Russia Ukraine war latest news: ರಷ್ಯಾ ಉಕ್ರೇನ್ ಮೇಲಿನ ಯುದ್ಧ ತೀವ್ರತೆಯನ್ನು ಹೆಚ್ಚಿಸಿದ ಬೆನ್ನಲ್ಲೇ ವಿಶ್ವ ಸಂಸ್ಥೆಯ ತುರ್ತು ಸಭೆಯಲ್ಲಿ ರಷ್ಯಾ ಒಂದು ಭಯೋತ್ಪಾದಕ ದೇಶ ಎಂದು ಉಕ್ರೇನ್ ಖಂಡಿಸಿದೆ. ವ್ಲಾಡಿಮಿರ್ ಪುಟಿನ್ ಒಬ್ಬ ಸರ್ವಾಧಿಕಾರಿ ಅವರ ಜೊತೆ ಶಾಂತಿ ಮಾತುಕತೆ ಅಸಾಧ್ಯ ಎಂದು ಉಕ್ರೇನ್ ರಾಯಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಸಂಸ್ಥೆ: ರಷ್ಯಾ ಭಯೋತ್ಪಾದಕ ದೇಶ ಎಂದು ಉಕ್ರೇನ್ ವಿಶ್ವ ಸಂಸ್ಥೆಯ ತುರ್ತು ಸಭೆಯಲ್ಲಿ ಖಂಡಿಸಿದೆ. ರಷ್ಯಾ ಉಕ್ರೇನ್ ಯುದ್ಧ ಭೀಕರ ರೂಪ ತಾಳಿದ್ದು, ಸೋಮವಾರ ಒಂದೇ ದಿನ ರಷ್ಯಾ 75 ಕ್ಷಿಪಣಿಗಳನ್ನು ಉಕ್ರೇನ್ ನಗರಗಳ ಮೇಲೆ ಹಾರಿಸಿದೆ. ಜನಸಾಮಾನ್ಯರ ಮೇಲೆ ಕ್ಷಿಪಣಿ ಹಾರಿಸುವುದು ಭಯೋತ್ಪಾದನೆ ಎಂದು ಉಕ್ರೇನ್ ಸೇರಿದಂತೆ ಪ್ರಪಂಚದ ಹಲವು ದೇಶಗಳು ಖಂಡಿಸಿವೆ. ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ರಷ್ಯಾದ ಭಾಗ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದರು. ಈ ಕುರಿತಾಗಿ ತುರ್ತು ಸಭೆಗಾಗಿ ಉಕ್ರೇನ್ ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದರ ವಿಚಾರ ಚರ್ಚೆಯ ದಿನವೇ ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್ ತತ್ತರಿಸಿದೆ. ವಿಶ್ವ ಸಂಸ್ಥೆಯ ಸಭೆಯಲ್ಲಿ ಉಕ್ರೇನ್‌ನ ವಿಶ್ವ ಸಂಸ್ಥೆಯ ರಾಯಭಾರಿ ಸೆರ್ಗಿ ಕಿಸ್ಲಿತ್ಸಿಯಾ ರಷ್ಯಾ ಯುದ್ಧವನ್ನು ಉಲ್ಬಣಗೊಳಿಸಿರುವ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ರಷ್ಯಾ ಒಂದು ಭಯೋತ್ಪಾದಕ ದೇಶ. ಜನ ಸಾಮಾನ್ಯರ ಮೇಲೆ ದಾಳಿ ಮಾಡುವುದು ಯಾವ ಯುದ್ಧ ನ್ಯಾಯ ಎಂದು ಪ್ರಶ್ನಿಸಿದರು.
"ರಷ್ಯಾ ಒಂದು ಭಯೋತ್ಪಾದಕ ದೇಶ ಎಂಬುದನ್ನು ಮತ್ತೆ ಸಾಭೀತುಪಾಡಿದೆ. ರಷ್ಯಾ ವಿರುದ್ಧ ವಿಶ್ವ ಸಂಸ್ಥೆ ಎಲ್ಲಾ ಆಯಾಮಗಳಲ್ಲೂ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಉಕ್ರೇನ್ ರಾಯಭಾರಿ ಮನವಿ ಮಾಡಿದ್ದಾರೆ. ಜತೆಗೆ ರಾಯಭಾರಿ ಸೆರ್ಗಿ ಅವರ ಕುಟುಂಬ ಕೂಡ ದಾಳಿಯಲ್ಲಿ ಗಾಯಗೊಂಡಿದೆ ಎಂಬುದನ್ನೂ ಅವರು ವಿಶ್ವ ಸಂಸ್ಥೆಗೆ ತಿಳಿಸಿದ್ದಾರೆ. "ಬೇಸರದ ಸಂಗತಿಯೆಂದರೆ ಸರ್ವಾಧಿಕಾರಿ ಮತ್ತು ಸಮತೋಲನವಿಲ್ಲದ ಮನಸ್ಥಿತಿಯ ದೇಶದ ಜೊತೆ ಶಾಂತಿ ಮಾತುಕತೆ ಅಸಾಧ್ಯ. ನಮ್ಮ ಮುಂದಿರುವ ದೇಶ ಮತ್ತು ಅಧ್ಯಕ್ಷ ಸರ್ವಾಧಿಕಾರಿಯಾಗಿದ್ದಾರೆ," ಎಂದು ಸೆರ್ಗಿ ಹೇಳಿದ್ದಾರೆ.
ಉಕ್ರೇನ್‌ನ 14 ಮಂದಿ ನಾಗರಿಕರು ಮೃತಪಟ್ಟಿದ್ದರೆ ಮತ್ತು 97 ಮಂದಿಗೆ ಗಂಭೀರ ಗಾಯಗಳಾಗಿವೆ. ಸೋಮವಾರದ ಬೀಭತ್ಸ ದಾಳಿಯಿಂದ ಕೀವ್, ಕಾರ್ಖಿವ್ ಮತ್ತಿತರ ನಗರಗಳು ಜರ್ಜರಿತವಾಗಿದೆ. ಉಕ್ರೇನ್‌ನ ಪ್ರಸ್ತಾವಕ್ಕೆ ಉತ್ತರಿಸಿದ ರಷ್ಯಾದ ರಾಯಭಾರಿ ವಸಿಲಿ ನೆಬೆನ್ಜ್ಯಾ, ಕ್ಷಿಪಣಿ ದಾಳಿ ಕುರಿತಂತೆ ಅಧಿಕೃತವಾಗಿ ಪ್ರಸ್ತಾಪಿಸದಿದ್ದರೂ ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ರಷ್ಯಾದ ಭಾಗವೆಂದು ಘೋಷಿಸಿಕೊಂಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
"ನಮ್ಮ ಸಹೋದರ ಸಹೋದರಿಯರ ರಕ್ಷಣೆ ಮಾಡುತ್ತಿರುವುದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಪೂರ್ವ ಉಕ್ರೇನ್‌ನ ಜನ ಮಾತನಾಡುವ ಭಾಷೆ ರಷ್ಯನ್ ಮತ್ತು ಅವರ ಮಕ್ಕಳಿಗೆ ಮಾತೃಭಾಷೆ ಕಲಿಯುವ, ಮಾತನಾಡುವ, ಕಲಿಸುವ ಮತ್ತು ಅವರನ್ನು ಫ್ಯಾಸಿಸಂನಿಂದ ರಕ್ಷಿಸಿ ಸ್ವತಂತ್ರರನ್ನಾಗಿಸಿದ ಹೀರೋಗಳನ್ನು ಆರಾಧಿಸುವ ಸ್ವಾತಂತ್ರ್ಯ ಸಿಗಬೇಕು. ಈ ಕಾರಣಕ್ಕಾಗಿ ನಾಲ್ಕು ಪ್ರದೇಶಗಳನ್ನು ರಷ್ಯಾದ ಭಾಗವನ್ನಾಗಿ ಘೋಷಿಸಲಾಗಿದೆ. ಇದು ನಮ್ಮ ಕರ್ತವ್ಯ," ಎಂದು ರಷ್ಯಾ ರಾಯಭಾರಿ ವಿಶ್ವ ಸಂಸ್ಥೆಗೆ ಹೇಳಿದ್ದಾರೆ.
