ರಷ್ಯಾದ 40 ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದ'ಗೋಸ್ಟ್ ಆಫ್ ಕೀವ್' ಸಾವು!

By Santosh NaikFirst Published Apr 30, 2022, 1:43 PM IST
Highlights

ಗೋಸ್ಟ್ ಆಫ್ ಕೀವ್ ಎಂದು ಕರೆಯಲ್ಪಡುವ ಉಕ್ರೇನಿಯನ್ ಫೈಟರ್ ಪೈಲಟ್ ಕಳೆದ ತಿಂಗಳು ಯುದ್ಧಭೂಮಿಯಲ್ಲಿ ಸಾವಿಗೀಡಾಗಿದ್ದಾರೆ. ಅವರನ್ನು ಈಗ ಮೇಜರ್ ಸ್ಟೆಪನ್ ತರಬಲ್ಕಾ ಎಂದು ಗುರುತಿಸಲಾಗಿದೆ.
 

ಕೀವ್ (ಏ.30): ಗೋಸ್ಟ್ ಆಫ್ ಕೀವ್ (Ghost of Kyiv) ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿದ್ದ ಉಕ್ರೇನ್ ಏರ್ ಫೋರ್ಸ್ ನ  (Ukraine AirForce) ಫೈಟರ್ ಪೈಲಟ್ (Fighter Pilot) ಕಳೆದ ತಿಂಗಳು ಸಾವಿಗೀಡಾಗಿದ್ದಾರೆ. ರಷ್ಯಾ  ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ (Russia and Ukraine War) 40 ರಷ್ಯಾದ ವಿಮಾನಗಳನ್ನು ಹೊಡೆದುರುಳಿಸಿದ ನಂತರ ಅವರು ಸಾವಿಗೀಡಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಗೋಸ್ಟ್ ಆಫ್ ಕೀವ್ ಮರಣದ ನಂತರ, ನಿಗೂಢ ಏರ್ ಮ್ಯಾನ್ ಅನ್ನು 29 ವರ್ಷದ ಮೇಜರ್  ಸ್ಟೆಪನ್ ತರಬಲ್ಕಾ (Major Stepan Tarabalka) ಎಂದು ಬಹಿರಂಗಪಡಿಸಲಾಗಿದೆ. ಮಾರ್ಚ್ 13 ರಂದು ಅವರು ಶತ್ರುಪಡೆಗಳೊಂದಿಗೆ ಆಗಸದಲ್ಲಿ ಹೋರಾಟ ನಡೆಸುತ್ತಿದ್ದ ವೇಳೆ, ಅವರು ಹಾರಾಟ ಮಾಡುತ್ತಿದ್ದ ಮಿಗ್-29 ಯುದ್ಧ ವಿಮಾನವನ್ನು ರಷ್ಯಾ ಹೊಡೆದುರುಳಿಸಿತ್ತು. ಈ ವೇಳೆ ತರಬಲ್ಕಾ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯುದ್ಧದ ಮೊದಲ ದಿನವೇ ರಷ್ಯಾದ ಆರು ಯುದ್ಧ ವಿಮಾನವನ್ನು ತರಬಲ್ಕಾ ಹೊಡೆದುರುಳಿಸಿದ್ದರು. ಇದನ್ನು ಉಕ್ರೇನ್ ಸರ್ಕಾರ ಕೂಡ ಅಧಿಕೃತಗೊಳಿಸಿ, ತರಬಲ್ಕಾರನ್ನು "ಗಾರ್ಡಿಯನ್ ಏಂಜೆಲ್" ಎಂದು ಶ್ಲಾಘನೆ ಮಾಡಿತ್ತು. ಇಡೀ ಉಕ್ರೇನ್ ಜನತೆ ಕೂಡ ಈ ಸಾಹಸವನ್ನು ಮೆಚ್ಚಿಕೊಂಡು ಫೈಟರ್ ಪೈಲಟ್ ಗೆ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿತ್ತು. ಆ ವೇಳೆ ಅವರ ಗುರುತನ್ನು ಸರ್ಕಾರ ಬಹಿರಂಗ ಮಾಡಿರಲಿಲ್ಲ. ಅವರ ಸುತ್ತಲೂ ಸುತ್ತುವರಿದಿರುವ ರಹಸ್ಯ ಹಾಗೆಯೇ ಇರಲಿ ಎನ್ನುವ ಕಾರಣಕ್ಕೆ ಉಕ್ರೇನ್ ಏರ್ ಫೋರ್ಸ್ ಹಾಗೂ ಉಕ್ರೇನ್ ಸರ್ಕಾರ ಈ ಫೈಟರ್ ಪೈಲಟ್ ಯಾರು ಎನ್ನುವುದನ್ನು ಬಹಿರಂಗ ಮಾಡಿರಲಿಲ್ಲ. ಇದರ ಬೆನ್ನಲ್ಲೇ ಜನರು ಇವರನ್ನು ಗೋಸ್ಟ್ ಆಫ್ ಕೀವ್ ಎನ್ನುವ ಹೆಸರಿನಿಂದ ಗುರುತಿಸಲು ಆರಂಭಿಸಿದ್ದರು.

