
ಇರಾನ್: ತನ್ನ ಅತ್ಯಾಧುನಿಕ ಸ್ಟೆಲ್ತ್ (ರಾಡಾರ್ ಕಣ್ಣಿಂದ ತಪ್ಪಿಸಿಕೊಳ್ಳುವ) ತಂತ್ರಜ್ಞಾನದಿಂದಲೇ ಖ್ಯಾತವಾಗಿರುವ ಅಮೆರಿಕ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಎಫ್ 35 ಮೇಲೆ ಶತ್ರು ದಾಳಿ ಇದೇ ಮೊದಲು. 2019ರಲ್ಲಿ ಅಮೆರಿಕ ವಾಯುಪಡೆಗೆ ಸೇರಿದ 950 ಕೋಟಿ ರು. ಮೌಲ್ಯದ ಈ ವಿಮಾನವು, ರಷ್ಯಾದ ಅತಿ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಾದ ಎಸ್-400 ಕಣ್ಣಿಗೂ ಈ ವಿಮಾನವು ಕಾಣಿಸದು. ಹೀಗಿರುವಾಗ, ದುರ್ಬಲ ವಾಯುಪಡೆ ಹೊಂದಿರುವ ಇರಾನ್‌ನ ಪುಟ್ಟ ಕ್ಷಿಪಣಿ, ಎಫ್ 35 ಗುರುತಿಸಿ ದಾಳಿ ಮಾಡಿದ್ದು ಹೇಗೆ ಎಂಬ ಕುತೂಹಲಕ್ಕೆ ವಿಶ್ಲೇಷಣೆ ಇಲ್ಲಿದೆ.
ಎಫ್-35 ವಿಮಾನವು ಸ್ಟೆಲ್ತ್ ತಂತ್ರಜ್ಞಾನ ಒಳಗೊಂಡಿದೆ. ಅಂದರೆ ವಿಮಾನದ ಇಡೀ ಮೈ ಭಾಗಕ್ಕೆ ಶತ್ರು ದೇಶದ ರಾಡಾರ್ ಸೂಸುವ ಎಲ್ಲಾ ಎಲೆಕ್ಟ್ರೋಮ್ಯಾಗ್ನೆಟಿಕ್ ಸಿಗ್ನಲ್ ಹೀರಿಕೊಳ್ಳುವ ರಾಸಾಯನಿಕವನ್ನು ಲೇಪನ ಮಾಡಲಾಗಿದೆ. ಇದು ವಿಮಾನದ ಇರುವಿಕೆ ರಹಸ್ಯ ಕಾಪಾಡುತ್ತೆ. ಈ ತಂತ್ರಜ್ಞಾನಕ್ಕಾಗಿ ಅಮೆರಿಕ ಸಾವಿರಾರು ಕೋಟಿ ರು. ವ್ಯಯಿಸಿದೆ.
ಆದರೆ ಇಷ್ಟೆಲ್ಲಾ ಆದರೂ ಈ ವಿಮಾನದಲ್ಲಿ ಸಣ್ಣ ರಹಸ್ಯವೊಂದಿದೆ. ಅದೇನೆಂದರೆ ವಿಮಾನ ಹಾರುವಾಗ ಭಾರೀ ಪ್ರಮಾಣದಲ್ಲಿ ಹೊರಹೊಮ್ಮುವ ಬೆಂಕಿಯ ಜ್ವಾಲೆ ಉಗುಳುವ ವಿಮಾನದ ಹಿಂಭಾಗಕ್ಕೆ ಇಂಥ ಲೇಪನ ಮಾಡುವುದು ಸಾಧ್ಯವಿಲ್ಲ. ಇದನ್ನು ಇರಾನ್ ಪತ್ತೆ ಮಾಡಿತ್ತು.
ಹೀಗಾಗಿಯೇ ಅಮೆರಿಕದ ವಿಮಾನ ಪತ್ತೆಗೆ ಇರುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿಗ್ನಲ್ ಬಿಟ್ಟು ತನ್ನದೇ ಐಆರ್‌ಎಸ್‌ಟಿ (ಇನ್ಫ್ರಾರೆಡ್ ಹುಡುಕಾಟ ಮತ್ತು ಟ್ರ್ಯಾಕಿಂಗ್) ವ್ಯವಸ್ಥೆ ಬಳಸಿಕೊಂಡಿದೆ. ಇದು ಆಗಸದಲ್ಲಿನ ವಸ್ತುಗಳ ಉಷ್ಣಾಂಶ ಟ್ರ್ಯಾಕ್ ಮಾಡುತ್ತದೆ.
