- ರಷ್ಯಾ ಅಧ್ಯಕ್ಷರ ಅನಾರೋಗ್ಯ ಕುರಿತು ಮತ್ತಷ್ಟುಗುಸುಗುಸು
- ಹಿರಿಯ ಸೇನಾನಿಗಳೊಂದಿಗೆ ಕಾರ್ಯಕ್ರಮ ವೀಕ್ಷಿಸಿದ ಪುಟಿನ್
- ಪುಟಿನ್ ಹೆಚ್ಚು ಬಳಲಿದ್ದರು ಎನ್ನುತ್ತಿದೆ ವರದಿ
ಮಾಸ್ಕೋ(ಮೇ.11): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪಾರ್ಕಿನ್ಸನ್ ಅಥವಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಸೋಮವಾರ ಇಲ್ಲಿ ನಡೆದ ವಿಜಯೋತ್ಸವ ದಿನ ಕಾರ್ಯಕ್ರಮದ ವೇಳೆ ಪುಟಿನ್ ಕಾಲ ಮೇಲೆ ದಪ್ಪನಾದ ಬ್ಲಾಂಕೆಟ್ ಹಾಕಿಕೊಂಡು ಕುಳಿತಿರುವ ಫೋಟೋಗಳು ಬಹಿರಂಗವಾಗಿದೆ. ಇದು ಪುಟಿನ್ ಆರೋಗ್ಯದ ಕುರಿತು ಮತ್ತಷ್ಟುಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಜಯೋತ್ಸವದ ದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪರೇಡ್ ವೇಳೆ ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಹಿರಿಯ ಸೇನಾನಿಗಳೊಂದಿಗೆ ಕಾರ್ಯಕ್ರಮ ವೀಕ್ಷಿಸಿದ ಪುಟಿನ್, ಈ ವೇಳೆ ತಮ್ಮ ಕಾಲ ಮೇಲೆ ದಪ್ಪನಾದ ಬ್ಲಾಂಕೆಂಟ್ ಅನ್ನು ಇಡೀ ಕಾರ್ಯಕ್ರಮದುದ್ದಕ್ಕೂ ಹಾಕಿಕೊಂಡು ಕುಳಿತಿದ್ದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯರಿಂದ ಪುಟಿನ್ ಹೆಚ್ಚು ಬಳಲಿದಂತೆ ಕಂಡುಬಂದಿತ್ತು ಎಂದು ವರದಿಗಳು ಹೇಳಿವೆ.
ಕಾಲು ಕಳೆದುಕೊಂಡ ಉಕ್ರೇನಿ ಯೋಧರಿಗೆ ಜೈಪುರದ ಕಾಲು!
ಕೆಲ ದಿನಗಳ ಹಿಂದೆ ತಮ್ಮ ದೇಶದ ರಕ್ಷಣಾ ಸಚಿವ ಸೆರ್ಗೇಯ್ ಜೊತೆ ಮಾತುಕತೆ ನಡೆಸುವ ವೇಳೆ ಪುಟಿನ್ ಟೇಬಲ್ ಅನ್ನು ಬಲವಾಗಿ ಹಿಡಿದುಕೊಂಡು ದೃಶ್ಯಗಳು ಕೂಡಾ ವೈರಲ್ ಆಗಿದ್ದವು. ಅದರ ಬೆನ್ನಲ್ಲೇ, ಪುಟಿನ್ ಕ್ಯಾನ್ಸರ್‌ಗೆ ಶೀಘ್ರವೇ ಚಿಕಿತ್ಸೆ ಪಡೆಯಲು ಸಜ್ಜಾಗಿದ್ದಾರೆ. ಹೀಗಾಗಿ ಕೆಲ ದಿನಗಳವರೆಗೆ ಅಧಿಕಾರವನ್ನು ತಮ್ಮ ಆಪ್ತರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿದ್ದವು. ಅದರ ಬೆನ್ನಲ್ಲೇ ಪುಟಿನ್ ಆರೋಗ್ಯದ ಕುರಿತು ಸಾಕಷ್ಟುಅನುಮಾನಗಳನ್ನು ಹುಟ್ಟುಹಾಕುವ ಮತ್ತಷ್ಟುಫೋಟೋಗಳು ಹೊರಬಿದ್ದಿವೆ.
ರಷ್ಯಾ ವಿಜಯೋತ್ಸವ ಆಚರಿಸಿದ ಪುಟಿನ್
ರಷ್ಯಾ ಸೇನೆಯು ಉಕ್ರೇನಿನ ನಿರ್ಣಾಯಕ ಬಂದರು ಮರಿಯುಪೋಲ್ ಅನ್ನು ಬಹುತೇಕ ವಶ ಪಡಿಸಿಕೊಂಡ ಹಿನ್ನೆಲೆಯಲ್ಲಿ ಮಾಸ್ಕೋನಲ್ಲಿ ವಿಜಯದಿನದ ಸಂಭ್ರಮಾಚರಣೆಯ ಭಾಗವಾಗಿ ರಜಾದಿನ ಘೋಷಿಸಲಾಗಿದೆ. ಇದರೊಂದಿಗೆ ರಷ್ಯಾ ಪಡೆ ಉಕ್ರೇನಿನ ಮೇಲೆ ದಾಳಿಯನ್ನು ಇನ್ನಷ್ಟುತೀವ್ರಗೊಳಿಸಿದೆ.
