Mecca Pact Big Update: ಮತ್ತೆ ಒಂದಾದ ಪಾಕ್, ಟರ್ಕಿ, ಸೌದಿ! ಸೈನ್ಯ ಕಳಿಸಲು ಒಪ್ಪಿಗೆ!

Published : Oct 06, 2026, 09:14 AM IST
Mecca Pact Big Update

ಸಾರಾಂಶ

ಯೆಮೆನ್‌ನಲ್ಲಿ ಹೌತಿ ಬಂಡುಕೋರರ ವಿರುದ್ಧ 'ಆಪರೇಷನ್ ಡಾನ್ ಆಫ್ ಯೆಮೆನ್' ಕಾರ್ಯಾಚರಣೆ ತೀವ್ರಗೊಂಡಿದ್ದು, ಸೌದಿ ನೇತೃತ್ವದ ಒಕ್ಕೂಟ ಬೆಂಬಲ ನೀಡಿದೆ. ಮೆಕ್ಕಾ ರಕ್ಷಣಾ ಒಪ್ಪಂದದ ಅಡಿ ಸೌದಿ ಅರೇಬಿಯಾಕ್ಕೆ ಮಿಲಿಟರಿ ನೆರವು ನೀಡಲು ಪಾಕಿಸ್ತಾನ ಮತ್ತು ಟರ್ಕಿ ಒಪ್ಪಿಗೆ ಸೂಚಿಸಿವೆ.

ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧದ ಹೋರಾಟ ಮತ್ತೊಮ್ಮೆ ತೀವ್ರಗೊಂಡಿದೆ. ಹೌತಿ ಹಿಡಿತದಲ್ಲಿರುವ ಪ್ರದೇಶಗಳನ್ನು ಮರಳಿ ಪಡೆಯಲು ಯೆಮೆನ್ ಸರ್ಕಾರ 'ಆಪರೇಷನ್ ಡಾನ್ ಆಫ್ ಯೆಮೆನ್' ಅನ್ನು ಪ್ರಾರಂಭಿಸಿದೆ. ಈ ಕಾರ್ಯಾಚರಣೆಗೆ ಸೌದಿ ನೇತೃತ್ವದ ಒಕ್ಕೂಟವು ಬೆಂಬಲ ಘೋಷಿಸಿವೆ. ಅಂತಯೇ ಅಕ್ಟೋಬರ್ 5 ರಂದು ಹೌತಿ ವಿರುದ್ಧದ ಆರಂಭಿಕ ಕಾರ್ಯಾಚರಣೆಯಲ್ಲಿ 324 ಗುರಿಗಳ ಮೇಲೆ ದಾಳಿ ಮಾಡಲು ಬರೋಬ್ಬರಿ ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳು ಭಾಗಿಯಾಗಿವೆ.

ಮೆಕ್ಕಾ ಒಪ್ಪಂದದ ಅಡಿ ಸೈನ್ಯ ಕಳಿಸಲು ಪಾಕ್, ಟರ್ಕಿ ಒಪ್ಪಿಗೆ

ಈ ನಡುವೆ ಇತ್ತ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದದಂತೆ ನೆರವು ನೀಡಲು ಒಪ್ಪಿಕೊಂಡಿರುವುದು ಮಹತ್ವದ ತಿರುವು ಪಡೆದುಕೊಂಡಿದೆ. ಈ ಹಿಂದೆ ಸೌದಿ ಮೇಲೆ ದಾಳಿ ನಡೆದಾಗ ಪಾಕ್,ಟರ್ಕಿ ಸುಮ್ಮನಾಗಿದ್ದವು. ಆ ವೇಳೆ ಸಹಾಯಕ್ಕೆ ಬರದೇ ಇದ್ದುದ್ದರಿಂದ ಸೌದಿ ಇಸ್ರೇಲ್ ಮೊರೆ ಹೋಗಿತ್ತು. ಇದೀಗ ವರದಿಗಳ ಪ್ರಕಾರ ಮೂರೂ ದೇಶಗಳು ಸೌದಿ ಅರೇಬಿಯಾದಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸಲು ಒಪ್ಪಿಕೊಂಡಿವೆ. ಈ ಒಪ್ಪಂದದ ಭಾಗವಾಗಿ ಪಾಕಿಸ್ತಾನವು ತನ್ನ ಸೈನ್ಯವನ್ನು ಕಳುಹಿಸಲು ಸಹ ಒಪ್ಪಿಕೊಂಡಿದೆ .ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಯೆಮನ್‌ನಲ್ಲಿ ಏನಾಗುತ್ತಿದೆ?

