ಅಮೆರಿಕ- ಇರಾನ್‌ ಯುದ್ಧ ವಿರಾಮಕ್ಕೆ ನಾಳೆ ಮುಹೂರ್ತ: ಸಂಧಾನವೋ? ಕದನವೋ?

Published : Apr 20, 2026, 05:24 AM IST
Donald Trump

ಸಾರಾಂಶ

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ 2ನೇ ಸುತ್ತಿನ ಸಂಧಾನ ಮಾತುಕತೆ ನಿಗದಿಯಾಗಿದೆ. ಆದರೆ, ಅಮೆರಿಕದ ಕಠಿಣ ಷರತ್ತುಗಳು ಮತ್ತು ಅಧ್ಯಕ್ಷ ಟ್ರಂಪ್‌ರವರ ಬೆದರಿಕೆಯ ಹಿನ್ನೆಲೆಯಲ್ಲಿ, ಇರಾನ್‌ ಮಾತುಕತೆಯನ್ನು ತಿರಸ್ಕರಿಸಿದೆ.

ಇಸ್ಲಾಮಾಬಾದ್ (ಏ.20): ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಕೊನೆ ಹಾಡುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ ಮಂಗಳವಾರ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 2ನೇ ಸುತ್ತಿನ ಸಂಧಾನ ಮಾತುಕತೆ ನಿಗದಿ ಮಾಡಲಾಗಿದೆ. ಸಭೆಯಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯನ್ನು ಸ್ವತಃ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಚಿತಪಡಿಸಿದ್ದಾರೆ. ಆದರೆ ಅತಿಯಾದ ಷರತ್ತುಗಳನ್ನು ಅಮೆರಿಕ ವಿಧಿಸಿರುವ ಕಾರಣ ಸಭೆಗೆ ಹೋಗುವುದಿಲ್ಲ ಎಂದು ಇರಾನ್‌ ಘೋಷಿಸಿದೆ. ಹೀಗಾಗಿ ಬಿಕ್ಕಟ್ಟು ತಣ್ಣಗಾಗುವ ಬದಲು ಉಲ್ಬಣಿಸುವ ಸಾಧ್ಯತೆ ಇದೆ.

ಅಮೆರಿಕ-ಇರಾನ್‌ ನಡುವಿನ 2 ವಾರಗಳ ಕದನ ವಿರಾಮ ಗಡುವು ಬುಧವಾರಕ್ಕೆ ಮುಕ್ತಾಯವಾಗುತ್ತಿದ್ದು ಅದರ ಮುನ್ನಾ ದಿನ ಈ ಮಾತುಕತೆ ನಿಗದಿಯಾಗಿದೆ. ಆದರೆ, ‘ನಮ್ಮ ಷರತ್ತಿಗೆ ಒಪ್ಪಿ ಸಂಧಾನ ಮಾಡಿಕೊಳ್ಳದೇ ಹೋದಲ್ಲಿ ಇರಾನ್‌ ಅನ್ನು ಧ್ವಂಸ ಮಾಡುತ್ತೇವೆ’ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

2ನೇ ಸುತ್ತಿನ ಸಭೆ: ಏ.11-12ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ- ಇರಾನ್‌ ನಡುವೆ ಮೊದಲ ಸುತ್ತಿನ ಸಂಧಾನ ಮಾತುಕತೆ ನಡೆದಿತ್ತು. ಆದರೆ ಸಭೆ ಯಾವುದೇ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿತ್ತು. ಹೀಗಾಗಿ ಮತ್ತೆ ಯುದ್ಧ ತೀವ್ರಗೊಳ್ಳುವ ಭೀತಿ ಎದುರಾಗಿತ್ತು. ಆದರೆ ಮಧ್ಯಸ್ಥಿಕೆ ದೇಶವಾದ ಪಾಕಿಸ್ತಾನ ಕೆಲವು ಹಿಂಬಾಗಿಲ ಮಾತುಕತೆ ನಡೆಸಿದ ಕಾರಣ ಇಸ್ಲಾಮಾಬಾದ್‌ನಲ್ಲಿ 2ನೇ ಸುತ್ತಿನ ಸಂಧಾನ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್‌, ‘ಇರಾನ್‌ ಜೊತೆಗಿನ ಇಸ್ಲಾಮಾಬಾದ್ ಮಾತುಕತೆಗಾಗಿ ನಮ್ಮ ಸಂಧಾನಕಾರರ ತಂಡ ಸೋಮವಾರ ಸಂಜೆ ಪಾಕಿಸ್ತಾನ ತಲುಪಲಿದೆ. ಮಂಗಳವಾರ ಮಾತುಕತೆ ನಡೆಯಲಿದೆ. ಮಾತುಕತೆ ವೇಳೆ ಅಮೆರಿಕದ ಸಂಧಾನ ಪ್ರಸ್ತಾಪವನ್ನು ಸ್ವೀಕರಿಸದಿದ್ದರೆ ಇರಾನ್‌ನ ನಾಗರಿಕ ಮೂಲಸೌಕರ್ಯವನ್ನು ನಾಶಪಡಿಸುತ್ತೇವೆ. ಪ್ರತಿ ವಿದ್ಯುತ್ ಸ್ಥಾವರ ಮತ್ತು ಸೇತುವೆಯನ್ನು ಧ್ವಂಸಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ನಿಯೋಗ

