ಅಮೆರಿಕಕ್ಕೆ ಮತ್ತೆ ಕೋವಿಡ್‌ ಗಂಡಾಂತರ: ಹಲವೆಡೆ ಆಕ್ಸಿಜನ್‌ ಸಿಗದೆ ಹಾಹಾಕಾರ!

By Suvarna NewsFirst Published Aug 29, 2021, 7:33 AM IST
Highlights

* ಅಮೆರಿಕಕ್ಕೆ ಮತ್ತೆ ಕೋವಿಡ್‌ ಗಂಡಾಂತರ: ಹಲವೆಡೆ ಆಕ್ಸಿಜನ್‌ ಸಿಗದೆ ಹಾಹಾಕಾರ

* ಪ್ರತಿನಿತ್ಯ 1.5 ಲಕ್ಷಕ್ಕೂ ಹೆಚ್ಚು ಕೇಸ್‌

* 1 ಲಕ್ಷ ಮಂದಿ ಆಸ್ಪತ್ರೆಯಲ್ಲಿ: 8 ತಿಂಗಳ ಗರಿಷ್ಠ

* ಫ್ಲೋರಿಡಾ ಸ್ಥಿತಿ ಗಂಭೀರ

* 68 ಆಸ್ಪತ್ರೆಗಳಲ್ಲಿ 2 ದಿನಗಳಿಗೆ ಆಗುವಷ್ಟೇ ಆಕ್ಸಿಜನ್‌ ಲಭ್ಯ

 

ನ್ಯೂಯಾರ್ಕ್: ಅಮೆರಿಕದಲ್ಲಿ ಮತ್ತೊಮ್ಮೆ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಪ್ರತಿನಿತ್ಯ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಹೊಸ ಪ್ರಕರಣಗಳು ಹಾಗೂ 1 ಸಾವಿರಕ್ಕಿಂತಲೂ ಹೆಚ್ಚಿನ ಸಾವು ಸಂಭವಿಸುತ್ತಿದೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿದ್ದು, ಆಮ್ಲಜನಕದ ತೀವ್ರ ಅಭಾವ ಸಷ್ಟಿಯಾಗಿದೆ. ಅಮೆರಿಕದಲ್ಲಿ ಲಸಿಕೆಯ ಅಭಿಯಾನ ವೇಗವಾಗಿ ಕೈಗೊಂಡಿರುವ ಹೊರತಾಗಿಯೂ ರೂಪಾಂತರಿ ಡೆಲ್ಟಾವೈರಸ್‌ನ ಪ್ರಭಾವದಿಂದಾಗಿ ಮತ್ತೊಮ್ಮೆ ದೈನಂದಿನ ಕೊರೋನಾ ಪ್ರಕಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ಅಮೆರಿಕದಲ್ಲಿ 1.90 ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದು, 1304 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಏರಿಕೆ ಆಗಿದ್ದು, ಅವರ ಪೈಕಿ 1 ಲಕ್ಷಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 8 ತಿಂಗಳಿನಲ್ಲಿಯೇ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣ ಅತ್ಯಧಿಕ ಎನಿಸಿಕೊಂಡಿದೆ.

ಇನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಕಳೆದ ಒಂದು ವಾರದಿಂದ ಗಂಟೆಗೆ ಸರಾಸರಿ 500ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ ಎಂದು ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಮಾಹಿತಿ ನೀಡಿದೆ.

ಅಮೆರಿಕದಲ್ಲಿ ಜ.6ರಂದು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಸಾರ್ವಕಾಲಿಕ ಏರಿಕೆ ದಾಖಲಿಸಿದ ಸಂದರ್ಭದಲ್ಲಿ 1,32,051 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ 1 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಫ್ಲೋರಿಡಾದಲ್ಲಿ ಆಕ್ಸಿ​ಜ​ನ್‌ಗೆ ಹಾಹಾ​ಕಾ​ರ:

ಇದೇ ವೇಳೆ ಫ್ಲೋರಿಡಾ ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ರೋಗಿಗಳ ಚಿಕಿತ್ಸೆಗೆ ಆಮ್ಲಜನಕದ ತೀವ್ರ ಅಭಾವ ಸಷ್ಟಿಯಾಗಿದೆ. ಎಲ್ಲಾ ಆಸ್ಪತ್ರೆಗಳು ಬಹುತೇಕ ಭರ್ತಿ ಆಗಿವೆ. ಫ್ಲೋರಿಡಾವೊಂದರಲ್ಲಿಯೇ ಕಳೆ​ದೊಂದು ವಾರ​ದಲ್ಲಿ ಪ್ರತಿನಿತ್ಯ ಸರಾಸರಿ 227 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಫ್ಲೋರಿಡಾ ಆಸ್ಪತ್ರೆ ಸಂಘಟನೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ರಾಜ್ಯದ 68 ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಕೇವಲ 48 ಗಂಟೆಗಳಿಗೆ ಮಾತ್ರ ಸಾಕಾಗುವಷ್ಟಿದೆ. ಆಮ್ಲಜನಕ ಸಿಲಿಂಡರ್‌ಗಳಿಗೆ ಹಾಹಾಕಾರ ಸೃಷ್ಟಿಯಾಗಿದೆ.

