ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

Published : Dec 19, 2025, 11:14 AM ISTUpdated : Dec 19, 2025, 12:13 PM IST
Massive Protests Grip Bangladesh

ಸಾರಾಂಶ

ತೀವ್ರಗಾಮಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಹತ್ಯೆಯ ನಂತರ ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಢಾಕಾ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಮಾಧ್ಯಮ ಸಂಸ್ಥೆಗಳು ಮತ್ತು ರಾಜಕೀಯ ಕಚೇರಿಗಳಿಗೆ ಬೆಂಕಿ ಹಚ್ಚಿದ್ದು, ಆ ದೇಶದಲ್ಲಿ ಭಾರತ ವಿರೋಧಿ ಭಾವನೆಗಳು ತೀವ್ರಗೊಂಡಿವೆ.

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿನ ತೀವ್ರಗಾಮಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಸಾವಿನ ವಿಚಾರ ತಿಳಿದ ನಂತರ ರಾತ್ರೋರಾತ್ರಿ ಬಾಂಗ್ಲಾದೇಶದ ಹಲವಾರು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಷರೀಫ್ ಉಸ್ಮಾನ್ ಹಾದಿ ತೀವ್ರವಾದ ಭಾರತ ವಿರೋಧಿ ಪ್ರಚೋದನಕಾರಿ ಭಾಷಣಗಳಿಗೆ ಹೆಸರಾಗಿದ್ದ. 32 ವರ್ಷದ ಹಾದಿಯು, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾಗಿದ್ದ ಬಾಂಗ್ಲಾದೇಶದ 2024 ರ ವಿದ್ಯಾರ್ಥಿ ದಂಗೆಯ ಸಮಯದಲ್ಲಿ ಸಾಕಷ್ಟು ಪ್ರಾಮುಖ್ಯತೆ ಗಳಿಸಿದ್ದ.

ಬಾಂಗ್ಲಾದೇಶದ ಇಂಕ್ವಿಲಾಬ್ ಮಂಚ ವೇದಿಕೆಯ ವಕ್ತಾರನಾಗಿದ್ದ ಹಾಗೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಓರ್ವ ಪ್ರಮುಖ ಅಭ್ಯರ್ಥಿ ಎನಿಸಿದ್ದ ಷರೀಫ್ ಉಸ್ಮಾನ್ ಹಾದಿಯ ಮೇಲೆ ಕಳೆದ ಶುಕ್ರವಾರ ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಮುಸುಕುಧಾರಿಗಳು ಗುಂಡು ಹಾರಿಸಿದ್ದರು. ಗಾಯಗೊಂಡಿದ್ದ ಆತನನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಈತನ ಸಾವಿನ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಆತನ ಬೆಂಬಲಿಗರು, ಯುವ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ.

 

 

ತೀವ್ರಗಾಮಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಆತನ ಹತ್ಯೆ ಮಾಡಿದ ಹಂತಕರನ್ನು ಬಂಧಿಸಬೇಕೆಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಢಾಕಾ ಮತ್ತು ಇತರ ನಗರಗಳ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕುಪಿತಗೊಂಡ ಪ್ರತಿಭಟನಾಕಾರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಇರುವ ದೇಶದ ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳಾದ ದಿ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ಸೇರಿದಂತೆ ಹಲವಾರು ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಪತ್ರಿಕಾ ಸಿಬ್ಬಂದಿ ಒಳಗೆ ಸಿಲುಕಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಷರೀಫ್ ಉಸ್ಮಾನ್ ಹಾದಿಯವರ ಹೆಸರನ್ನು ಕೂಗುತ್ತಾ ಜನ ಭಾವುಕರಾಗಿ ಬೀದಿಗಿಳಿದಿದ್ದು, ಆತನ ಮೇಲೆ ದಾಳಿ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ. ಬಾಂಗ್ಲಾದೇಶದ ಹಲವಾರು ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ಉದ್ವಿಗ್ನತೆ ಮುಂದುವರಿದಿದೆ. ಹೆಚ್ಚಿನ ಹಿಂಸಾಚಾರವನ್ನು ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಪೊಲೀಸರು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಡೈಲಿ ಸ್ಟಾರ್‌ನಲ್ಲಿ ಬೆಂಕಿ ನಿಯಂತ್ರಣದಲ್ಲಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.