ಸಭೆಯಲ್ಲಿ ಅಮೆರಿಕವನ್ನು ಇರಾನ್‌ ವಿಷಯ ಕುರಿತ ಅಮೆರಿಕದ ವಿಶೇಷ ರಾಯಭಾರಿ ಜರೇದ್‌ ಕುಶ್ನರ್‌ ಹಾಗೂ ಸ್ಟೀವ್‌ ವಿಟ್ಕಾಫ್‌ ಪ್ರತಿನಿಧಿಸಲಿದ್ದಾರೆ. ಆದರೆ ಮೊದಲ ಸುತ್ತಿನಲ್ಲಿ ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಈ ಬಾರಿ ಸಂಧಾನ ಮಾತುಕತೆಯಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

ಇರಾನ್‌ ತಿರಸ್ಕಾರ

ಅಮೆರಿಕ ತನ್ನ ತಂಡವನ್ನು ಘೋಷಿಸಿದರೂ ಇರಾನ್ 2 ನೇ ಸುತ್ತಿನ ಶಾಂತಿ ಮಾತುಕತೆಯನ್ನು ತಿರಸ್ಕರಿಸಿದೆ ಎಂದು ದೇಶದ ಅಧಿಕೃತ ರಾಜ್ಯ ಸುದ್ದಿ ಸಂಸ್ಥೆ ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ (ಐಆರ್‌ಎನ್‌ಎ) ಭಾನುವಾರ ವರದಿ ಮಾಡಿದೆ. ‘ವಾಷಿಂಗ್ಟನ್‌ನ ಅತಿಯಾದ ಬೇಡಿಕೆಗಳು, ಅವಾಸ್ತವಿಕ ನಿರೀಕ್ಷೆಗಳು, ನಿಲುವಿನಲ್ಲಿ ನಿರಂತರ ಬದಲಾವಣೆಗಳು, ಪುನರಾವರ್ತಿತ ವಿರೋಧಾಭಾಸಗಳು ಮತ್ತು ಹೋರ್ಮುಜ್‌ನಲ್ಲಿನ ನೌಕಾ ದಿಗ್ಬಂಧನ- ಈ ಅಂಶಗಳೆಲ್ಲ ಕದನವಿರಾಮ ಉಲ್ಲಂಘನೆಯಾಗಿವೆ. ಈ ಸ್ಥಿತಿಯ ಉತ್ಪಾದಕ ಮಾತುಕತೆ ನಿರೀಕ್ಷೆಯಿಲ್ಲ’ ಎಂದಿದೆ.

ಇರಾನ್‌ ಡೀಲ್‌ಗೆ ಒಪ್ಪಲೇಬೇಕು

ಮಂಗಳವಾರದ ಮಾತುಕತೆ ವೇಳೆ ಅಮೆರಿಕ ಮುಂದಿಡುವ ಸಂಧಾನ ಪ್ರಸ್ತಾಪವನ್ನು ಸ್ವೀಕರಿಸದಿದ್ದರೆ ಇರಾನ್‌ನ ನಾಗರಿಕ ಮೂಲಸೌಕರ್ಯವನ್ನು ನಾಶಪಡಿಸುತ್ತೇವೆ. ಪ್ರತಿಯೊಂದು ವಿದ್ಯುತ್ ಸ್ಥಾವರ ಮತ್ತು ಸೇತುವೆಯನ್ನು ಧ್ವಂಸಗೊಳಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಾಯಗೊಂಡ ಹೋರಾಟಗಾರ್ತಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ, 19ನೇ ವಯಸ್ಸಿಗೆ ಪ್ರಾಣಿಬಿಟ್ಟ ಯುವತಿ
ಮೃತನ ಜೊತೆ ಆತನ 1.5 ಕೋಟಿ ಬೆಂಜ್ ಕಾರು ಮಣ್ಣು ಮಾಡಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕುಟುಂಬ