
ಹಲವು ದೇಶಗಳಲ್ಲಿ ಕಾಡು ಪ್ರಾಣಿಗಳನ್ನು ಸಾಕು ಪ್ರಾಣಿಗಳಂತೆ ಸಾಕಲು ಅವಕಾಶವಿದೆ. ಇದನ್ನೇ ಕೆಲ ದೇಶಗಳು ಪ್ರವಾಸೋದ್ಯಮವಾಗಿಸಿಕೊಂಡಿವೆ. ಸಿಂಹ ಹುಲಿ, ಚಿರತೆ, ಹಾವು ಮುಂತಾದವುಗಳನ್ನು ನಾವು ಬೆಕ್ಕು ನಾಯಿಗಳನ್ನು ಮನೆಯಲ್ಲಿ ಸಾಕಿದಂತೆ ಜನ ಕೆಲ ದೇಶಗಳಲ್ಲಿ ಸಾಕುತ್ತಿದ್ದು, ಪ್ರವಾಸಿಗರಿಗೆ ಅವುಗಳನ್ನು ಮುಟ್ಟುವ ಮುದ್ದಾಡುವ ಅವಕಾಶ ನೀಡುತ್ತಾರೆ. ಈ ಮೂಲಕ ಹಣ ಮಾಡುತ್ತಾರೆ. ಅನೇಕರು ಇಂತಹ ಸಾಕುಪ್ರಾಣಿಯಾಗಿ ಬದಲಾಗಿರುವ ಕಾಡುಪ್ರಾಣಿಗಳ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದನ್ನು ಕೂಡ ನೀವು ನೋಡಿದ್ದೀರಿ. ಆದರೆ ಇಲ್ಲೊಂದು ಕಡೆ ಹೀಗೆ ಸಾಕಿದ ಕಾಡುಪ್ರಾಣಿಯೊಂದು ತನ್ನ ಮುದ್ದಾಡಲು ಬಂದ ವ್ಯಕ್ತಿಯ ಮೇಲೆ ಭೀಕರವಾಗಿ ದಾಳಿ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ದಿಗ್ಬ್ರಮೆ ವ್ಯಕ್ತಪಡಿಸುತ್ತಿದ್ದಾರೆ.
ಪಾಕಿಸ್ತಾನ ಮೂಲದ ಕಂಟೆಂಟ್ ಕ್ರಿಯೇಟರ್ ಮಿಯಾನ್ ಅಝರ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇವರ ಇನ್ಸ್ಟಾ ಖಾತೆಯಲ್ಲಿ ಪ್ರಾಣಿಗಳ ಜೊತೆಗಿನ ಹಲವು ವೀಡಿಯೋಗಳಿವೆ. ವೀಡಿಯೋದಲ್ಲಿ ಕಾಣಿಸುವಂತೆ ಸಿಂಹವನ್ನು ಇರಿಸಲಾಗಿರುವ ಕಬ್ಬಿಣದ ನೆಟ್‌ನ ಗೂಡಿನ ಒಳಗೆ ಇಬ್ಬರು ಯುವಕರಿದ್ದು, ಅವರಲ್ಲೊಬ್ಬನ ಕಾಲನ್ನು ಸಿಂಹವೂ ಗಟ್ಟಿಯಾಗಿ ತನ್ನೆರಡು ಮುಂಗಾಲಿನಲ್ಲಿ ಹಿಡಿದುಕೊಂಡಿದೆ. ಈ ವೇಳೆ ಆತನ ಜೊತೆಗೆ ಇದ್ದ ಮತ್ತೊರ್ವ ಯುವಕ ಆತನನ್ನು ಸಿಂಹದ ಬಾಯಿಯಿಂದ ಬಿಡಿಸಲು ಶತ ಪ್ರಯತ್ನ ಮಾಡುತ್ತಾನೆ. ಸಿಂಹಕ್ಕೆ ತನ್ನ ಕೈಯಲ್ಲಿದ್ದ ಕೋಲೊಂದರಿಂದ ಸರಿಯಾಗಿ ಹೊಡೆದಿದ್ದಾನೆ. ಈ ವೇಳೆ ಆತ ಅದು ನನಗೆ ಕಚ್ಚಿತ್ತು ಅದು ನನಗೆ ಕಚ್ಚಿತ್ತು ಎಂದು ಬೊಬ್ಬೆ ಹೊಡೆಯುವುದು ವೀಡಿಯೋದಲ್ಲಿ ಕೇಳಿ ಬರುತ್ತಿದೆ. ಆದರೆ ಸಿಂಹ ಮಾತ್ರ ಹಲವು ನಿಮಿಷಗಳ ಕಾಲ ಆತನಿಗೆ ಜೀವ ಬಾಯಿಗೆ ಬರುವಂತೆ ಮಾಡಿದೆ. ಆತ ತನ್ನನ್ನು ಬಿಡಿಸಿಕೊಳ್ಳಲು ಯತ್ನಿಸಿದಷ್ಟು, ಸಿಂಹ ತನ್ನ ಹಿಡಿತ ಬಿಗಿಗೊಳಿಸಿದೆ. ಕಡೆಗೂ ಆತನ ಜೊತೆಯಲ್ಲಿದ್ದವನ ಸಹಾಯದಿಂದ ಹಲವು ನಿಮಿಷಗಳ ಹೋರಾಟದ ಬಳಿಕ ಸಿಂಹ ತನ್ನ ಹಿಡಿತ ಸಡಿಲಗೊಳಿಸಿ ಆತನನ್ನು ಬಿಡುಗಡೆ ಮಾಡಿದೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು 40 ಮಿಲಿಯನ್ ಜನ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಇಂತಹ ಅನಾಹುತವನ್ನು ತಡೆಯುವುದಕ್ಕಾಗಿ ಈ ವೀಡಿಯೋ ಬಗ್ಗೆ ರಿಪೋರ್ಟ್ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಪ್ರಾಣಿ ಹಿಂಸೆಯಾಗಿದೆ ಇದನ್ನು ತಡೆಯಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೊದಲಿಗೆ ಆತನನ್ನು(ಸಿಂಹವನ್ನು) ಬಂಧಿಸಿ ಗೂಡಿನಲ್ಲಿರಿಸುತ್ತಿರಿ ನಂತರ ಆತನ ಕೆಣಕಿ ಹಿಂಸೆ ನೀಡುತ್ತೀರಿ, ಆತ ಪ್ರತಿರೋಧವೊಡ್ಡಿದಾಗ ಸಂತ್ರಸ್ತರಂತೆ ಆಡಲು ಶುರು ಮಾಡಿ ಮತ್ತೆ ಆತನಿಗೆ ಟಾರ್ಚರ್ ನೀಡುತ್ತೀರಿ, ಇಂತಹ ಹಿಂಸೆಯ ಕರ್ಮಗಳಿಗೆ ಸ್ವಲ್ಪ ದಿನದಲ್ಲೇ ನಿಮಗೆ ಪ್ರತಿಫಲ ಸಿಗುವುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾಡುಪ್ರಾಣಿಗಳು ಸಾಕುಪ್ರಾಣಿಗಳಲ್ಲ, ಅವರಿಗೆ ಅವರದೇ ಸ್ವಾತಂತ್ರ ನೀಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೇ ತಿಂಗಳಲ್ಲಿ ಪಾಕಿಸ್ತಾನದ ಮತ್ತೊರ್ವ ಕಂಟೆಂಟ್ ಕ್ರಿಯೇಟರ್ ನೌಮನ್ ಹಸನ್ ಅವರು ಇಂತಹದೇ ವೀಡಿಯೋವೊಂದನ್ನು ಪೋಸ್ಟ್ ಮಾಡಿದ ನಂತರ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರು. ಆ ವೀಡಿಯೋದಲ್ಲಿ ಮುದ್ದು ಮಾಡಲು ಯತ್ನಿಸಿದ ವ್ಯಕ್ತಿಯ ಮೇಲೆ ಚಿರತೆಯೊಂದು ದಾಳಿ ಮಾಡಿತ್ತು. ಆತನ ಮುಖದ ಮೇಲೆ ತನ್ನ ಕೈಗಳಿಂದ ಹೊಡೆದು ಗುರುಗುಡಲು ಶುರು ಮಾಡಿತ್ತು.
ಕಾಡುಪ್ರಾಣಿಗಳನ್ನು ಭಾರತದಲ್ಲಿ ಮನೆಯಲ್ಲಿ ಸಾಕಲು ಯಾವುದೇ ಅವಕಾಶವಿಲ್ಲ. ಆದರೆ ಥೈಲ್ಯಾಂಡ್, ಮಲೇಷ್ಯಾ, ಆಫ್ರಿಕಾ ಹಾಗೂ ಕೆಲ ಗಲ್ಫ್ ರಾಷ್ಟ್ರಗಳಲ್ಲಿ ಕಾಡುಪ್ರಾಣಿಗಳನ್ನು ಸಾಕುಪ್ರಾಣಿಗಳಂತೆ ಕೆಲವರು ಸಾಕುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