
ಟೆಹ್ರಾನ್: ಮಧ್ಯಪ್ರಾಚ್ಯ ಯುದ್ಧ ಭೀಕರ ಸ್ವರೂಪ ಪಡೆದುಕೊಂಡಿರುವ ಹೊತ್ತಿನಲ್ಲೇ ಅಮೆರಿಕದ ದೈತ್ಯ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಇರಾನ್ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಕಾರಣ, ಶತ್ರು ದೇಶವೊಂದರಲ್ಲಿ ಅಮೆರಿಕದ ಯುದ್ಧ ವಿಮಾನ ಪತನವಾಗಿದ್ದು 23 ವರ್ಷಗಳಲ್ಲೇ ಇದು ಮೊದಲು. ಈ ಹಿಂದೆ 2003ರಲ್ಲಿ ಇರಾಕ್ ಮೇಲಿನ ದಾಳಿ ವೇಳೆ ಅಮೆರಿಕದ ಯುದ್ಧ ವಿಮಾನ ಅಲ್ಲಿ ಪತನಗೊಂಡಿತ್ತು. ಅದರ ಬಳಿಕ ಅಮೆರಿಕ ಹಲವು ಯುದ್ಧ ನಡೆಸಿದ್ದರೂ ಎಲ್ಲಿಯೂ ಅದಕ್ಕೆ ಈ ರೀತಿಯ ಮುಖಭಂಗವಾಗಿರಲಿಲ್ಲ.
ಅಮೆರಿಕ ದಾಳಿ ಆರಂಭಿಸಿದಾಗ 4-5 ದಿನಗಳಲ್ಲಿ ಮುಗಿಯಬಹುದು ಎಂದೆಣಿಸಿದ್ದ ಕೊಲ್ಲಿ ಯುದ್ಧ 6ನೇ ವಾರಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೂ ಅಮೆರಿಕ ಮತ್ತು ಇಸ್ರೇಲ್‌ಗೆ ಇರಾನ್ ಹೊಡೆಯುತ್ತಿರುವ ಸಡ್ಡು, ಅಮೆರಿಕ ಸ್ಟೆಲ್ತ್ ತಂತ್ರಜ್ಞಾನವನ್ನೇ ನಾಚಿಸುವಂತೆ ಅದರ ಯುದ್ಧ ವಿಮಾನಗಳನ್ನು ಹೊಡೆದುರುಳಿಸುತ್ತಿರುವುದು ಭಾರೀ ಅಚ್ಚರಿ ಮೂಡಿಸಿದೆ.
ಕಳೆದ ಎರಡು ದಿನಗಳ ಅವಧಿಯಲ್ಲಿ ಅಮೆರಿಕದ ಎಫ್ 35, ಎಫ್ 15- ಇ ಮತ್ತು ಎ-10 ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಆದರೆ ಅಮೆರಿಕ ಮಾತ್ರ ಎಫ್15- ಇ ಮತ್ತು ಎ-10 ವಿಮಾನಗಳ ಮೇಲಿನ ದಾಳಿ ಖಚಿತಪಡಿಸಿದೆ. ಜೊತೆಗೆ ಘಟನೆ ವೇಳೆ ಇಬ್ಬರು ಪೈಲಟ್‌ಗಳು ನಾಪತ್ತೆಯಾಗಿದ್ದು, ಈ ಪೈಕಿ ಒಬ್ಬರ ರಕ್ಷಣೆ ಮಾಡಲಾಗಿದ್ದರೆ, ಇನ್ನೊಬ್ಬ ಪೈಲಟ್‌ಗಾಗಿ ಹುಡುಕಾಟ ಮುಂದುವರೆಸಿದೆ ಎಂದು ಖಚಿತಪಡಿಸಿದೆ.
ಆದರೆ ಇರಾನ್ ವಾದಿಸಿದಂತೆ ಒಂದು ವೇಳೆ ಎಫ್ 35 ವಿಮಾನ ಪತನ ಖಚಿತವಾದರೆ ಅದು ಅಮೆರಿಕದ ಅಹಂಗೆ ಭಾರೀ ಪೆಟ್ಟು ನೀಡಲಿದೆ. ಕಾರಣ ಎಫ್- 35 ವಿಶ್ವದ ಅತ್ಯಾಧುನಿಕ ಸ್ಟೆಲ್ತ್ (ರಾಡಾರ್ ಕಣ್ತಪ್ಪಿಸುವ ಸಾಮರ್ಥ್ಯ) ವಿಮಾನ ಎಂಬ ಹಿರಿಮೆ ಹೊಂದಿದೆ. ವಿಶ್ವದ ಯಾವುದೇ ಅತ್ಯಾಧುನಿಕ ರಾಡಾರ್ ವ್ಯವಸ್ಥೆಯನ್ನು ಭೇದಿಸಿ ಇದು ಶತ್ರುದೇಶದೊಳಗೆ ನುಗ್ಗಬಲ್ಲದು ಎಂದು ಅಮೆರಿಕ ಹೇಳುತ್ತಲೇ ಬಂದಿತ್ತು. ಆದರೆ ಇದೀಗ ಆ ಸ್ಟೆಲ್ತ್ ತಂತ್ರಜ್ಞಾನವನ್ನೇ ಭೇದಿಸಿ ತಾನು ಅದನ್ನು ಹೊಡೆದುರುಳಿಸಿದ್ದಾಗಿ ಇರಾನ್ ಹೇಳಿದೆ. ಇದು ನಿಜವಾದಲ್ಲಿ, ಇರಾನ್ ಸ್ಟೆಲ್ತ್ ತಂತ್ರಜ್ಞಾನ ಭೇದಿಸುವ ಸಾಮರ್ಥ್ಯ ಪಡೆದುಕೊಂಡಂತೆ ಆಗಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧ ವಿಮಾನಗಳಿಗೆ ಭಾರೀ ಅಪಾಯಕಾರಿಯಾಗಿ ಪರಿಣಮಿಸಲಿದೆ.
ಇದರ ಜೊತೆಗೆ ಇರಾನ್‌ನ ಬಹುತೇಕ ರಕ್ಷಣಾ ಸಾಮರ್ಥ್ಯವನ್ನು ನಾವು ಧ್ವಂಸಗೊಳಿಸಿದ್ದೇವೆ. ಅಲ್ಲಿ ಹಾನಿ ಮಾಡಲು ನಮಗೆ ಇನ್ನೇನೂ ಉಳಿದಿಲ್ಲ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಸತತ ಹೇಳಿಕೆ ಹೊರತಾಗಿಯೂ, ಅಮೆರಿಕ ದಾಳಿಯಿಂದ ತನ್ನ ವಾಯುರಕ್ಷಣಾ ವ್ಯವಸ್ಥೆ ಹಾನಿಯಾಗಿದ್ದರೂ, ಅಮೆರಿಕದ ದೈತ್ಯ ವಿಮಾನಗಳನ್ನು ಹೊಡೆದುರುಳಿಸಿದ ಇರಾನ್‌ನ ಶಕ್ತಿ ಭಾರೀ ಅಚ್ಚರಿಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