ಇತ್ತ ಯೆಮೆನ್ ಸರ್ಕಾರ ಹೌತಿ ಹಿಡಿತದಲ್ಲಿರುವ ಕೆಂಪು ಸಮುದ್ರದ ಉದ್ದಕ್ಕೂ , ಬಾಬ್ ಅಲ್-ಮಂದಾಬ್ ಜಲಸಂಧಿಯ ಸುತ್ತಲೂ ಗುರಿಯಾಗಿಸಿ ದಾಳಿ ನಡೆಸಿದೆ. ಯೆಮೆನ್ ಸರ್ಕಾರಿ ಪಡೆಗಳು ಬಾಬ್ ಅಲ್-ಮಂದಾಬ್, ಧುಬಾಬ್ ಪ್ರದೇಶಗಳಲ್ಲಿ ಮೇಲುಗೈ ಸಾಧಿಸಿದೆ ಎಂದು ಹೇಳಿದೆ. ಇದರೊಂದಿಗೆ ಸೌದಿ ಪಡೆಯು ಈ ಕಾರ್ಯತಂತ್ರದ ಭಾಗವಾಗಲು ಬೆಂಬಲ ವ್ಯಕ್ತಪಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಬಾಬ್ ಅಲ್-ಮಂದಾಬ್ ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿಗೆ ಸಂಪರ್ಕಿಸುತ್ತದೆ. ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಲಿಕಿ ಅವರು 100 ಯುದ್ಧ ವಿಮಾನಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ಹೇಳಿದ್ದಾರೆ. ಒಕ್ಕೂಟವು 324ಕ್ಕೂ ಹೆಚ್ಚಿನ ಸ್ಥಳಗಳನ್ನ ಗುರಿಯಾಗಿಸಿ ದಾಳಿ ನಡೆಸಿ ನಾಶ ಪಡಿಸಿದೆ ಎಂದು ಹೇಳಿಕೊಂಡಿದೆ.

ಏನಿದು ಮೆಕ್ಕಾ ಒಪ್ಪಂದ? ಪಾಕಿಸ್ತಾನ ಸೈನ್ಯ ಕಳುಹಿಸುತ್ತಾ?

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೀರ್ಘಕಾಲದ ರಕ್ಷಣಾ ಸಂಬಂಧಗಳನ್ನು ಹೊಂದಿವೆ. ಆಗಸ್ಟ್ 2026 ರಲ್ಲಿ, ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ಮಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು. ಒಪ್ಪಂದದ ಪ್ರಕಾರ ಒಬ್ಬ ಸದಸ್ಯರ ಮೇಲಿನ ದಾಳಿಯನ್ನು ಮೂರೂ ರಾಷ್ಟ್ರಗಳ ವಿರುದ್ಧದ ದಾಳಿ ಎಂದು ಪರಿಗಣಿಸಲಾಗುತ್ತದೆ. ಪಾಕಿಸ್ತಾನ ಮತ್ತು ಟರ್ಕಿ ಇದನ್ನು ರಕ್ಷಣಾತ್ಮಕ ಒಪ್ಪಂದ ಎಂದು ಬಣ್ಣಿಸಿವೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಈಗಾಗಲೇ ಪಾಕಿಸ್ತಾನವು ಸೌದಿ ಅರೇಬಿಯಾದ ವಿರುದ್ಧ ಯಾವುದೇ ಆಕ್ರಮಣಕಾರಿ ಕ್ರಮ ಕೈಗೊಂಡರೆ ಅದರೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 5 ರಂದು, ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ರಿಯಾದ್‌ನಲ್ಲಿ ಮಕ್ಕಾ ಒಪ್ಪಂದದ ಅಡಿಯಲ್ಲಿ ಸ್ಥಾಪಿಸಲಾದ ಕಾರ್ಯತಂತ್ರದ ರಾಜಕೀಯ ಮತ್ತು ರಕ್ಷಣಾ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು.

ಆರ್ಥಿಕ ಒತ್ತಡ ಪಾಕಿಸ್ತಾನಕ್ಕೆ ದೊಡ್ಡ ಸವಾಲು

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹದುಗೆಟ್ಟು ಹೋಗಿದೆ. ಇಂಧನ ಕೊರತೆಯಿಂದ ಬಳಲುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಅದು ವಿದೇಶಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಾ? ಅಷ್ಟೊಂದು ಆರ್ಥಿಕವಾಗಿ ಸದೃಢವಾಗಿದೆಯ? ಎಂಬುದು ದೊಡ್ಡ ಪ್ರಶ್ನೆ. ಏಕೆಂದರೆ ಪಾಕಿಸ್ತಾನವೇ ಆಂತರಿಕ ಸಂಘರ್ಷ, ಬಲೂಚಿಸ್ತಾನಿಗಳ ದಾಳಿ, ಇಂಧನ ಕೊರತೆ, ಹಣದುಬ್ಬರದಿಂದ ನಲಗುತ್ತಿದೆ.

