
ಒಬ್ಬರ್ಗೆನ್ (ಸ್ವಿಜರ್ಲೆಂಡ್): ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡುವ ಉದ್ದೇಶದಿಂದ ಇಲ್ಲಿ ನಡೆಯುತ್ತಿರುವ ಮಾತುಕತೆ 2ನೇ ದಿನವನ್ನು ಪೂರೈಸಿದೆ. ಈ ವೇಳೆ, 60 ದಿನಗಳಲ್ಲಿ ಅಂತಿಮ ಒಪ್ಪಂದ ಮಾಡಿಕೊಳ್ಳುವುದಕ್ಕೆ ಪೂರಕವಾದ ಚೌಕಟ್ಟಿಗೆ ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಮತ್ತು ಕತಾರ್ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದದಡಿಯಲ್ಲಿ ಭಾನುವಾರದಿಂದ ನಡೆಯುತ್ತಿರುವ ಮಾತುಕತೆಯಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದಲ್ಲಿ ಅಮೆರಿಕದ ನಿಯೋಗ ಮತ್ತು ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ನೇತೃತ್ವದ ಇರಾನ್ ನಿಯೋಗ ಭಾಗವಹಿಸಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಮಧ್ಯಸ್ಥಿಕೆದಾರರಾಗಿದ್ದರು.
ಜಂಟಿ ಹೇಳಿಕೆಯಲ್ಲಿ, ಲೆಬನಾನ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ‘ಸಂಘರ್ಷ ನಿವಾರಣೆ ಸೆಲ್’ ಸ್ಥಾಪಿಸಲಾಗಿದೆ. ಮಧ್ಯಸ್ಥಿಕೆಯ ಮೇಲೆ ರಾಜಕೀಯ ಮೇಲ್ವಿಚಾರಣೆಗಾಗಿಯೂ ಉನ್ನತ ಮಟ್ಟದ ಸಮಿತಿ ರಚನೆಗೆ ಒಪ್ಪಿಗೆ ದೊರಕಿದೆ. ಇದು, ಮಧ್ಯಸ್ಥಿಕೆದಾರರಿಂದ ನಿಯಮಿತ ವರದಿಗಳನ್ನು ಪಡೆಯುತ್ತಿರುತ್ತದೆ. ಅಣ್ವಸ್ತ್ರ, ಆರ್ಥಿಕ ನಿರ್ಬಂಧ, ಇತರೆ ವಿವಾದ ಪರಿಹರಿಸುವ ಜವಾಬ್ದಾರಿ ಹೊತ್ತಿರುವ ಗುಂಪುಗಳ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಲಾಗಿದೆ.
ಸ್ವಿಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಮಾತುಕತೆಯನ್ನು ಜೆಡಿ ವ್ಯಾನ್ಸ್ ಐತಿಹಾಸಿಕ ಸಭೆ ಎಂದು ವರ್ಣಿಸಿದ್ದಾರೆ. ‘ಈ ಸಭೆಯಲ್ಲಿ ಎಲ್ಲಾ ಸಮಸ್ಯೆಗಳಿಗೆ ನಿವಾರಣೆ ಕಂಡುಕೊಳ್ಳಲಾಗದಿದ್ದರೂ, ಒಂದು ತಂಡವಾಗಿ ಕುಳಿತು ಮಾತುಕತೆ ನಡೆಸಲು ಸಿಕ್ಕಿರುವ ಐತಿಹಾಸಿಕ ಅವಕಾಶವಾಗಿದೆ. ಇರಾನ್‌ನಿಂದಾಗಿ ಪ್ರಾದೇಶಿಕ ಅಸ್ಥಿರತೆ ಸೃಷ್ಟಿಯಾಗಿರುವ ಹೊರತಾಗಿಯೂ, ಶಾಂತಿ ಮತ್ತು ಸಮೃದ್ಧಿ ಸ್ಥಾಪನೆಗೆ ಕೆಲಸ ಮಾಡಬಹುದು’ ಎಂದು ಅವರು ಹೇಳಿದ್ದಾರೆ.
ಮಾತುಕತೆ ನಡೆಯುತ್ತಿದ್ದ ಹೊತ್ತಿನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ದಾಳಿ ಮಾಡುವ ಬೆದರಿಕೆ ಹಾಕಿದ ಕಾರಣ, ಮಾತುಕತೆ ಸ್ಥಗಿತವಾಯಿತು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ನಿಯೋಗವು ಕತಾರ್ ಮಧ್ಯಸ್ಥಿಕೆದಾರರನ್ನು ಭೇಟಿ ಆಗಿ ಹೊರಟಿತು ಎನ್ನಲಾಗಿದೆ. ಆದರೆ ಅಮೆರಿಕದ ರಾಯಭಾರಿ ಮಾತ್ರ, ಇರಾನ್ ನಿಯೋಗದ ಜತೆ ಮಾತುಕತೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಇದನ್ನೂ ಓದಿ: ಸಂಧಾನದ ಮಧ್ಯೆ ಇರಾನ್‌ಗೆ ಟ್ರಂಪ್ ಡಬಲ್ ವಾರ್ನಿಂಗ್! ಇಸ್ರೇಲ್ ಪ್ರಧಾನಿಗೆ ಮುಜುಗರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