*ಉಕ್ರೇನ್‌ಗೆ ರಷ್ಯಾ ವಿನ್ಯಾಸದ ವ್ಯವಸ್ಥೆ ರವಾನೆಗೆ ಅಮೆರಿಕ ಚಿಂತನೆ
*10 ದಿನದಿಂದ ಆಹಾರ, ನೀರು, ವಿದ್ಯುತ್ ಇಲ್ಲದೆ ಜನರ ಸಂಕಷ್ಟ
*ರಷ್ಯಾ ಭೀಕರ ದಾಳಿಗೆ ತುತ್ತಾದ ಮರಿಯುಪೋಲ್ ಜನರ ವೇದನೆ
ವಾಷಿಂಗ್ಟನ್ (ಮಾ. 13) : ಯುದ್ಧ ಪೀಡಿತ ಉಕ್ರೇನಿಗೆ ರಷ್ಯಾದಲ್ಲೇ ವಿನ್ಯಾಸಗೊಳಿಸಿದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಕಳುಹಿಸುವ ನಿಟ್ಟಿನಲ್ಲಿ ಅಮೆರಿಕದ ರಕ್ಷಣಾ ಸಚಿವಾಲಯದ ಮುಖ್ಯ ಕಚೇರಿ ಪೆಂಟಗನ್ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಷ್ಯಾ ಸೇನೆಯು ವಾಯು ಮಾರ್ಗಗಳ ಮೂಲಕವೇ ಭಾರೀ ಪ್ರಮಾಣದಲ್ಲಿ ಶೆಲ್ ಹಾಗೂ ಬಾಂಬ್ ದಾಳಿ ನಡೆಸುತ್ತಿರುವ ಕಾರಣ ಅದನ್ನು ತಡೆಯಲು ಉಕ್ರೇನಿನ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲೇ ವಿನ್ಯಾಸಗೊಳಿಸಲಾದ ಯುದ್ಧ ವಿಮಾನ ವಿರೋಧಿ ಉಪಕರಣಗಳನ್ನು ರವಾನಿಸಲು ಪೆಂಟಗನ್ ಚಿಂತಿಸಿದೆ.
ನ್ಯಾಟೋ ದೇಶಗಳ ಭಾಗವಾಗಿರುವ ಕೆಲ ದೇಶಗಳಲ್ಲಿ ರಷ್ಯಾ ವಿನ್ಯಾಸ ಮಾಡಿರುವ ವಾಯು ರಕ್ಷಣಾ ವ್ಯವಸ್ಥೆ ಇದೆ. ಇದು ಈಗ ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ವಾಯು ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂಬುದು ಅಮೆರಿಕದ ಲೆಕ್ಕಾಚಾರ. ಎಸ್-300 ವಾಯು ರಕ್ಷಣಾ ವ್ಯವಸ್ಥೆಯ ಈ ಉಪಕರಣಗಳು ಯುದ್ಧ ವಿಮಾನ ಹಾಗೂ ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ.
undefined
ಇದನ್ನೂ ಓದಿ: ಬದುಕುವ ಆಸೆ ಬಿಟ್ಟಿದ್ದ ನಮ್ಮನ್ನು ರಕ್ಷಿಸಿದ್ದು ಭಾರತ ಸರ್ಕಾರ: ಸುಮಿ ಅನುಭವ ಬಿಚ್ಚಿಟ್ಟ ಕನ್ನಡಿಗ!
ಇವುಗಳನ್ನು ಸುಲಭವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕರೆದೊಯ್ಯಬಹುದಾಗಿದ್ದು, ಹೆಚ್ಚಿನ ತರಬೇತಿ ಅಗತ್ಯವಿಲ್ಲದೇ ಉಕ್ರೇನಿನ ಪಡೆಗಳು ಬಳಸಬಹುದು. ಈ ಯುದ್ಧ ವಿಮಾನ ವಿರೋಧಿ ಉಪಕರಣಗಳು ಉಕ್ರೇನಿನ ವಾಯುಪಡೆಯ ಪರಿಣಾಮಕಾರಿತ್ವವನ್ನು ಗಮನಾರ್ಹವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಅಮೆರಿಕವು ಇದರೊಂದಿಗೆ ಹೊಸ ಯುದ್ಧ ವಿಮಾನಗಳನ್ನೂ ರವಾನಿಸಲಿದೆ ಎಂದು ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ಬಾಹ್ಯಾಕಾಶ ನಿಲ್ದಾಣ ಕುಸಿದು ಬೀಳುತ್ತೆ: ತನ್ನ ಮೇಲೆ ಅಮೆರಿಕ ಮತ್ತು ಯುರೋಪ್ ದೇಶಗಳು ಹೇರಿರುವ ಎಲ್ಲಾ ರೀತಿಯ ನಿರ್ಬಂಧಗಳನ್ನು ಕೊನೆಗೊಳಿಸಬೇಕು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೇ ರೋಸ್‌ಕಾಸ್ಮೋಸ್ ಮನವಿ ಮಾಡಿದೆ. ಇಲ್ಲದೇ ಹೋದಲ್ಲಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವೇ ಕುಸಿದು ಬೀಳಬಹುದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಈ ಕುರಿತು ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಪತ್ರ ಬರೆದಿರುವ ರೋಸ್‌ಕಾಸ್ಮೋಸ್ ಮುಖ್ಯಸ್ಥ ಡಿಮಿಟ್ರಿ ರೋಗೊಝಿನ್ ನಿರ್ಬಂಧ ಹಿಂಪಡೆಯುವ ಮೂಲಕ ಬಾಹ್ಯಾಕಾಶ ನಿಲ್ದಾಣವನ್ನು ಕಾರ್ಯರೂಪದಲ್ಲಿಡಲು ಸಹರಿಸಬೇಕು. ಬಾಹ್ಯಾಕಾಶ ನಿಲ್ದಾಣದ ಸಂಭಾವ್ಯ ಪತನದ ವಲಯವು ರಷ್ಯಾ ಹೊರತುಪಡಿಸಿ ಪ್ರಪಂಚದ ಬಹುತೇಕ ಭಾಗಗಳನ್ನು ವ್ಯಾಪಿಸಿದೆ.
