ಹಿಜಾಬ್​ ಧರಿಸದೇ ಹಾಡಿದ ಖ್ಯಾತ ಗಾಯಕಿಗೆ ಛಡಿಯೇಟಿನ ಕ್ರೂರ ಶಿಕ್ಷೆ: 2 ವರ್ಷ ಗಾಯನ ಬ್ಯಾನ್​

Published : Jun 22, 2026, 04:43 PM IST
Parastoo Ahmadi

ಸಾರಾಂಶ

ಇರಾನ್​ನಲ್ಲಿ ಹಿಜಾಬ್​ ಧರಿಸದೆ ದೇಶಭಕ್ತಿ ಗೀತೆಯನ್ನು ಹಾಡಿದ ಗಾಯಕಿ ಪರಸ್ತೂ ಅಹ್ಮದಿಗೆ ಅಲ್ಲಿನ ನ್ಯಾಯಾಲಯವು 74 ಛಡಿಯೇಟು ಹಾಗೂ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಈ ಪ್ರದರ್ಶನವನ್ನು ಅಶ್ಲೀಲ ಮತ್ತು ಅನೈತಿಕ ಎಂದು ಪರಿಗಣಿಸಿದ್ದು, ಈ ತೀರ್ಪು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಟೆಹ್ರಾನ್​ (ಇರಾನ್​): ಅತ್ಯಂತ ಕ್ರೂರ ಎನ್ನುವ ಘಟನೆಯೊಂದರಲ್ಲಿ ಹಿಜಾಬ್​ ಧರಿಸದೇ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಖ್ಯಾತ ಗಾಯಕಿಯೊಬ್ಬರಿಗೆ 74 ಛಡಿಯೇಟು ನೀಡುವ ಕ್ರೂರ ಶಿಕ್ಷೆಯನ್ನು ವಿಧಿಸಲಾಗಿದೆ. ಜೊತೆಗೆ, ಎರಡು ವರ್ಷ ಸಂಗೀತ ಪ್ರದರ್ಶನ ಬ್ಯಾನ್ ಮಾಡಲಾಗಿದೆ. 29 ವರ್ಷದ ಇರಾನಿ ಗಾಯಕಿ ಪರಸ್ತೂ ಅಹ್ಮದಿಗೆ ಅಲ್ಲಿಯ ಕೋರ್ಟ್​ ಇಂಥದ್ದೊಂದು ಕ್ರೂರ ಶಿಕ್ಷೆಯನ್ನು ನೀಡಿದೆ. ಜೊತೆಗೆ ಹೆಣ್ಣಿನ ಹಾಡಿನ ದನಿ ಕೇಳುವುದು ಪುರುಷರ ಕಾಮೋದ್ರೇಕವನ್ನು ಉತ್ತೇಜಿಸುವುದಕ್ಕೆ ಕಾರಣವಾಗುತ್ತದೆ. ಇದು ನಿಷಿದ್ಧ ಎಂದೂ ಹೇಳಲಾಗಿದೆ!

ಅಷ್ಟಕ್ಕೂ ಈ ಕಾರ್ಯಕ್ರಮ ನಡೆದದ್ದು 2024ರ ಡಿಸೆಂಬರ್​​ನಲ್ಲಿ. ಖ್ಯಾತ ಗಾಯಕಿಯಾಗಿರುವ ಪರಸ್ತೂ ಅಹ್ಮದಿ ಇದಾಗಲೇ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಂದು ಸಂಗೀತ ಕಾರ್ಯಕ್ರಮವೊಂದರಲ್ಲಿ ಪರಸ್ತೂ ಅಹ್ಮದಿ ಹಿಜಾಬ್ ಧರಿಸದೆ ದೇಶಭಕ್ತಿ ಗೀತೆಯಾದ ಅಜ್ ಖೂನೆ ಜವಾನನೆ ವತನ್ ಹಾಡನ್ನು ಹಾಡಿದ್ದರು. ಬಳಿಕ ಅದನ್ನು ಯ್ಯೂಟೂಬ್​ ಚಾನಲ್​ನಲ್ಲಿ ಪ್ರಸಾರ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಅಶ್ಲೀಲ ಮತ್ತು ಅನೈತಿಕ ಎಂದ ಕೋರ್ಟ್​