"ಜನರು ಅವನನ್ನು ಗೋಸ್ಟ್ ಆಫ್ ಕೀವ್ ಎಂದು ಕರೆಯುತ್ತಾರೆ. ಇದು ಆತನಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ" ಎಂದು ಉಕ್ರೇನಿಯನ್ ಸರ್ಕಾರದ ಅಧಿಕೃತ ಟ್ವೀಟ್ ನಲ್ಲಿ ಹೇಳಲಾಗಿದೆ. ಈಗಾಗಲೇ ಅವರು, ಉಕ್ರೇನ್ ನೆಲದ ಮೇಲೆ ಅಕ್ರಮಣ ಮಾಡಲು ಬರುತ್ತಿರುವ ರಷ್ಯಾದ ಯುದ್ಧ ವಿಮಾನಗಳಿಗೆ ದುಃಸ್ವಪ್ನರಾಗಿದ್ದಾರೆ ಎಂದು ಹೇಳಿದ್ದಾರೆ.

ಉಕ್ರೇನ್‌ನ ಜನರಲ್ ಸ್ಟಾಫ್ ನಂತರ ತನ್ನ MiG-29 ಜೆಟ್‌ನ ಕಾಕ್‌ಪಿಟ್‌ನಲ್ಲಿ ತನ್ನ ಮುಖವನ್ನು ಮುಚ್ಚಿರುವ ಫೈಟರ್ ಪೈಲಟ್‌ನ ಮತ್ತೊಂದು ಚಿತ್ರವನ್ನು ಟ್ವೀಟ್ ಮಾಡಿ, ಅವರಿಗೆ ಗೌರವ ಸಲ್ಲಿಸಿದ್ದಾರೆ. ಮೇಜರ್ ತರಾಬಲ್ಕಾ ಅವರಿಗೆ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಮರಣೋತ್ತರವಾಗಿ ಉಕ್ರೇನ್ ನ ಉನ್ನತ ಪದಕವನ್ನು ನೀಡಲಾಗಿದೆ. ಆರ್ಡರ್ ಆಫ್ ದಿ ಗೋಲ್ಡನ್ ಸ್ಟಾರ್, ಉಕ್ರೇನ್ ಹೀರೋ ಎಂಬ ಶೀರ್ಷಿಕೆಯೊಂದಿಗೆ. ಅವರು ಪತ್ನಿ ಒಲೆನಿಯಾ ಮತ್ತು ಎಂಟು ವರ್ಷದ ಮಗ ಯಾರಿಕ್ ಅವರನ್ನು ಅಗಲಿದ್ದಾರೆ.

