ಬ್ರಿಟನ್‌ ರಾಜ ಚಾರ್ಲ್ಸ್‌ಗಿಂತ Rishi Sunak ಹಾಗೂ ಪತ್ನಿ ಅಕ್ಷತಾ 2 ಪಟ್ಟು ಹೆಚ್ಚು ಶ್ರೀಮಂತರು..!

By BK AshwinFirst Published Oct 25, 2022, 3:06 PM IST
Highlights

10 ಡೌನಿಂಗ್ ಸ್ಟ್ರೀಟ್‌ನ ನಿವಾಸಿಗಳಾಗಲಿರುವ ರಿಷಿ ಸುನಕ್ ಹಾಗೂ ಪತ್ನಿ,  ಬ್ರಿಟಿಷ್ ರಾಜನಿಗಿಂತ ಶ್ರೀಮಂತರಾಗಿದ್ದಾರೆ. ಅಲ್ಲದೆ, ಬ್ರಿಟನ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಬೆಳವಣಿಗೆ ಜರುಗುತ್ತಿದೆ. 

ಭಾರತೀಯ ಮೂಲದ ರಿಷಿ ಸುನಕ್‌ ಇನ್ನೂ ಯುಕೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿಲ್ಲ. ಆದರೆ, ಪ್ರಧಾನಿಯಾಗಿ ಅವರ ಆಯ್ಕೆ ಖಚಿತವಾಗಿದೆ. ಈ ಹಿನ್ನೆಲೆ ರಿಷಿ ಸುನಕ್ ಅವರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಜನ ಅವರ ಹಲವು ವಿಚಾರಗಳನ್ನು ಇಂಟರ್‌ನೆಟ್‌ ಸರ್ಚ್‌ ಎಂಜಿನ್‌, ಸಾಮಾಜಿಕ ಜಾಲತಾಣಗಳಲ್ಲಿ ಹುಡುಕುತ್ತಲೇ ಇದ್ದಾರೆ. ಹೇಳಿ ಕೇಳಿ ರಿಷಿ ಸುನಕ್, ಕರ್ನಾಟಕದ ಅಳಿಯ. ಅದರಲ್ಲೂ, ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ. ಈ ಹಿನ್ನೆಲೆ ಹೆಚ್ಚು ಕುತೂಹಲವಿದ್ದೇ ಇದೆ. ಇದೇ ರೀತಿ, ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಬಗ್ಗೆಯೂ ಚರ್ಚೆಯಾಗುತ್ತಿದೆ. ಬ್ರಿಟನ್‌ ರಾಜ ಚಾರ್ಲ್ಸ್‌ III ಗಿಂತ ಹೆಚ್ಚು ಶ್ರೀಮಂತರಂತೆ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ..!

ಹೌದು, ಭಾರತೀಯ ಮೂಲದ ರಿಷಿ ಸುನಕ್ ಅವರು ಯುನೈಟೆಡ್ ಕಿಂಗ್‌ಡಂನ ಪ್ರಧಾನಿಯಾಗಲಿದ್ದಾರೆ. ಸುನಕ್ ಅವರು ಕನ್ಸರ್ವೇಟಿವ್ ನಾಯಕರಾಗಿ ಔಪಚಾರಿಕವಾಗಿ ನಾಮನಿರ್ದೇಶನಗೊಂಡರು. ಲಿಜ್ ಟ್ರಸ್ ಅವರು ಔಪಚಾರಿಕವಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿ ಮಾಡಿದ ನಂತರ ರಿಷಿ ಅವರು ಇಂಗ್ಲೆಂಡ್‌ ರಾಜಧಾನಿ ಲಂಡನ್‌ನ ಡೌನಿಂಗ್ ಸ್ಟ್ರೀಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುತ್ತಾರೆ ಮತ್ತು ರಿಷಿ ಸುನಕ್ ಅವರನ್ನು ಅಧಿಕೃತವಾಗಿ ಪ್ರಧಾನಿಯಾಗಿ ನೇಮಿಸಲಾಗುತ್ತದೆ.

ಇದನ್ನು ಓದಿ: ಬ್ರಿಟನ್‌ ಏಕತೆ, ಸ್ಥಿರತೆ ನನ್ನ ಆದ್ಯತೆ; ಸಂಕಷ್ಟ ಎದುರಿಸುತ್ತಿರುವ ದೇಶಕ್ಕೆ ಅಭಯ ನೀಡಿದ Rishi Sunak

