ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಪ್ರಕಾರ, ಪುಟಿನ್ ಶೀಘ್ರದಲ್ಲೇ ಸಾವನ್ನಪ್ಪಲಿದ್ದು, ಉಕ್ರೇನ್-ರಷ್ಯಾ ಯುದ್ಧ ಕೊನೆಗೊಳ್ಳಲಿದೆ.
ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಸಾವನ್ನಪ್ಪಲ್ಲಿದ್ದು, ಅದರೊಂದಿಗೆ ಉಕ್ರೇನ್-ರಷ್ಯಾ ಯುದ್ಧಕ್ಕೆ ತೆರೆ ಬೀಳಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ. ಪುಟಿನ್ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ. ಯುರೋಪಿಯನ್ ಒಕ್ಕೂಟದ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಜೆಲೆನ್ಸ್ಕಿಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೋದಿ ಆಹ್ವಾನಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿಗೆ: ಶೀಘ್ರ ಭಾರತಕ್ಕೆ ಭೇಟಿ
ಮಾಸ್ಕೋ: ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಹ್ವಾನವನ್ನು ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಸ್ವೀಕರಿಸಿದ್ದು, ಶೀಘ್ರವೇ ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಕುರಿತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೇ ಲಾವೋವ್ ಪ್ರತಿಕ್ರಿಯೆ ನೀಡಿದ್ದು, ಮೋದಿ ಆಹ್ವಾನವನ್ನು ಪುಟಿನ್ ಸ್ವೀಕರಿಸಿದ್ದಾರೆ. ಪುಟಿನ್ ಭೇಟಿ ಪ್ರಕ್ರಿಯೆ ಆರಂಭಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಭೇಟಿ ನೀಡಿದ ಮೊದಲ ದೇಶ ರಷ್ಯಾವಾಗಿತ್ತು. ಈಗ ಅದು ನಮ್ಮ ಸರದಿ ಎಂದರು. ಆದರೆ ಪುಟಿನ್ ಭೇಟಿಯ ದಿನಾಂಕ ಇನ್ನು ಪ್ರಕಟವಾಗಿಲ್ಲ.
ಪ್ರವಾಸಿ ಸಬ್ ಮರೀನ್ ಮುಳುಗಿ ಈಜಿಪ್ಟನಲ್ಲಿ 6 ಪ್ರಯಾಣಿಕರ ಸಾವು
ಕೈರೋ: ಈಜಿಫ್ಟ್‌ನ ಕರಾವಳಿ ತೀರದಲ್ಲಿ ಪ್ರವಾಸಿಗರ ಹೊತ್ತೊಯ್ಯುತ್ತಿದ್ದ ಸಬ್‌ಮರೀನ್ ಮುಳುಗಿ 6 ಮಂದಿ ಸಾವನ್ನಪ್ಪಿದ್ದು, 9 ಪ್ರವಾಸಿಗರು ಗಾಯಗೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಇಲ್ಲಿನ ಹರ್ಘಾಡದ ಕೆಂಪು ಸಮುದ್ರ ರೆಸಾರ್ಟ್‌ನಲ್ಲಿರುವ ಪ್ರವಾಸಿ ವಾಯುವಿಹಾರ ಪ್ರದೇಶದಲ್ಲಿ ಘಟನೆ ನಡೆದಿದೆ. ಸಬ್ ಮರೀನ್ ನಲ್ಲಿ 45 ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುತ್ತಿದ್ದು, 29 ಜನರನ್ನು ರಕ್ಷಿಸಲಾಗಿದೆ. 2023ರ ಜೂನ್‌ನಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಅಟ್ಲಾಂಟಿಕ್ ಸಾಗರಕ್ಕೆ ತೆರಳಿದ್ದ ವೇಳೆ ಐವರು ಸಬ್ ಮರೀನ್ ಸ್ಪೋಟದಿಂದ ಸಾವನ್ನಪ್ಪಿದ್ದರು.
ಸಂಭಲ್: ಮನೆ, ರಸ್ತೆ ಮೇಲೆ ನಮಾಜ್ ಮಾಡುವುದಕ್ಕೆ ನಿಷೇಧ
ಸಂಭಲ್: ಕಳೆದ ವರ್ಷ ನವೆಂಬರ್‌ನಿಂದ ಭಾರಿ ಕೋಮುಗಲಭೆ, ಸಾವು ನೋವಿಗೆ ಸಾಕ್ಷಿಯಾಗಿರುವ ಉತ್ತರ ಪ್ರದೇಶದ ಸಂಭಲ್‌ನಲ್ಲಿ ರಂಜಾನ್ ಹಬ್ಬದ ವೇಳೆ ಮನೆ, ಕಟ್ಟಡಗಳ ಮೇಲೆ, ರಸ್ತೆ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ಬಿಷ್ಟೋಯಿ, 'ರಸ್ತೆ ಮೇಲೆ ನಮಾಜ್ ಮಾಡಿದರೆ, ಅದು ಅಪಘಾತಕ್ಕೆ ಕಾರಣವಾಗಲಿದೆ. ಅದೇ ರೀತಿ ರಸ್ತೆ ಮೇಲೆ ನಮಾಜ್ ನಿಷೇಧ ಈ ಹಿಂದಿನಿಂದಲೂ ಜಾರಿಯಲ್ಲಿದೆ. ಕೇವಲ ಮಸೀದಿ ಮತ್ತು ಈದ್ಗಾಗಳಲ್ಲಿ ಮಾತ್ರ ನಮಾಜ್‌ಗೆ ಅವಕಾಶ ಇದೆ' ಎಂದು ಹೇಳಿದರು.