ಹೀಗಾಗಿ ಕಾರ್ಯಾಚರಣೆಗೆ ಅಡ್ಡಿಯಾದರೆ ಜಗತ್ತಿನ ಉಳಿದ ಭಾಗಗಳಿಗೆ ತೊಂದರೆಯಾಗುವುದೇ ಹೊರತು ರಷ್ಯಾಕ್ಕಲ್ಲ ಎಂದಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೆರಿಕದ 4 ಗಗನಯಾತ್ರಿಗಳು ರಷ್ಯಾದ ಇಬ್ಬರು ಹಾಗೂ ಒಬ್ಬ ಯುರೋಪಿಯನ್ ಗಗನಯಾತ್ರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಹ್ಯಾಕಾಶ ಕೇಂದ್ರವು ಭಾರತದ ಮೇಲೆ ಪತನವಾಗಬಹುದು ಎಂದು ವಾರದ ಹಿಂದೆ ಕೂಡಾ ರಷ್ಯಾ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: Russia Ukraine War ಸ್ವೀಡನ್, ಫಿನ್ಲೆಂಡ್‌ಗೂ ರಷ್ಯಾ ದಾಳಿ ಎಚ್ಚರಿಕೆ
ಮೇಲೆ ಕಟ್ಟಡದಲ್ಲಿ ಬೆಂಕಿ, ಕೆಳಗೆ ಬಂಕರ್‌ನಲ್ಲಿ ಮೈಕೊರೆವ ಚಳಿ: ಉಕ್ರೇನಿನ ಮರಿಯುಪೋಲ್ ನಗರದ ಮೇಲೆ ರಷ್ಯಾ ಶೆಲ್ ಹಾಗೂ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. ವಸತಿ ಪ್ರದೇಶಗಳು, ಕಟ್ಟಡಗಳು ದಾಳಿಯಿಂದಾಗಿ ಹೊತ್ತಿ ಉರಿಯುತ್ತಿದ್ದರೆ, ಪ್ರಾಣಭೀತಿಯಿಂದಾಗಿ ಬಂಕರ್‌ಗಳಲ್ಲಿ ನೆಲೆಸಿರುವ ಜನತೆ ಮೈ ಕೊರೆಯುವ ಚಳಿಗೆ ತುತ್ತಾಗಿದ್ದಾರೆ. ನಗರದಲ್ಲಿ ನೆಲೆಸಿರುವ 4.3 ಲಕ್ಷ ಜನರು ಕಳೆದ 10 ದಿನಗಳಿಂದ ಆಹಾರ, ನೀರು, ವಿದ್ಯುತ್ ಇಲ್ಲದೇ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾನವೀಯತೆ ಮರೆತ ರಷ್ಯಾದ ಪಡೆಗಳು ಮರಿಯುಪೋಲ್‌ನ ಹೆರಿಗೆ ಆಸ್ಪತ್ರೆಯ ಮೇಲೂ ವೈಮಾನಿಕ ದಾಳಿ ನಡೆಸಿದ್ದಾರೆ. ಹೀಗಾಗಿ ಗರ್ಭಿಣಿ ಮರಿಯಾನಾಳನ್ನು ಇನ್ನೊಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ವೆರೊನಿಕಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇಲ್ಲಿನ ಬಾರಿಶವ್ಕಾ ನಗರವು ಸ್ಮಶಾನ ಸದೃಶವಾಗಿದ್ದು ರೆಸ್ಟೋರಂಟ್, ಸಿನಿಮಾ ಮಂದಿರಗಳಿದ್ದ ಜಾಗದಲ್ಲಿ ಕೇವಲ ಲೋಹ, ಧೂಳು, ಒಡೆದ ಗಾಜು ಹಾಗೂ ಕಟ್ಟಡದ ಅವಶೇಷಗಳಷ್ಟೇ ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದಿವೆ.
‘ಪುಟಿನ್ ಈ ಅವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ. ಇದನ್ನೆಲ್ಲ ಮಾಡಿ ಅವರು ಉಕ್ರೇನನ್ನು ವಶಪಡಿಸಿಕೊಳ್ಳಬಹುದು ಎಂದು ತಿಳಿದಿದ್ದಾರೆ. ಉಕ್ರೇನ್ ಸ್ವತಂತ್ರ ರಾಷ್ಟ್ರವಾಗಿಯೇ ಉಳಿಯಲಿದೆ. ನಾವು ಉಕ್ರೇನ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ನಾವಿಲ್ಲಿ ಯಾವುದೇ ರಷ್ಯನ್‌ರನ್ನು ಕಾಣಲು ಬಯಸುವುದಿಲ್ಲ’ ಎಂದು ಮರಿಯುಪೋಲ್ ನಿವಾಸಿ ಇವಾನ್ ಮೆರ್ಸಿಕ್ ಹೇಳಿದ್ದಾರೆ.