ಇದೇ ತಂತ್ರಜ್ಞಾನ ಬಳಸಿಕೊಂಡು ತನ್ನ ದೇಶದೊಳಗೆ ಅಮೆರಿಕದ ಯುದ್ಧ ವಿಮಾನ ನುಸುಳಿದಾಗ ಅದನ್ನು ಇರಾನ್ ಪತ್ತೆ ಮಾಡಿದೆ. ಐಆರ್‌ಎಸ್‌ಟಿ ಯಾವುದೇ ಸಿಗ್ನಲ್ ರವಾನಿಸದ ಕಾರಣ, ತಾನು ಪತ್ತೆಯಾದ ಬಗ್ಗೆ ಎಫ್-35ನ ಪೈಲಟ್‌ಗೆ ಸುಳಿವೂ ಸಿಗುವುದಿಲ್ಲ. ಒಂದೊಮ್ಮೆ ತಿಳಿದರೂ ಅದನ್ನು ತಕ್ಷಣಕ್ಕೆ ಜ್ಯಾಮ್ ಮಾಡುವುದು ಸಾಧ್ಯವಿಲ್ಲ.
ಯುದ್ಧದ ವಿಮಾನದ ಸುಳಿವು ಪತ್ತೆಯಾಗುತ್ತಲೇ, ಇರಾನ್ ತನ್ನ ಅರ್ಧ ಡ್ರೋನ್ ಹಾಗೂ ಅರ್ಧ ಕ್ಷಿಪಣಿಯಂತಹ ಎಸ್‌ಎ-67 ಕ್ಷಿಪಣಿಯನ್ನು ಆಗಸಕ್ಕೆ ಹಾರಿಬಿಟ್ಟಿದೆ. ಇತ್ತ ಅಮೆರಿಕದ ಯುದ್ಧವಿಮಾನ ಪತ್ತೆಯಾಗುತ್ತಿದ್ದಂತೆ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುನ್ನುಗ್ಗಿದೆ.
ಇದನ್ನೂ ಓದಿ: Iran attack on Gulf countries: ಡೊನಾಲ್ಡ್ ಟ್ರಂಪ್ 'ಶಿಲಾಯುಗ' ಎಚ್ಚರಿಕೆ ಬೆನ್ನಲ್ಲೇ ಇರಾನ್ ದಾಳಿ ತೀವ್ರ!
ಹೀಗೆ ಸಿಕ್ಕಿಬಿದ್ದ ಎಫ್-35 ಅನ್ನು ಇರಾನ್‌ನ ಮಿಸೈಲ್ ಬೆನ್ನು ಹತ್ತಿರುವ ಬಗ್ಗೆ ಅದರ ಪೈಲಟ್‌ಗೆ ತಿಳಿದು ವಿಮಾನದ ದಿಕ್ಕನ್ನು ಬದಲಿಸುತ್ತಾನೆ. ಜತೆಗೆ ಹಿಂಬದಿಯಿಂದ ಬೆಂಕಿಯುಂಡೆ ಹಾರಿಬಿಡುವ ಮೂಲಕ ಆ ಕ್ಷಿಪಣಿಯನ್ನು ಗೊಂದಲಕ್ಕೀಡುಮಾಡಲು ಯತ್ನಿಸಿದ್ದಾನೆ.
ಆದರೆ ತನ್ನ ಗುರಿಯನ್ನಷ್ಟೇ ನೋಡುತ್ತಾ ಮುನ್ನುಗ್ಗುತ್ತಿದ್ದ ಎಸ್‌ಎ-67, ಎಫ್-35ರ ಸನಿಹಕ್ಕೆ ಬರುತ್ತಿದ್ದಂತೆ ಸ್ಫೋಟಿಸಿದೆ. ಹೀಗೆ ಅಮೆರಿಕ ಸಾವಿರಾರು ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ್ದ ವಿಮಾನವನ್ನು ಇರಾನ್ ಸರಳ ತಂತ್ರಜ್ಞಾನ ಬಳಸಿ ಹೊಡೆದುಹಾಕಿದೆ.
ಇದನ್ನೂ ಓದಿ: ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