
ಸುಲೈಮಾನಿಯಾ (ಏ.19) : ಯುದ್ಧ ಸಂದರ್ಭಗಳಲ್ಲಿ ಹಲವು ಅಮಾನವೀಯ, ಹಾಗೂ ನಿರ್ದಯ ಘಟನೆಗಳು ನಡೆಯುತ್ತದೆ. ವಿಶೇಷವಾಗಿ ಕಾರ್ಯಾಚರಣೆ ಸಂದರ್ಭಗಳಲ್ಲಿ ನಡೆಯುವ ಘಟನೆಗಳು ಹಲವರ ಎದೆ ಝಲ್ ಎನಿಸುವಂತೆ ಮಾಡುತ್ತದೆ. ಆದರೆ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಪ್ರಥಮ ಆದ್ಯತೆಯಾಗುತ್ತದೆ. ಭಾರತದಲ್ಲಿ ಆರೋಪಿ ಅಥವಾ ಅಪರಾಧಿಯಾಗಿದ್ದರೂ ಗಾಯಗೊಂಡಿದ್ದರೆ ಮೊದಲ ಆದ್ಯತೆ ಚಿಕಿತ್ಸೆಯಾಗಿರುತ್ತದೆ. ಆದರೆ ಇದೀಗ ಇರಾಕ್‌ನಲ್ಲಿ ನಡೆದ ಘಟನೆ ಹಲವರಿಗೆ ಆಘಾತ ನೀಡಿದೆ. ಉತ್ತರ ಇರಾಕ್‌ನ ಕುರ್ದಿಶ್ ಪ್ರದೇಶದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಡೆಸಿದ ಡ್ರೋನ್ ದಾಳಿಯಲ್ಲಿ 'ಕೋಮಲಾ' ಪಕ್ಷದ ಯುವ ಹೋರಾಟಗಾರ್ತಿ ಗಝಲ್ ಮೋಲನ್ (19) ಪ್ರಾಣ ಕಳೆದುಕೊಂಡಿದ್ದಾರೆ.
ಕುರ್ದಿಶ್ ಸ್ವಾಯತ್ತತೆಗಾಗಿ ಹೋರಾಡುತ್ತಿರುವ ಪೆಶ್ಮೆರ್ಗಾ ಪಡೆಯ ಪ್ರಮುಖ ಸದಸ್ಯೆಯಾಗಿದ್ದರು ಈ ಯುವತಿ. ಏಪ್ರಿಲ್ 14 ರಂದು ಇರಾನಿನ ಕುರ್ದಿಶ್ ವಿರೋಧ ಪಕ್ಷದವರ ಕುಟುಂಬಗಳು ವಾಸಿಸುತ್ತಿದ್ದ ಸುರ್ದಾಶ್‌ನ ಜನವಸತಿ ಪ್ರದೇಶದ ಮೇಲೆ ಈ ಡ್ರೋನ್ ದಾಳಿ ನಡೆದಿತ್ತು. ದಾಳಿಯಲ್ಲಿ ಗಾಯಗೊಂಡ ಗಝಲ್ ಅವರನ್ನು ತಕ್ಷಣವೇ ಶೋರ್ಶ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಅಲ್ಲಿ ಸರಿಯಾದ ಸೌಲಭ್ಯಗಳಿಲ್ಲದ ಕಾರಣ, ಅವರನ್ನು ಬಕ್ಷೀನ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಯಿತು.
ಬಕ್ಷೀನ್ ಆಸ್ಪತ್ರೆಯ ಸಿಬ್ಬಂದಿ ಗಝಲ್‌ಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. 'ಸಶಸ್ತ್ರ ಗುಂಪಿಗೆ ಸೇರಿದವರಿಗೆ ಚಿಕಿತ್ಸೆ ನೀಡಿದರೆ ನಮಗೆ ತೊಂದರೆಯಾಗುತ್ತದೆ' ಎಂದು ಅವರು ಹೆದರಿದ್ದರು ಎಂದು ಗಝಲ್ ಜೊತೆಗಿದ್ದ ಸಾಮಾಜಿಕ ಕಾರ್ಯಕರ್ತೆ ಶಕೀಲಾ ಮಹ್ದಿಪನಾಹ್ ಆರೋಪಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಒಪ್ಪಲಿಲ್ಲ. ಕೊನೆಗೆ ಅವರನ್ನು ಫಾರೂಕ್ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯುವಷ್ಟರಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು ಮತ್ತು ಅವರು ಕೊನೆಯುಸಿರೆಳೆದರು. ಅವರ ಮೃತದೇಹವನ್ನು ಇರಿಸಿಕೊಳ್ಳಲು ಸ್ಥಳೀಯ ಶವಾಗಾರ ಕೂಡ ನಿರಾಕರಿಸಿದೆ ಎಂದು ವರದಿಯಾಗಿದೆ.