ಇನ್ನು, 10 ಡೌನಿಂಗ್ ಸ್ಟ್ರೀಟ್‌ನ ನಿವಾಸಿಗಳಾಗಲಿರುವ ರಿಷಿ ಸುನಕ್ ಹಾಗೂ ಪತ್ನಿ,  ಬ್ರಿಟಿಷ್ ರಾಜನಿಗಿಂತ ಶ್ರೀಮಂತರಾಗಿದ್ದಾರೆ. ಅಲ್ಲದೆ, ಬ್ರಿಟನ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಬೆಳವಣಿಗೆ ಜರುಗುತ್ತಿದೆ ಎಂಬುದೂ ನಿಜ. ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಸುಮಾರು 730 ಮಿಲಿಯನ್ ಪೌಂಡ್‌ (ರೂ. 68,36,20,03,400) ಒಟ್ಟು ಸಂಪತ್ತನ್ನು ಹೊಂದಿದ್ದಾರೆ. ಇದು ಕಿಂಗ್ ಚಾರ್ಲ್ಸ್ ಹಾಗೂ ಪತ್ನಿ ಕ್ಯಾಮಿಲ್ಲಾ ಅವರ ಆಸ್ತಿಗಿಂತ ಬರೋಬ್ಬರಿ 2 ಪಟ್ಟು ಹೆಚ್ಚಾಗಿದೆ ಎಂದು ದಿ ಗಾರ್ಡಿಯನ್‌ ವರದಿ ಮಾಡಿದೆ. ಯುಕೆ ರಾಜ ಚಾರ್ಲ್ಸ್‌ III ಹಾಗೂ ಪತ್ನಿ ಅವರ ಸಂಪತ್ತು 300 ಮಿಲಿಯನ್‌ನಿಂದ 350 ಮಿಲಿಯನ್ ಪೌಂಡ್‌ (Rs 28,09,50,13,887 - Rs 32,77,99,19,945.50)ಎಂದು ಅಂದಾಜಿಸಲಾಗಿದೆ. 

ಈ ಮಧ್ಯೆ, 2022ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡ ಯುಕೆಯ ಮೊದಲ ಮುಂಚೂಣಿ ರಾಜಕಾರಣಿ ಎನಿಸಿಕೊಂಡಿದ್ದಾರೆ ರಿಷಿ ಸುನಕ್‌. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಪುತ್ರಿ ಎಂಬುದು ಗಮನಾರ್ಹ. 

ಇದನ್ನೂ ಓದಿ: Rishi Sunak ಅವರದು ಹೂವಿನ ಹಾದಿಯಲ್ಲ: ಮುಂದಿವೆ ಬೆಟ್ಟದಷ್ಟು ಸವಾಲುಗಳು..!

ಸುನಕ್ ಒಡೆತನದ ಆಸ್ತಿ ವಿವರ ಹೀಗಿದೆ..
ರಿಷಿ ಸುನಕ್‌ ವಿಶ್ವದಾದ್ಯಂತ £17 ಮಿಲಿಯನ್ (ರೂ. 1,59,15,23,000) ಮೌಲ್ಯದ ನಾಲ್ಕು ಬಂಗಲೆಯನ್ನು ಹೊಂದಿದ್ದಾರೆ. ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರಾದ ಕೃಷ್ಣಾ ಮತ್ತು ಅನೌಷ್ಕಾ ಅವರು ಪಶ್ಚಿಮ ಲಂಡನ್‌ನ ಕೆನ್ಸಿಂಗ್ಟನ್‌ನಲ್ಲಿರುವ ತಮ್ಮ 5 ಬೆಡ್‌ರೂಮ್‌ಗಳ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದು £7 ಮಿಲಿಯನ್‌ಗಿಂತಲೂ ಹೆಚ್ಚು (ರೂ. 65,54,96,170) ಮೌಲ್ಯದ್ದಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಇನ್ನು, ವೀಕೆಂಡ್‌ನಲ್ಲಿ, ರಿಷಿ ಸುನಕ್ ಮತ್ತು ಅವರ ಕುಟುಂಬವು ಉತ್ತರ ಯಾರ್ಕ್‌ಷೈರ್‌ನ ರಿಚ್‌ಮಂಡ್ ಕ್ಷೇತ್ರದ ಕಿರ್ಬಿ ಸಿಗ್‌ಸ್ಟನ್ ಗ್ರಾಮದಲ್ಲಿರುವ ಗ್ರೇಡ್ II-ಪಟ್ಟಿ ಮಾಡಿದ ಜಾರ್ಜಿಯನ್ ಮೇನರ್ ಮನೆಯಲ್ಲಿ ವಾಸ ಮಾಡುತ್ತಾರೆ. ಈ ಮನೆಯನ್ನು ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರು £ 1.5 ಮಿಲಿಯನ್‌ಗೆ (ರೂ 14,04,68,118.86) ಖರೀದಿಸಿದ್ದಾರೆ ಮತ್ತು ಈಗ £ 2 ಮಿಲಿಯನ್‌ಗಿಂತಲೂ ಹೆಚ್ಚು (ರೂ. 18,72,90,825.14) ಮೌಲ್ಯದ್ದಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್‌..!

ಕೆನ್ಸಿಂಗ್ಟನ್ ಮತ್ತು ನಾರ್ತ್ ಯಾರ್ಕ್‌ಷೈರ್‌ನಲ್ಲಿರುವ ಅವರ ಮನೆಯ ಹೊರತಾಗಿ, ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿ, ಪಶ್ಚಿಮ ಲಂಡನ್‌ನ ಓಲ್ಡ್ ಬ್ರಾಂಪ್ಟನ್ ರಸ್ತೆಯಲ್ಲಿ ಫ್ಲಾಟ್ ಮತ್ತು £5.5 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಸಾಂಟಾ ಮೋನಿಕಾ ಬೀಚ್ ಪೆಂಟ್‌ಹೌಸ್ ಅನ್ನು ಹೊಂದಿದ್ದಾರೆ.

click me!