ವಿಶ್ವ ಸಂಸ್ಥೆ ಮುಖ್ಯಸ್ಥ ಆಂಟೊನಿಯೋ ಗುಟೆರ್ರಸ್ ರಷ್ಯಾದ ದಾಳಿಯನ್ನು "ಒಪ್ಪಲಸಾಧ್ಯವಾದ ಯುದ್ಧ ತೀವ್ರತೆ" ಎಂದು ವ್ಯಾಖ್ಯಾನಿಸಿದ್ದಾರೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕೂಡಾ ರಷ್ಯಾ ಕ್ರಮವನ್ನು ಖಂಡಿಸಿದ್ದು, "ಇದು ರಷ್ಯಾ ಅಧ್ಯಕ್ಷ ಪುಟಿನ್‌ರ ಅಕ್ರಮ ಯುದ್ಧ ಮತ್ತು ಅತ್ಯಂತ ಹೀನ ಕೃತ್ಯ," ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ:
ರಷ್ಯಾ ಉಕ್ರೇನ್ ನಡುವಿನ ಯುದ್ಧ ಮತ್ತೆ ತೀವ್ರಗೊಳ್ಳುತ್ತಿದೆ. ಬರೋಬ್ಬರಿ 230 ದಿನಗಳ ಸತತ ಯುದ್ಧ ಹಲವು ಸಾವುನೋವುಗಳಿಗೆ ಕಾರಣವಾಗಿದೆ. ಇದೀಗ ರಷ್ಯಾ ಮತ್ತೆ ಕೆರಳಿದೆ. ಇಂದು ಉಕ್ರೇನ್‌ನ ಕೀವ್ ಸೇರಿದಂತೆ ಹಲವು ಭಾಗದ ಮೇಲೆ ರಷ್ಯಾ ದಾಳಿ ನಡೆಸಿದೆ. ಮಿಸೈಲ್ ದಾಳಿ ಮಾಡಿರುವ ರಷ್ಯಾ, ಇದು ಕ್ರಿಮಿಯಾ ಸೇತುವ ಸ್ಫೋಟಕ್ಕೆ ಪ್ರತೀಕಾರ ಎಂದಿದೆ. ಭಯೋತ್ಪಾದಕರ ಛೂ ಬಿಟ್ಟು ಸೇತುವೆ ಸ್ಫೋಟಿಸಲಾಗಿದೆ. ಇದರ ಹಿಂದೆ ಉಕ್ರೇನ್ ನೇರ ಕೈವಾಡ ಎಂದು ರಷ್ಯಾ ಆರೋಪಿಸಿತ್ತು. ಆದರೆ ಈ ಆರೋಪವನ್ನು ಉಕ್ರೇನ್ ನಿರಾಕರಿಸಿತ್ತು. ಆರೋಪ ಪ್ರತ್ಯಾರೋಪದ ನಡುವೆ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಐವರು ನಾಗರೀಕರು ಮೃತಪಟ್ಟಿದ್ದಾರೆ.
ಉಕ್ರೇನ್ ಮೇಲೆ(Russia Ukraine war) ದಾಳಿ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ವಿಡಿಯೋ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕ್ರಿಮಿಯಾ(Cremia Bridge) ಸೇತುವೆ ಸ್ಫೋಟವನ್ನು ರಷ್ಯಾ ಸಹಿಸುವುದಿಲ್ಲ. ದೇಶದೊಳಗೆ ಭಯೋತ್ಪಾದನೆ ಚಟುವಟಿಕೆ, ಅದಕ್ಕೆ ಕುಮ್ಮಕ್ಕು ನೀಡುವ ಉಕ್ರೇನ್ ನಡೆಯನ್ನು ರಷ್ಯಾ ಖಂಡಿಸುತ್ತದೆ. ದೇಶದೊಳಗೆ ಇಂತಹ ಸ್ಫೋಟಕ್ಕೆ ಯತ್ನ ನಡೆಸಿದರೆ ಪರಿಣಾಮ ಇನ್ನುಷ್ಟು ಕೆಟ್ಟದಾಗಿರುತ್ತದೆ ಎಂದು ವ್ಲಾದಿಮಿರ್ ಎಚ್ಚರಿಸಿದ್ದಾರೆ. ಕ್ರಿಮಿಯಾ ಸೇತುವೆ ದಾಳಿ ಹಿಂದೆ ಉಕ್ರೇನ್ ವಿಷೇಷ ಪಡೆಯ ಕೈವಾಡವಿದೆ ಎಂದು ಪುಟಿನ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಣ್ವಸ್ತ್ರ ಪ್ರಯೋಗದ ಬಗ್ಗೆ ಪುಟಿನ್ ಜೋಕ್ ಮಾಡುತ್ತಿಲ್ಲ; ಅಮೆರಿಕಾ ಅಧ್ಯಕ್ಷ ಜೋ ಬೈಡನ್
ಝಪೋರಿಝ್ಝಿಯಾ ಮೇಲಿನ ದಾಳಿಯಲ್ಲಿ 17 ಸಾವು:
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆಯನ್ನು ಉಕ್ರೇನ್ ಸ್ಫೋಟಿಸಿದ್ದಕ್ಕೆ ಪ್ರತಿಯಾಗಿ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದ ಬಾಂಬ್‌ಗಳು ಝಪೋರಿಝ್ಝಿಯಾದಲ್ಲಿರುವ ಅಪಾರ್ಚ್‌ಮೆಂಟ್ ಕಟ್ಟಡಗಳು ಸೇರಿದಂತೆ ಹಲವೆಡೆ ಅಪ್ಪಳಿಸಿವೆ. ಈ ದುರ್ಘಟನೆಯಲ್ಲಿ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಈ ಬಾಂಬ್ ಸ್ಫೋಟದಿಂದ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಒಂದು ಕಟ್ಟಡ ಕುಸಿದು ಬಿದ್ದಿದೆ. ರಷ್ಯಾ ಬಾಂಬ್ ದಾಳಿ ನಡೆಸಿದ ಪ್ರದೇಶವನ್ನು ಉಭಯ ದೇಶಗಳು ತಮಗೆ ಸೇರಿದ್ದು ಎಂದು ಹೇಳಿಕೊಂಡಿವೆ. ರಷ್ಯಾ ರಾತ್ರಿಯಿಡೀ ನಡೆಸಿದ ರಾಕೆಟ್ ದಾಳಿಯಲ್ಲಿ 20 ಖಾಸಗಿ ಮನೆಗಳು ಮತ್ತು 50 ಅಪಾರ್ಚ್‌ಮೆಂಟ್‌ನ ಕಟ್ಟಡಗಳು ನಾಶಗೊಂಡಿವೆ. 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ಈ ದಾಳಿಯನ್ನು ಉಕ್ರೇನ್ ಸೇನೆ ದೃಢಪಡಿಸಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: Russia - Ukraine War: ಲೈಮನ್ ಪ್ರದೇಶ ಗೆದ್ದ ಉಕ್ರೇನ್, ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾಗ್ತಾರ ಪುಟಿನ್?
ಶನಿವಾರ ರಷ್ಯಾ ಹಾಗೂ ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟವಾಗಿದ್ದು, ಇದರಿಂದ ಸೇತುವೆ ಭಾಗಶಃ ಕುಸಿದಿತ್ತು. ಈ ಸೇತುವೆ ಉಕ್ರೇನ್ ಯುದ್ಧದಲ್ಲಿ ರಷ್ಯಾದ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ಕೊಂಡಿ ಆಗಿತ್ತು. ಹೀಗಾಗಿ ರಷ್ಯಾ ಉಕ್ರೇನ್ ಮೇಲೆ ಕೋಪಗೊಂಡಿದೆ.