ಡೆನ್ಮಾರ್ಕ್‌ ವಶದಲ್ಲಿರುವ ಗ್ರೀನ್‌ಲ್ಯಾಂಡ್‌ ಅಮೆರಿಕ ವಶ, ವಿಶ್ವಸಂಸ್ಥೆಯಲ್ಲಿ ಸೇನಾ ಒಪ್ಪಂದಕ್ಕೆ ಟ್ರಂಪ್ ಸಹಿ

Published : Sep 23, 2026, 09:26 AM IST
Greenland

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ನೆಲೆ ಸ್ಥಾಪಿಸಲು ಡೆನ್ಮಾರ್ಕ್‌ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಪ್ರಭಾವವನ್ನು ತಡೆಯಲು ಅಮೆರಿಕ ಮುಂದಾಗಿದೆ. ಅಲ್ಲದೆ, ಗ್ರೀನ್‌ಲ್ಯಾಂಡ್‌ನ ಅಪರೂಪದ ಖನಿಜ ಮತ್ತು ತೈಲ ಸಂಪತ್ತಿನ ಮೇಲೆ ಅಮೆರಿಕ ಕಣ್ಣಿಟ್ಟಿದೆ.

ನ್ಯೂಯಾರ್ಕ್: ಡೆನ್ಮಾರ್ಕ್‌ ವ್ಯಾಪ್ತಿಯಲ್ಲಿ ಬರುವ ಅರೆಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಯತ್ನದಲ್ಲಿ ವಿಫಲರಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೊನೆಗೂ ಅದರೊಂದಿಗೆ ಸೇನಾ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಸೇನಾ ನೆಲೆ ಸ್ಥಾಪಿಸುವ ಕುರಿತು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಅರ್ಟಿಕ್‌ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಪ್ರಭಾವ ತಡೆಯುವ ದೊಡ್ಡ ಯತ್ನಕ್ಕೆ ಅಮೆರಿಕ ಕೈ ಹಾಕಿದ್ದು, ಇದು ಮತ್ತೊಂದು ಮೂರೂ ದೇಶಗಳ ನಡುವೆ ಸಮರಕ್ಕೆ ಮುನ್ನುಡಿ ಬರೆಯಲಿದೆ ಎಂದು ಹೇಳಲಾಗಿದೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಒಪ್ಪಂದ ನಡೆದಿದೆ. ಹಿಮಾವೃತ ಬೃಹತ್ ದ್ವೀಪವಾದ ಗ್ರೀನ್‌ಲ್ಯಾಂಡ್‌ ಮೇಲಿನ ಸಾರ್ವಭೌಮ ಅಧಿಕಾರವನ್ನು ಡೆನ್ಮಾರ್ಕ್ ಬಳಿಯೇ ಕಾಯ್ದುಕೊಂಡು, ಅಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಲು ಈ ಒಪ್ಪಂದಲ್ಲಿ ಉಲ್ಲೇಖ ಮಾಡಲಾಗಿದೆ. ಭವಿಷ್ಯದಲ್ಲಿ ಗ್ರೀನ್‌ಲ್ಯಾಂಡ್‌ ಡೆನ್ಮಾರ್ಕ್‌ನಿಂದ ಬೇರ್ಪಟ್ಟು ಸ್ವತಂತ್ರ ದೇಶವಾದರೂ, ಈ ಭದ್ರತಾ ಷರತ್ತುಗಳು ಜಾರಿಯಲ್ಲಿರಲಿವೆ. ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮಾತನಾಡಿದ ಟ್ರಂಪ್, "ಇದು ಯುರೋಪ್, ಅಮೆರಿಕ ಸೇರಿದಂತೆ ಎಲ್ಲರಿಗೂ ಅತ್ಯಂತ ಸಂತಸದ ವಿಷಯ. ಅದರಲ್ಲೂ ಗ್ರೀನ್‌ಲ್ಯಾಂಡ್‌ಗೆ ಇದು ಅದ್ಭುತವಾದ ಅವಕಾಶವಾಗಲಿದೆ," ಎಂದರು.

ಏನಿದು ಯೋಜನೆ?:

ಪ್ರಸ್ತಾವಿತ ಒಪ್ಪಂದ ಅನ್ವಯ ಅಂದಾಜು 56000 ಜನಸಂಖ್ಯೆಯ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ತನ್ನ ಸೇನಾ ನೆಲೆ ಸ್ಥಾಪಿಸಲಿದೆ. ಈ ಸಂಬಂಧ ಅಮೆರಿಕ, ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಬಳಿಕ ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ರಕ್ಷಣೆಯ ಹೊಣೆಯನ್ನು ಅಮೆರಿಕ ಸರ್ಕಾರ ಹೊತ್ತುಕೊಳ್ಳಲಿದೆ. ಅಲ್ಲದೆ ನ್ಯಾಟೋಯೇತರ ದೇಶಗಳು ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ನೆಲೆ ಹೊಂದುವುದಕ್ಕೆ ನಿಷೇಧ ಜಾರಿಗೆ ಬರಲಿದೆ. ಅಂದರೆ ಅಲ್ಲಿ ರಷ್ಯಾ ಮತ್ತು ಚೀನಾ ದೇಶಗಳು ತಮ್ಮ ಸೇನಾ ನೆಲೆ ಹೊಂದುವುದನ್ನು ಒಪ್ಪಂದ ನಿಷೇಧಿಸಲಿದೆ. ಉಳಿದಂತೆ ಗ್ರೀನ್‌ಲ್ಯಾಂಡ್‌ ಮೇಲಿನ ಡೆನ್ಮಾರ್ಕ್‌ನ ಉಳಿದ ಎಲ್ಲಾ ಹಕ್ಕುಗಳು ಅದರ ಬಳಿಯೇ ಉಳಿಯಲಿದೆ.