ಅದೇ ರೀತಿ ಇತರ ರಾಜ್ಯಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಟೆಕ್ಸಾಸ್‌ ಹಾಗೂ ಕ್ಯಾಲಿಫೋರ್ನಿಯಾದಲ್ಲಿಯೂ ಅಧಿಕ ಪ್ರಮಾಣದ ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಅಲಬಾಮಾ, ಜಾರ್ಜಿಯಾದ ಆಸ್ಪತ್ರೆಗಳಲ್ಲಿ ಶೇ.95ರಷ್ಟುಐಸಿಯು ಬೆಡ್‌ಗಳು ಈಗಾಗಲೇ ಭರ್ತಿ ಆಗಿವೆ.

ಜನರನ್ನು ಕಾಡುತ್ತಿದೆ ಡೆಲ್ಟಾವೈರಸ್‌:

ಅಮೆರಿಕದಲ್ಲಿ ಈ ವರ್ಷದ ಜನವರಿಯಲ್ಲಿ ಲಸಿಕೆ ಅಭಿಯಾನ ಬಿರುಸಿನಿಂದ ಆರಂಭವಾದ ಬಳಿಕ ಕೊರೋನಾ ಪ್ರಕಣಗಳಲ್ಲಿ ಗಣನೀಯ ಇಳಿಕೆ ಆಗಿತ್ತು. ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ 13,843ಕ್ಕೆ ಇಳಿದಿತ್ತು. ಆದರೆ, ಭಾರತದಲ್ಲಿ ಭೀಕರ 2ನೇ ಅಲೆಗೆ ಕಾರಣವದ ಡೆಲ್ಟಾವೈರಸ್‌ ಅಮೆರಿಕಕ್ಕೂ ಕಾಲಿಟ್ಟಬಳಿಕ ಜುಲೈನಿಂದ ಕೊರೋನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆ ಆಗುತ್ತಿದೆ.

ದೇಶ​ದಲ್ಲಿ ಇನ್ನೂ ಶೇ.32ರಷ್ಟುಜನ ಲಸಿಕೆ ಪಡೆ​ದಿಲ್ಲ. ಹೀಗಾಗಿ ಲಸಿಕೆ ಪಡೆಯದೇ ಇರುವ ಜನರಲ್ಲಿ ಡೆಲ್ಟಾವೈರಸ್‌ ವ್ಯಾಪಕವಾಗಿ ಪಸರಿಸುತ್ತಿದೆ. ಅಲ್ಲದೇ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸದ್ಯ ಅಮೆರಿಕದಲ್ಲಿ 2000ಕ್ಕೂ ಹೆಚ್ಚು ಮಕ್ಕಳು ಕೋವಿಡ್‌- 19 ಶಿಶು ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಮತ್ತು ಮಾನವ ಸೇವಾ ಇಲಾಖೆ ತಿಳಿಸಿದೆ.

ಡೆಲ್ಟಾ ತಂದ ಆಪತ್ತು

- ಜನವರಿಯಲ್ಲಿ ಲಸಿಕಾ ಅಭಿಯಾನ ಬಿರುಸಾದ ಬಳಿಕ ಅಮೆರಿಕದಲ್ಲಿ ಇಳಿಮುಖವಾಗಿದ್ದ ಸೋಂಕಿನ ಪ್ರಮಾಣ

- ಆದರೆ, ಭಾರತದಲ್ಲಿ 2ನೇ ಅಲೆ ಎಬ್ಬಿಸಿದ್ದ ಕೊರೋನಾದ ಡೆಲ್ಟಾರೂಪಾಂತರಿ ತಳಿ ಈಗ ಅಮೆರಿಕದಲ್ಲಿ ಅಬ್ಬರ

- ಶುಕ್ರವಾರ ಒಂದೇ ದಿನ 1.9 ಲಕ್ಷ ಹೊಸ ಕೇಸು. ಅಮೆರಿಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಏರಿಕೆ

- ಜುಲೈನಿಂದೀಚೆಗೆ ಕೋವಿಡ್‌ ಉಲ್ಬಣ. ಕಳೆದ 1 ವಾರದಿಂದ ಪ್ರತಿ ತಾಸಿಗೆ 500 ಮಂದಿ ಆಸ್ಪತ್ರೆಗೆ ದಾಖಲು

ಸ್ಪೇಸ್‌-ಎಕ್ಸ್‌ಗೂ ಆಕ್ಸಿಜನ್‌ ಅಭಾವ

ಶತಕೋಟ್ಯಧಿಪತಿ ಎಲಾನ್‌ ಮಸ್ಕ್‌ ಅವರ ಸ್ಪೇಸ್‌-ಎಕ್ಸ್‌ ಸಂಸ್ಥೆಗೂ ಆಕ್ಸಿಜನ್‌ ಅಭಾವ ಕಾಡಿದೆ. ಬಾಹ್ಯಾಕಾಶ ಯಾನ, ಉಪಗ್ರಹ ಉಡಾವಣೆಗೆ ನೆರವಾಗುವ ಸ್ಪೇಸ್‌-ಎಕ್ಸ್‌ನ ಫಾಲ್ಕನ್‌-9 ಶ್ರೇಣಿಯ ರಾಕೆಟ್‌ಗಳನ್ನು ಹಾರಿಬಿಡಲು ದ್ರವರೂಪದ ಆಮ್ಲಜನಕ ಅತ್ಯಗತ್ಯವಾಗಿದ್ದು, ಆಸ್ಪತ್ರೆಗಳಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಸ್ಥೆಗೆ ಬೇಕಾದಷ್ಟುದಾಸ್ತಾನು ದೊರಕುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ, ಅನೇಕ ಬಾಹ್ಯಾಕಾಶ ಯೋಜನೆಗಳು ವಿಳಂಬವಾಗುವ ಸಾಧ್ಯತೆ ಇದೆ.

click me!