ರಷ್ಯಾ, ಚೀನಾಗೆ ಸಡ್ಡು: ಅಣ್ವಸ್ತ್ರ ಪರೀಕ್ಷೆಗೆ ಅಮೆರಿಕ ಸಿದ್ಧತೆ?

By Kannadaprabha NewsFirst Published May 24, 2020, 8:20 AM IST
Highlights

ಅಣ್ವಸ್ತ್ರ ಪರೀಕ್ಷೆಗೆ ಅಮೆರಿಕ ಸಿದ್ಧತೆ?| ಅಧಿಕಾರಿಗಳ ಜತೆ ಟ್ರಂಪ್‌ ಮಾತುಕತೆಯಿಂದ ಸಂಚಲನ| ರಷ್ಯಾ, ಚೀನಾಕ್ಕೆ ಸಡ್ಡು ಹೊಡೆಯಲು ಸಜ್ಜಾದ ಅಮೆರಿಕ

ವಾಷಿಂಗ್ಟನ್(ಮೇ.24):  ರಷ್ಯಾ ಹಾಗೂ ಚೀನಾಕ್ಕೆ ನೇರ ಎಚ್ಚರಿಕೆ ನೀಡಲು 28 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ ಚರ್ಚೆ ಮಾಡಿದೆ ಎಂಬ ಸುದ್ದಿ ಜಾಗತಿಕವಾಗಿ ಸಂಚಲನಕ್ಕೆ ಕಾರಣವಾಗಿದೆ. ಪರಸ್ಪರ ನಿಶ್ಶಸ್ತ್ರ ವೈಮಾನಿಕ ಕಣ್ಗಾವಲಿಗೆ 34 ದೇಶಗಳು ಮಾಡಿಕೊಂಡಿರುವ ವಾಯುಸೀಮೆ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಅಮೆರಿಕ ಘೋಷಿಸಿದ, ಆ ನಡವಳಿಕೆ ಶೀತಲ ಸಮರದ ಮನಸ್ಥಿತಿ ಎಂದು ಚೀನಾ ದೂಷಿಸಿದ ಬೆನ್ನಲ್ಲೇ ಅಣ್ವಸ್ತ್ರ ಪರೀಕ್ಷೆ ಕುರಿತ ಸುದ್ದಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಚೀನಾದಿಂದ ರಹಸ್ಯ ಪರಮಾಣು ಅಸ್ತ್ರ ಪರೀಕ್ಷೆ?

ರಷ್ಯಾ ಹಾಗೂ ಚೀನಾಗಳು ಕಡಿಮೆ ತೀವ್ರತೆಯ ಅಣ್ವಸ್ತ್ರ ಪರೀಕ್ಷೆ ನಡೆಸಿವೆ ಎಂದು ಅಮೆರಿಕದ ಅಧಿಕಾರಿಗಳು ದೂರುತ್ತಲೇ ಬಂದಿದ್ದಾರೆ. ಮೇ 15ರಂದು ನಡೆದ ಸಭೆಯಲ್ಲಿ ಅಮೆರಿಕ ಕೂಡ ಅಣ್ವಸ್ತ್ರ ಪರೀಕ್ಷೆ ನಡೆಸುವ ಕುರಿತು ಮಾತುಕತೆ ನಡೆದಿದೆ. ಆದರೆ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಉನ್ನತ ಮೂಲಗಳು ತಿಳಿಸಿವೆ.

ಒಂದು ವೇಳೆ ಅಮೆರಿಕ ಏನಾದರೂ ಪರೀಕ್ಷೆ ನಡೆಸಿದರೆ, ಇದು 1992ರ ನಂತರ ಆ ದೇಶ ನಡೆಸುತ್ತಿರುವ ಮೊದಲ ಪ್ರಯೋಗವಾಗಲಿದೆ. ಅಲ್ಲದೆ ಅಣ್ವಸ್ತ್ರ ಪರೀಕ್ಷೆ ನಡೆಸಲು ಹಲವು ದೇಶಗಳಿಗೂ ನಿಶಾನೆ ಸಿಕ್ಕಂತಾಗುತ್ತದೆ. ಅಣ್ವಸ್ತ್ರ ಪರೀಕ್ಷೆಗೆ ಹೇರಿಕೊಂಡಿರುವ ನಿರ್ಬಂಧದಿಂದ ಉತ್ತರ ಕೊರಿಯಾ ಕೂಡ ಹೊರಬರಲಿದೆ. ಇದರಿಂದಾಗಿ ಜಾಗತಿಕವಾಗಿ ಅಣ್ವಸ್ತ್ರ ಸಮರ ಏರ್ಪಡಲಿದೆ ಎಂದು ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

click me!