ಸೇನಾ ಪಡೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ‘ಉಕ್ರೇನ್ ರಷ್ಯಾದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ’ ಎಂದು ಮತ್ತೆ ಆರೋಪಿಸಿದ್ದಾರೆ. ಉಕ್ರೇನಿನ ಮೇಲೆ ಯುದ್ಧ ಸಾರಿದ್ದನ್ನು ಸಮರ್ಥಿಸಿಕೊಂಡ ಅವರು, ‘ರಷ್ಯಾದ ಮೇಲೆ ಸಂಕಟ ದಿನೇ ದಿನೇ ಹೆಚ್ಚಾಗುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನ್ಯಾಟೋ ವಿಸ್ತರಣೆಯಾಗುವುದನ್ನು ತಪ್ಪಿಸಲು ರಷ್ಯಾ ಪೂರ್ವಭಾವಿಯಾಗಿ ದಾಳಿ ಮಾಡಿದ್ದು, ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಆಕ್ರಮಣವನ್ನು ಹಿಮ್ಮೆಟ್ಟಿಸಿದೆ’ ಎಂದಿದ್ದಾರೆ.
ಸುಮಾರು 11 ವಾರಗಳ ಸತತ ಯುದ್ಧದ ನಂತರ ಕೊನೆಗೂ ರಷ್ಯಾದ ಸೇನೆಯು ಉಕ್ರೇನಿನ ಪ್ರಮುಖ ವಾಣಿಜ್ಯ ಬಂದರು ಮರಿಯುಪೋಲ್ ಅನ್ನು ಬಹುತೇಕ ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಸುಮಾರು 2000 ಉಕ್ರೇನಿ ಯೋಧರು ತಮ್ಮ ಅಂತಿಮ ಹೋರಾಟದ ಭಾಗವಾಗಿ ರಕ್ಷಿಸುತ್ತಿರುವ ಸ್ಟೀಲ್ ಕಾರ್ಖಾನೆಯ ಮೇಲೆಯೂ ರಷ್ಯಾ ದಾಳಿ ನಡೆಸಿದೆ.
Putin Helath ವ್ಲಾದಿಮಿರ್ ಪುಟಿನ್‌ಗೆ ಕ್ಯಾನ್ಸರ್, ರಹಸ್ಯ ತಾಣದಲ್ಲಿ ಶಸ್ತ್ರಕಿತ್ಸೆಗೆ ತಯಾರಿ
‘ರಷ್ಯಾ ಕ್ರಿಮಿಯಾದಿಂದ ಭೂ ಕಾರಿಡಾರ್ ಸ್ಥಾಪಿಸಲು ಮರಿಯುಪೋಲ್ ವಶ ಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಕ್ಕಿನ ಕಾರ್ಖಾನೆಯ ಮೇಲೆ ಇನ್ನಷ್ಟುಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಗಳಿವೆ. ಉಕ್ರೇನಿನಿಂದ ಪಲಾಯನ ಮಾಡಿದ ಜನರು ತಂಗಿದ್ದ ರಷ್ಯಾ ನಿಯಂತ್ರಿತ ಪ್ರದೇಶ ಝಪೊರಿಝಿಯಾದಲ್ಲಿ ಸ್ಥಳೀಯ ಜನರ ವೈಯಕ್ತಿಕ ದಾಖಲೆಯನ್ನು ರಷ್ಯಾದ ಯೋಧರು ಅನುಚಿತ ಉದ್ದೇಶದಿಂದ ಸಂಗ್ರಹಿಸುತ್ತಿದ್ದಾರೆ. ವೈಯಕ್ತಿಕ ದಾಖಲೆಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಮೂಲಕ ಅವರನ್ನು ರಷ್ಯಾ ವಿಜಯದಿನದ ಆಚರಣೆಯಲ್ಲಿ ಪಾಲ್ಗೊಳ್ಳುನಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಉಕ್ರೇನಿನ ಸೇನಾಧಿಕಾರಿ ತಿಳಿಸಿದ್ದಾರೆ.
ಈ ವಿಜಯೋತ್ಸವ ಆಚರಣೆಯ ವಿರುದ್ಧ ಕಿಡಿಕಾರಿದ ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ, ಹೊಸ ದಾಳಿ ಎದುರಿಸಲು ಸಜ್ಜಾಗುವಂತೆ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ. ಅದೇ ಅಮೆರಿಕದ ರಾಯಭಾರಿ ಲಿಂಡಾಥೋಮಸ್ ಗ್ರೀನ್‌ಫೀಲ್ಡ್, ‘ರಷ್ಯಾಗೆ ಇನ್ನೂ ಉಕ್ರೇನ್ ಅನ್ನು ಮಣಿಸಲು ಸಾಧ್ಯವಾಗಲಿಲ್ಲ. ಅಲ್ಲದೇ ನ್ಯಾಟೋ ರಾಷ್ಟ್ರಗಳ ಒಗ್ಗಟ್ಟಿಗೆ ಭಂಗ ತರಲು ಸಾಧ್ಯವಾಗಲಿಲ್ಲ. ಅವರು ಜಾಗತಿಕವಾಗಿ ತಮ್ಮನ್ನು ಏಕಾಂಗಿಯಾಗಿಸಿಕೊಳ್ಳುವಲ್ಲಿ ಮಾತ್ರ ಸಫಲರಾಗಿದ್ದಾರೆ. ಇಲ್ಲಿ ಸಂಭ್ರಮಾಚರಣೆ ಮಾಡುವಂತಹದ್ದು ಏನೂ ಇಲ್ಲ’ ಎಂದಿದ್ದಾರೆ.