 

 

ಬಂದರು ನಗರ ಚಿತ್ತಗಾಂಗ್ ಸೇರಿದಂತೆ ಬಾಂಗ್ಲಾದೇಶದಾದ್ಯಂತ ಹಲವಾರು ಇತರ ನಗರಗಳಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ. ಅಲ್ಲಿ ಪ್ರತಿಭಟನಾಕಾರರು ಭಾರತೀಯ ಸಹಾಯಕ ಹೈಕಮಿಷನ್ ಹೊರಗೆ ಜಮಾಯಿಸಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ರಾಜ್‌ಶಾಹಿಯಲ್ಲಿ, ಪ್ರತಿಭಟನಾಕಾರರು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ನಿವಾಸ ಮತ್ತು ಅವಾಮಿ ಲೀಗ್ ಕಚೇರಿಗೆ ಬೆಂಕಿ ಹಚ್ಚಿದ್ದರಿಂದ ವ್ಯಾಪಕ ಹಾನಿಯಾಗಿದೆ.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಭಾವನೆ

ಈ ವಾರದ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ನಡೆದಿವೆ. ಹಸೀನಾ ದೆಹಲಿಗೆ ಪಲಾಯನ ಮಾಡಿದ ನಂತರ ಎರಡು ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ. ಬುಧವಾರ ಜುಲೈ ಓಯಕ್ಯ (ಜುಲೈ ಏಕತೆ) ಹೆಸರಿನ ಬ್ಯಾನರ್ ಅಡಿಯಲ್ಲಿ ನೂರಾರು ಪ್ರತಿಭಟನಾಕಾರರು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಕಡೆಗೆ ಮೆರವಣಿಗೆ ನಡೆಸಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ಶೇಕ್ ಹಸೀನಾ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!

ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೂ ಇತ್ತೀಚೆಗೆ ಬೆದರಿಕೆಗಳು ಬಂದಿವೆ. ಬಾಂಗ್ಲಾದೇಶದ ರಾಜಕೀಯ ನಾಯಕರು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆ ಇದಕ್ಕೆ ಔಪಚಾರಿಕವಾಗಿ ರಾಜತಾಂತ್ರಿಕ ವಿರೋಧ ವ್ಯಕ್ತಪಡಿಸಲು ಭಾರತವು ನವದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮಿಷನರ್ ಮುಹಮ್ಮದ್ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿತು. ಬಾಂಗ್ಲಾದೇಶದ ರಾಷ್ಟ್ರೀಯ ನಾಗರಿಕ ಪಕ್ಷದ (ಎನ್‌ಸಿಪಿ) ನಾಯಕರೊಬ್ಬರು ಢಾಕಾವೂ ದೆಹಲಿಗೆ ಪ್ರತಿಕೂಲವಾದ ಪಡೆಗಳಿಗೆ ಆಶ್ರಯ ನೀಡುವುದು ಹಾಗೂ ಭಾರತದ ಸೆವೆನ್ ಸಿಸ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವುಕ್ಕೆ ಸಹಾಯ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಾದ ನಂತರ ಭಾರತವೂ ಬಾಂಗ್ಲಾದೇಶದ ರಾಜತಾಂತ್ರಿಕನನ್ನು ಕರೆಸಿ ವಿರೋಧ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: 56 ಸಾವಿರ ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
Epstein Sex Scandal: 68 ಹೊಸ ಫೋಟೋ ರಿಲೀಸ್‌, ಮಹಿಳೆಯರ ಜೊತೆ ಬಿಲ್‌ಗೇಟ್ಸ್‌, ಸೆರ್ಗಿ ಬ್ರಿನ್‌!