರೋಧಿ ಮನಃಸ್ಥಿತಿಗೆ ತುಪ್ಪ ಸುರಿದು, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಸ್ಫೋಟಕ ವಿಚಾರವನ್ನು ಭಾರತದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ.
ಪಾಕ್ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಬೆಂಬಲಿತ ಶಕ್ತಿಗಳು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಅವಾಮಿ ಲೀಗ್ ಪಕ್ಷಕ್ಕೆ ಭಾರತ ಬೆನ್ನೆಲುಬಾಗಿ ನಿಂತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಬಾಂಗ್ಲಾ ನಾಗರಿಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿ, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸುವುದು ಇವರ ಉದ್ದೇಶ. ಕಳೆದ ವರ್ಷ ಹಸೀನಾ ಭಾರತಕ್ಕೆ ಪಲಾಯನಗೈದ ದಿನಗಳಿಂದಲೇ ಐಎಸ್‌ಐ ಈ ಕೆಲಸದಲ್ಲಿ ನಿರತವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.ಈ ಮೂಲಕ ಭಾರತದ ವಿರುದ್ಧ ಇತರ ದೇಶಗಳನ್ನು ಎತ್ತಿಕಟ್ಟಿ ಮೈಕಾಯಿಸಿಕೊಳ್ಳುವ ಪಾಕಿಸ್ತಾನದ ಚಾಳಿ ಮತ್ತೊಮ್ಮೆ ಬಹಿರಂಗವಾಗಿದೆ.
ಢಾಕಾ: ಭಾರತದಲ್ಲಿನ ಬಾಂಗ್ಲಾದೇಶದ ವಿವಿಧ ದೂತವಾಸ ಕಚೇರಿಗಳಿಗೆ ಭದ್ರತೆ ಕಳವಳ ಹಿನ್ನೆಲೆ ಬಾಂಗ್ಲಾದ ವಿದೇಶಾಂಗ ಸಚಿವಾಲಯ ದೇಶದಲ್ಲಿನ ಭಾರತದ ಹೈಕಮಿಷನ್‌ಗೆ ಮಂಗಳವಾರ ಸಮನ್ಸ್ ನೀಡಿದೆ. ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಅಸಾದ್ ಅಲಮ್ ಇಲ್ಲಿ ಭಾರತದ ರಾಯಭಾರಿ ಪ್ರಣಯ್ ವರ್ಮಾಗೆ ನೋಟಿಸ್ ನೀಡಿದ್ದಾರೆ. ಈ ವೇಳೆ ಉಪ ರಾಯಭಾರಿ ಹಾಜರಿದ್ದರು ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಭಾರತದಲ್ಲಿನ ವಿವಿಧ ಬಾಂಗ್ಲಾ ಕಚೇರಿಗಳ ಭದ್ರತೆ ಹೆಚ್ಚಿಸಲು ಭಾರತಕ್ಕೆ ಮನವಿ ಮಾಡಲಾಗಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯ ಹೇಳಿದೆ. ಭದ್ರತೆ ಕಾರಣವಿಟ್ಟು ಬಾಂಗ್ಲಾ ಭಾರತದ ರಾಯಭಾರಿಗೆ ಸಮನ್ಸ್ ನೀಡಿರುವುದು 10 ದಿನಗಳಲ್ಲಿ ಇದು ಎರಡನೆಯದ್ದು. ಇತ್ತ ಭಾರತವೂ ದೆಹಲಿಯಲ್ಲಿರುವ ಬಾಂಗ್ಲಾ ರಾಯಭಾರಿಯನ್ನು ಕರೆದು, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