ದಿ ಟೈಮ್ಸ್ ಪ್ರಕಾರ, ಮೇಜರ್ ತರಬಲ್ಕಾ ಮತ್ತು ಪಶ್ಚಿಮ ಉಕ್ರೇನ್‌ನ ಕೊರೊಲಿವ್ಕಾ ಎಂಬ ಸಣ್ಣ ಹಳ್ಳಿಯಲ್ಲಿ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ತನ್ನ ಹಳ್ಳಿಯ ಮೇಲೆ ಫೈಟರ್ ಜೆಟ್‌ಗಳು ಆಕಾಶದಲ್ಲಿ ಹಾರುವುದನ್ನು ನೋಡುತ್ತಿದ್ದ ತರಾಬಲ್ಕಾ  ಚಿಕ್ಕಂದಿನಿಂದಲೇ ತಾವೊಬ್ಬ ಫೈಟರ್ ಪೈಲಟ್ ಆಗಬೇಕು ಎಂದು ಬಯಸಿದ್ದರಂತೆ.

Russia-Ukraine War: ರಷ್ಯಾದ ನೌಕೆಗಳಿಗೆ ಡಾಲ್ಫಿನ್‌ ರಕ್ಷಣೆ!

ಮೇಜರ್ ತರಬಲ್ಕಾ ಅವರ ಅಂತಿಮ ಹಂತದ ಹೋರಾಟ ಹಾಗೂ ಸಾವಿನ ಬಗ್ಗೆ ಯಾವುದೇ ವಿವರಗಳನ್ನು ನೀಡುವುದಿಲ್ಲ ಎಂದು ಉಕ್ರೇನ್ ಸೇನೆ ತಿಳಿಸಿದೆ ಎಂದು ಪೋಷಕರು ತಿಳಿಸಿದ್ದಾರೆ. "ಒಂದು ಕಾರ್ಯಾಚರಣೆಯ ಭಾಗವಾಗಿ ತರಬಲ್ಕಾ ಇದ್ದರು ಎನ್ನುವ  ಮಾಹಿತಿ ಗೊತ್ತಿದೆ. ತಮಗೆ ಕೊಟ್ಟಿದ್ದ ಟಾಸ್ಕ್ ಅನ್ನು ಕೂಡ ಅವರು ಪೂರ್ತಿ ಮಾಡಿದ್ದರು. ಆದರೆ, ನಂತರ ಅವರು ಹಿಂತಿರುಗಲಿಲ್ಲ ಎನ್ನುವಷ್ಟೇ ಮಾಹಿತಿ ನಮಗೆ ಸಿಕ್ಕಿದೆ' ಎಂದು ತರಬಲ್ಕಾ ಅವರ ತಂದೆ ಇವಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Russia Ukraine War ಉಕ್ರೇನ್‌ನ ಮತ್ತೊಂದು ನಗರ ರಷ್ಯಾ ವಶಕ್ಕೆ

ಇದರ ನಡುವೆ ಬಹುತೇಕ ಮಂದಿ ಗೋಸ್ಟ್ ಆಫ್ ಕೀವ್ ಎನ್ನುವ ವ್ಯಕ್ತಿ ನಿಜವಾಗಿಯೂ ಇದ್ದಾನೆಯೇ ಎಂದು ಪ್ರಶ್ನೆ ಮಾಡಿದ್ದರು. ಉಕ್ರೇನ್ ಸರ್ಕಾರವು, ತನ್ನ ಸೈನಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಇಂಥ ಕಟ್ಟುಕಥೆಗಳನ್ನು ಕಟ್ಟುತ್ತಿದೆ ಎಂದೆಲ್ಲಾ ಹೇಳಲಾಗಿತ್ತು. ತರಬಲ್ಕಾ ಅವರ ಪೋಷಕರಿಗೂ ಇದರ ಬಗ್ಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ. ಆದರೆ, ಅವರ ಸಾವಿನ ಬಳಿಕ ಗೋಸ್ಟ್ ಆಫ್ ಕೀವ್ ಎನ್ನುವ ವ್ಯಕ್ತಿ ಇದ್ದ ಎನ್ನುವುದು ಬಹಿರಂಗವಾಗಿದೆ. 

click me!