ಹೀಗಾಗಿ, ಸುಲೈಮಾನಿಯಾದ ಒಂದು ಲೈಬ್ರರಿಯೊಳಗೆ ಅವರ ಸಹೋದ್ಯೋಗಿಗಳು ಮತ್ತು ಪತಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ದಾಳಿಯ ಭೀತಿಯಿಂದಾಗಿ, ಸುಲೈಮಾನಿಯಾದ ಸ್ಮಶಾನದಲ್ಲಿ ಅತ್ಯಂತ ಸರಳವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಕುರ್ದಿಶ್ ಜನರ ಹಕ್ಕುಗಳಿಗಾಗಿ ಹೋರಾಡಲು ಇರಾನ್‌ನಿಂದ ಗಡಿ ದಾಟಿ ಬಂದಿದ್ದ ಗಝಲ್ ಸಾವು ಕುರ್ದಿಶ್ ಪ್ರದೇಶದಲ್ಲಿ ದೊಡ್ಡ ಪ್ರತಿಭಟನೆಗೆ ಕಾರಣವಾಗಿದೆ.
ಇರಾನ್‌ನ ಕುರ್ದಿಶ್ ಪ್ರಾಂತ್ಯದಿಂದ ಬಂದ ಗಝಲ್, ತಮ್ಮ ಜನರ ಮೇಲಿನ ದಬ್ಬಾಳಿಕೆ ಮತ್ತು ನಿರ್ಲಕ್ಷ್ಯದ ವಿರುದ್ಧ ಹೋರಾಡಲು ಉತ್ತರ ಇರಾಕ್‌ಗೆ ಬಂದಿದ್ದರು. ಇರಾನಿನ ಕುರ್ದಿಶ್ ವಿರೋಧ ಪಕ್ಷವಾದ 'ಕೋಮಲಾ'ದ ಸಶಸ್ತ್ರ ವಿಭಾಗವಾದ ಪೆಶ್ಮೆರ್ಗಾದಲ್ಲಿ ಸಕ್ರಿಯರಾಗಿದ್ದರು. ಕೋಮಲಾ ಪಕ್ಷವು ಕುರ್ದಿಶ್ ರಾಷ್ಟ್ರೀಯತೆ ಮತ್ತು ಮಹಿಳಾ ಹಕ್ಕುಗಳ ಸಿದ್ಧಾಂತವನ್ನು ನಂಬುತ್ತದೆ. ಸಾಮಾನ್ಯವಾಗಿ ಪೆಶ್ಮೆರ್ಗಾ ಪಡೆಗಳಲ್ಲಿ ಅನುಭವಿಗಳೇ ಮುಂಚೂಣಿಯಲ್ಲಿರುತ್ತಾರೆ. ಆದರೆ, ಕೇವಲ 19ನೇ ವಯಸ್ಸಿನಲ್ಲಿ ಯುದ್ಧಭೂಮಿಗೆ ಇಳಿದ ಗಝಲ್ ಧೈರ್ಯ, ಅವರ ಸಹಚರರಲ್ಲಿ ದೊಡ್ಡ ಗೌರವ ತಂದುಕೊಟ್ಟಿತ್ತು.
ತಮ್ಮ ವಯಸ್ಸಿನ ಹುಡುಗಿಯರು ಸುರಕ್ಷಿತ ಜೀವನ ನಡೆಸುತ್ತಿರುವಾಗ, ಗಝಲ್ ಬಂದೂಕು ಹಿಡಿದು ಹೋರಾಟದ ಹಾದಿ ಆಯ್ಕೆ ಮಾಡಿಕೊಂಡಿದ್ದರು. 'ತಮ್ಮ ನಾಡು ಮತ್ತು ಜನರಿಗಾಗಿ ಪ್ರಾಣತ್ಯಾಗ ಮಾಡಲು ಸಿದ್ಧಳಾಗಿದ್ದ ಕ್ರಾಂತಿಕಾರಿ' ಎಂದು ಅವರನ್ನು ಬಣ್ಣಿಸಲಾಗುತ್ತದೆ. ಹೋರಾಟದ ನಡುವೆಯೇ ವಿವಾಹವಾಗಿದ್ದ ಗಝಲ್, ತಮ್ಮ ಪತಿಯೊಂದಿಗೆ ಕುರ್ದಿಶ್ ಶಿಬಿರಗಳಲ್ಲೇ ವಾಸಿಸುತ್ತಿದ್ದರು. ಗಝಲ್ ಸಾವಿನ ನಂತರ ಲೈಬ್ರರಿಯಲ್ಲಿ ನಡೆದ ಅಂತಿಮ ವಿಧಿವಿಧಾನಗಳ ವೇಳೆ ಅವರ ಪತಿಯೂ ಜೊತೆಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