ಅಮೆರಿಕ ಉದ್ದೇಶವೇನು?

ಗ್ರೀನ್‌ಲ್ಯಾಂಡ್‌ನಲ್ಲಿ ಭಾರೀ ಪ್ರಮಾಣದ ರೇರ್‌ ಅರ್ಥ್‌ ಮೆಟಿರಿಯಲ್ಸ್‌, ಅಪರೂಪದ ಖನಿಜ ಮತ್ತು ತೈಲ ಸಂಪತ್ತು ಇದೆ. ಇದರ ಮೇಲೆ ಅಮೆರಿಕ ಕಣ್ಣಿಟ್ಟಿದೆ. ಅಲ್ಲದೆ ಗ್ರೀನ್‌ಲ್ಯಾಂಡಲ್ಲಿ ವೈರಿ ದೇಶಗಳಾದ ರಷ್ಯಾ, ಚೀನಾದ ಪ್ರಭಾವ ಇದೆ. ಇದಕ್ಕೆ ಕಡಿವಾಣಕ್ಕೆ ಹಾಕಲು ಅಮೆರಿಕ ಯತ್ನಿಸುತ್ತಿದೆ.

ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಹಿನ್ನೆಲೆ

2019 ರಿಂದಲೂ ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದ ಟ್ರಂಪ್, ತಮ್ಮ ಎರಡನೇ ಅವಧಿಯಲ್ಲಿ NATO ಮಿತ್ರರಾಷ್ಟ್ರವಾದ ಡೆನ್ಮಾರ್ಕ್‌ನಿಂದ ಈ ಅರೆಸ್ವಾಯತ್ತ ಪ್ರದೇಶವನ್ನು ವಶಕ್ಕೆ ಪಡೆಯುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಒಪ್ಪಂದದ ನಂತರ ಗ್ರೀನ್‌ಲ್ಯಾಂಡ್‌ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ನೇರ ಉತ್ತರ ನೀಡಲಿಲ್ಲ.

ಆರ್ಕ್ಟಿಕ್ ಪ್ರದೇಶದಲ್ಲಿ ಅಮೆರಿಕದ ಭದ್ರತಾ ಕಾಳಜಿಗಳನ್ನು ಪರಿಹರಿಸಲು ಅಮೆರಿಕ, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ ಅಧಿಕಾರಿಗಳು ತಿಂಗಳುಗಟ್ಟಲೆ ತೆರೆಮರೆಯಲ್ಲಿ ಸತತ ಮಾತುಕತೆ ನಡೆಸಿದ್ದರು. ಟ್ರಂಪ್ ಅವರ ತೀವ್ರ ನಿಲುವುಗಳು NATO ಒಕ್ಕೂಟದೊಳಗೆ ಉದ್ವಿಗ್ನತೆಯನ್ನು ಹೆಚ್ಚಿಸಿದ್ದವು. ಅಮೆರಿಕದ ಬಲವಂತದ ಸ್ವಾಧೀನವು 'ಅಟ್ಲಾಂಟಿಕ್ ಒಕ್ಕೂಟದ ಅಂತ್ಯ'ಕ್ಕೆ ಹಾದಿಮಾಡಿಕೊಡುತ್ತದೆ ಎಂದು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಈ ಹಿಂದೆ ಎಚ್ಚರಿಸಿದ್ದರು.

ಈ ರಾಜತಾಂತ್ರಿಕ ಬಿಕ್ಕಟ್ಟು ಗ್ರೀನ್‌ಲ್ಯಾಂಡ್‌ ನ ಸುಮಾರು 56,000 ಜನಸಂಖ್ಯೆಯಲ್ಲಿ ತೀವ್ರ ಆತಂಕ ಮೂಡಿಸಿತ್ತು. ಅಲ್ಲದೆ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ (EU) ದೇಶಗಳ ನಡುವೆಯೂ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು. ಆರ್ಕ್ಟಿಕ್ ವೃತ್ತದೊಳಗೆ ಮಂಜುಗಡ್ಡೆ ಕರಗುತ್ತಿರುವುದರಿಂದ ಹೊಸ ನೌಕಾ ಸಂಚಾರ ಮಾರ್ಗಗಳು ತೆರೆದುಕೊಂಡಿದ್ದು, ವ್ಯಾಪಾರ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಶೋಷಣೆಯ ಕುರಿತು ಆತಂಕ ಹೆಚ್ಚಾಗಿತ್ತು.

ಮಿಲಿಟರಿ ಉಪಸ್ಥಿತಿ ಮತ್ತು ಒಪ್ಪಂದದ ಪ್ರಮುಖಾಂಶಗಳು

ಗ್ರೀನ್‌ಲ್ಯಾಂಡ್‌ ನಲ್ಲಿ ಅಮೆರಿಕ ದಶಕಗಳಿಂದಲೂ ಸೈನಿಕ ಅಸ್ತಿತ್ವವನ್ನು ಹೊಂದಿದೆ. 1945 ರಲ್ಲಿ 17 ಮಿಲಿಟರಿ ನೆಲೆಗಳು ಹಾಗೂ ಸಾವಿರಾರು ಸೈನಿಕರಿದ್ದ ಸ್ಥಿತಿಯಿಂದ, ಪ್ರಸ್ತುತ ವಾಯುವ್ಯದ ಪಿಟುಫಿಕ್ (Pituffik) ಬಾಹ್ಯಾಕಾಶ ನೆಲೆಯಲ್ಲಿ ಕೇವಲ 200 ಸೈನಿಕರಿಗೆ ಸೇನೆ ಸೀಮಿತವಾಗಿದೆ. ಈ ನೆಲೆಯು ಅಮೆರಿಕ ಹಾಗೂ NATOಗೆ ಕ್ಷಿಪಣಿ ಎಚ್ಚರಿಕೆ, ಕ್ಷಿಪಣಿ ರಕ್ಷಣೆ ಮತ್ತು ಬಾಹ್ಯಾಕಾಶ ಕಣ್ಗಾವಲು ಕಾರ್ಯಾಚರಣೆಗಳಲ್ಲಿ ಅತ್ಯಂತ ನಿರ್ಣಾಯಕವಾಗಿದೆ.

"ಅಮೆರಿಕ ತಕ್ಷಣವೇ ಸೂಕ್ತ ಸ್ಥಳಗಳಲ್ಲಿ ಎರಡು ಪ್ರಮುಖ ಮಿಲಿಟರಿ ನೆಲೆಗಳನ್ನು ನಿರ್ಮಿಸುವುದು ಸೇರಿದಂತೆ ತನ್ನ ಸೇನಾ ಉಪಸ್ಥಿತಿಯನ್ನು ವ್ಯಾಪಕವಾಗಿ ಹೆಚ್ಚಿಸಲಿದೆ," ಎಂದು ವಿಶ್ವಸಂಸ್ಥೆಯ ಸಭೆಯಲ್ಲಿ ಟ್ರಂಪ್ ಸ್ಪಷ್ಟಪಡಿಸಿದರು. ಡೆನ್ಮಾರ್ಕ್ ಸಂಸತ್ತು ಕಳೆದ ವರ್ಷ ಅಮೆರಿಕ ಪಡೆಗಳಿಗೆ ತನ್ನ ವಾಯುನೆಲೆಗಳಿಗೆ ವ್ಯಾಪಕ ಪ್ರವೇಶ ನೀಡುವ ಮಸೂದೆಯನ್ನು ಅಂಗೀಕರಿಸಿತ್ತು.

ರಷ್ಯಾ ಅಥವಾ ಚೀನಾದ ಪ್ರಾಬಲ್ಯವನ್ನು ತಡೆಯಲು ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವುದು ಅಗತ್ಯ ಎಂದು ಟ್ರಂಪ್ ಈ ಹಿಂದೆ ಪ್ರತಿಪಾದಿಸಿದ್ದರು. ಇದೀಗ ನೂತನ ಒಪ್ಪಂದದ ಪ್ರಕಾರ, ಅಮೆರಿಕಕ್ಕೆ ಪಿಟುಫಿಕ್‌ನಲ್ಲಿ ತನ್ನ ಚಟುವಟಿಕೆಗಳನ್ನು ನವೀಕರಿಸಲು ಮತ್ತು ವಿಸ್ತರಿಸಲು ಅಧಿಕಾರ ಸಿಕ್ಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20 ವರ್ಷ ವೈದ್ಯೆ; ಈಗ ಬನ್ ಅಂಗಡಿ ಮಾಲಕಿ! ‘ಡಾಕ್ಟರ್ ಆಗಿದ್ದಾಗಿಗಿಂತ ಈಗ ಹೆಚ್ಚು ಖುಷಿಯಾಗಿದ್ದೇನೆ ಎಂದಿದ್ದೇಕೆ?’
CNN ಗೆ ಸೆಡ್ಡು: ಅಮೆರಿಕ ಅಧ್ಯಕ್ಷರ ಟ್ರಂಪ್‌ ಟೀವಿ ಶುರು! ತಮ್ಮ ಕಾರ್‍ಯಕ್ರಮ ಪ್ರಸಾರ ಮಾಡದ್ದಕ್ಕೆ ಕಿಡಿ!