
ಒಟ್ಟಾವಾ (ಮಾ.28): ಭಾರತದ ಸರ್ಕಾರದ ಜೊತೆಗೆ ಸಂಪರ್ಕ ಹೊಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಕೆನಡಾದ ಲಿಬರಲ್ ಪಕ್ಷವು, ಲಿಬರಲ್ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮುಂಬರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕನ್ನಡಿಗ ಚಂದ್ರ ಆರ್ಯ ಅವರಿಗೆ ನಿಷೇಧ ಹೇರಿದೆ. ಇಂಥದ್ದೊಂದು ನಿಷೇಧಕ್ಕೆ ಲಿಬರಲ್ ಪಕ್ಷ ಬಹಿರಂಗವಾಗಿ ಯಾವುದೇ ಕಾರಣಗಳನ್ನು ನೀಡದೇ ಇದ್ದರೂ, ಭಾರತ ಸರ್ಕಾರದೊಂದಿಗಿನ ಆರ್ಯ ನಂಟಿನ ಕಾರಣಕ್ಕೆ ಅವರಿಗೆ ಈ ಶಿಕ್ಷೆ ನೀಡಲಾಗಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ‘ಗ್ಲೋಬ್ ಆ್ಯಂಡ್ ಮೇಲ್’ ಪತ್ರಿಕೆ ವರದಿ ಮಾಡಿದೆ.
ಈ ಹಿಂದೆ ನೇಪಿಯನ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದ ಕರ್ನಾಟಕದ ತುಮಕೂರು ಮೂಲದ ಚಂದ್ರ ಆರ್ಯ, ಈ ಬಾರಿಯೂ ಅದೇ ಕ್ಷೇತ್ರದಿಂದ ಆಯ್ಕೆ ಬಯಸಿದ್ದರು. ಜೊತೆಗೆ ತಾವು ಕೂಡಾ ಮುಂದಿನ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇರುವುದಾಗಿ ಹೇಳಿದ್ದರು. ಆದರೆ ಕಳೆದ ವರ್ಷ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಪೂರ್ಣ ಹದಗೆಟ್ಟ ಹೊತ್ತಿನಲ್ಲೇ ಚಂದ್ರ ಆರ್ಯ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಕುರಿತ ಮಾಹಿತಿಯನ್ನು ಅವರು ಪಕ್ಷದೊಂದಿಗೆ ಹಂಚಿಕೊಂಡಿಲ್ಲ ಎಂಬ ಕಾರಣ ನೀಡಿ ಇದೀಗ ಅವರಿಗೆ ಮುಂಬರುವ ಸಂಸತ್ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಜೊತೆಗೆ, ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೂ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿದೆ.
ಎಸ್ಸಿ ಒಳ ಮೀಸಲಾತಿಗಾಗಿ ಮತ್ತೊಂದು ಸಮೀಕ್ಷೆ: ನ್ಯಾ.ನಾಗಮೋಹನದಾಸ್ ಆಯೋಗಕ್ಕೇ ಹೊಣೆ
ಈ ನಡುವೆ ಭಾರತದ ಅಣತಿಯಂತೆ ತಾವು ನಡೆದುಕೊಳ್ಳುತ್ತಿರುವುದಾಗಿ ಕೇಳಿಬಂದ ಆರೋಪಗಳನ್ನು ಪೂರ್ಣವಾಗಿ ತಿರಸ್ಕರಿಸಿರುವ ಚಂದ್ರ ಆರ್ಯ, ‘ಸಂಸತ್ತಿನ ಸದಸ್ಯನಾಗಿ ನಾನು ಕೆನಡಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ರಾಜತಾಂತ್ರಿಕರು ಮತ್ತು ಸರ್ಕಾರದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದೇನೆ. ಹಾಗೆ ನಡೆಸಲು ನಾನು ಒಮ್ಮೆಯೂ ಸರ್ಕಾರದಿಂದ ಅನುಮತಿ ಪಡೆದಿಲ್ಲ. ಹಾಗೆಯೇ ಮಾಡುವ ಅಗತ್ಯವೂ ಇಲ್ಲ. ಜೊತೆಗೆ ಕೆನಡಾ ಹಿಂದೂಗಳ ಪರ ಹೋರಾಟ ಮತ್ತು ಖಲಿಸ್ತಾನಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