ಬಳಿಕ ಇಸ್ಲಾಮಿಕ್ ರಾಷ್ಟ್ರವಾದ ಇರಾನ್​ನಲ್ಲಿ ಹಿಜಾಬ್ ಧರಿಸದೇ ಪ್ರದರ್ಶನ ನೀಡಿದ ಹಿನ್ನೆಲೆ ಅಧಿಕಾರಿಗಳು ಅವರ ವಿರುದ್ಧ ಅಶ್ಲೀಲ ಮತ್ತು ಅನೈತಿಕ ಹಾಗೂ ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸುವ ಎಂದು ಆರೋಪದ ಮೇಲೆ ಅಹ್ಮದಿ ಮತ್ತು ಹಲವಾರು ಸಂಗೀತಗಾರರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದೀಗ ವಿಚಾರಣೆ ನಡೆಸಿದ ಇರಾನ್ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ಸಂಗೀತಗಾರರು ಸೇರಿದಂತೆ ಕಾನ್ಸರ್ಟ್​ ನಡೆಸಿದ ತಂಡದ ಎಂಟು ಸದಸ್ಯರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಮತ್ತು 74 ಛಡಿಯೇಟುಗಳು ಶಿಕ್ಷೆ ನೀಡಿದ್ದು, ಇರಾನ್‌ನಿಂದ ಹೊರಹೋಗದಂತೆ ಎರಡು ವರ್ಷಗಳ ನಿಷೇಧ ಮತ್ತು ಕಲಾತ್ಮಕ ಚಟುವಟಿಕೆಗಳ ಮೇಲೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ.

ಟೀಕೆಗೆ ಗುರಿಯಾದ ಶಿಕ್ಷೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್‌ನಲ್ಲಿರುವ ಅಮೆರಿಕ ಮೂಲದ ಮಾನವ ಹಕ್ಕುಗಳ ಕೇಂದ್ರದ ವಕಾಲತ್ತು ನಿರ್ದೇಶಕ ಬಹಾರ್ ಘಂಡೆಹರಿ, ಇರಾನ್ ಅಧಿಕಾರಿಗಳ ಯುದ್ಧಕಾಲದ ಪ್ರಚಾರ ಅಭಿಯಾನದ ಹೊರತಾಗಿಯೂ, ಇರಾನ್‌ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಗಳು ಬದಲಾಗಿಲ್ಲ ಎಂಬುದನ್ನು ಇದು ನೆನಪಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಈ ತೀರ್ಪು ಇರಾನಿನ ಕಲಾ ಸಮುದಾಯದ ಪ್ರಮುಖ ವ್ಯಕ್ತಿಗಳಿಂದ ಟೀಕೆಗೆ ಗುರಿಯಾಗಿದೆ. ಮಾನವ ಹಕ್ಕುಗಳ ವಕೀಲ ಮೊಯಿನ್ ಖಜೇಲಿ ಕೂಡ ತೀರ್ಪಿನ ಕಾನೂನು ಆಧಾರವನ್ನು ಪ್ರಶ್ನಿಸಿದ್ದಾರೆ. ಇರಾನಿನ ಕ್ರಿಮಿನಲ್ ಕಾನೂನಿನಡಿಯಲ್ಲಿ ಮಹಿಳೆಯರು ಹಾಡುವುದು, ಸಂಗೀತ ಪ್ರದರ್ಶಿಸುವುದು ಮತ್ತು ಸಂಗೀತ ಕೃತಿಗಳನ್ನು ನಿರ್ಮಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಲ್ಲ. ಅಂತಹ ಚಟುವಟಿಕೆಗಳನ್ನು ಅಶ್ಲೀಲ ವಿಷಯದ ಉತ್ಪಾದನೆ, ವಿತರಣೆ ಅಥವಾ ಪ್ರಕಟಣೆ ಎಂದು ಅರ್ಥೈಸಲಾಗಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PNG vs LPG: ಭಾರತದಂತೆ ಅಮೆರಿಕದಲ್ಲಿ ಜನ ಗ್ಯಾಸ್ ಸಿಲಿಂಡರ್ ಬಳಸಲ್ಲ! ಅಡುಗೆಗೆ ಏನ್‌ ಮಾಡ್ತಾರೆ?
ಸಂಧಾನದ ಮಧ್ಯೆ ಇರಾನ್‌ಗೆ ಟ್ರಂಪ್‌ ಡಬಲ್ ವಾರ್ನಿಂಗ್! ಇಸ್ರೇಲ್ ಪ್ರಧಾನಿಗೆ ಮುಜುಗರ