2026-27ರ ಆರ್ಥಿಕ ವರ್ಷಕ್ಕೆ ಪಾಕಿಸ್ತಾನದ ಬಜೆಟ್ ರಕ್ಷಣಾ ವೆಚ್ಚವನ್ನು ಶೇಕಡಾ 18 ರಷ್ಟು ಹೆಚ್ಚಿಸಿ ಸುಮಾರು 3 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ತಲುಪಿದೆ. ಆದರೆ ಫೆಡರಲ್ ಅಭಿವೃದ್ಧಿ ವೆಚ್ಚವನ್ನು 1 ಟ್ರಿಲಿಯನ್ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಬಜೆಟ್ ಸರಿಸುಮಾರು 15.26 ಟ್ರಿಲಿಯನ್ ರೂಪಾಯಿಗಳ ತೆರಿಗೆ ಸಂಗ್ರಹ ಗುರಿಯನ್ನು ಮತ್ತು GDP ಯ 3.6 ಪ್ರತಿಶತದಷ್ಟು ಹಣಕಾಸಿನ ಕೊರತೆಯ ಗುರಿಯನ್ನು ನಿಗದಿಪಡಿಸಿದೆ. IMF ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಅನ್ನು ಸಿದ್ಧಪಡಿಸಲಾಗಿದೆ. IMF ಪಾಕಿಸ್ತಾನದ ಆರ್ಥಿಕ ನೀತಿಯ ಮೇಲೂ ಪ್ರಮುಖ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ ಯೆಮೆನ್‌ನಲ್ಲಿರುವಂತಹ ದೀರ್ಘಕಾಲದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಡೆಗಳು, ಶಸ್ತ್ರಾಸ್ತ್ರಗಳು, ಇಂಧನ ಮತ್ತು ಲಾಜಿಸ್ಟಿಕ್ಸ್‌ನ ವೆಚ್ಚವು ಪಾಕಿಸ್ತಾನಕ್ಕೆ ಹೆಚ್ಚುವರಿ ಹೊರೆಯಾಗಬಹುದು.

ಸೌದಿ ಅರೇಬಿಯಾ-ಪಾಕಿಸ್ತಾನ ಆರ್ಥಿಕ ಸಂಬಂಧ ಹೇಗಿದೆ?

ಸೌದಿ ಅರೇಬಿಯಾ ಪಾಕಿಸ್ತಾನದ ಪ್ರಮುಖ ಆರ್ಥಿಕ ಪಾಲುದಾರ ಕೂಡ ಆಗಿದೆ. ಏಪ್ರಿಲ್ 2026 ರಲ್ಲಿ, ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ $3 ಬಿಲಿಯನ್ ನೆರವು ಸಾಲವನ್ನು ಘೋಷಿಸಿತು. ಅಸ್ತಿತ್ವದಲ್ಲಿರುವ $5 ಬಿಲಿಯನ್ ಸಾಲವನ್ನು ವಿಸ್ತರಿಸಿತು. ಪಾಕಿಸ್ತಾನದ ಹಣಕಾಸು ಸಚಿವಾಲಯವು ದೇಶದ ವಿದೇಶಿ ವಿನಿಮಯ ಸ್ಥಾನ ಮತ್ತು ಬಾಹ್ಯ ವೆಚ್ಚಗಳಿಗೆ ಇದು ನಿರ್ಣಾಯಕವಾಗಿದೆ ಎಂದು ವಿವರಿಸಿದೆ. ಈ ಆರ್ಥಿಕ ಸಂಬಂಧದ ಜೊತೆಗೆ ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವೂ ಬಲಗೊಂಡಿದೆ. ಯೆಮೆನ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ನಡುವೆ ಸೌದಿ ಅರೇಬಿಯಾದೊಂದಿಗೆ ನಿಲ್ಲಲು ಪಾಕಿಸ್ತಾನದ ಮೇಲೆ ಕಾರ್ಯತಂತ್ರದ ಒತ್ತಡ ಹೆಚ್ಚಾಗಿದೆ.

ಪಾಕಿಸ್ತಾನ-ಸೌದಿ ಮಿಲಿಟರಿ ಸಾಮರ್ಥ್ಯ

ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಪ್ರಕಾರ 2025 ರಲ್ಲಿ ಪಾಕಿಸ್ತಾನದ ಮಿಲಿಟರಿ ವೆಚ್ಚವು ಸುಮಾರು $11.9 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಅದೇ ಅವಧಿಯಲ್ಲಿ ಸೌದಿ ಅರೇಬಿಯಾದ ಮಿಲಿಟರಿ ವೆಚ್ಚ $83.2 ಬಿಲಿಯನ್ ಆಗಿತ್ತು. 2025 ರಲ್ಲಿ ಪಾಕಿಸ್ತಾನದ ಮಿಲಿಟರಿ ವೆಚ್ಚವು ಶೇಕಡಾ 11 ರಷ್ಟು ಹೆಚ್ಚಾಗಿದೆ, ಆದರೆ ಸೌದಿ ಅರೇಬಿಯಾದ ವೆಚ್ಚವು ಶೇಕಡಾ 1.4 ರಷ್ಟು ಹೆಚ್ಚಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Nigerian Aircraft Crash: ಫ್ಲೈದುಬೈ ಘಟನೆ ಬಳಿಕ ಮತ್ತೊಂದು ವಿಮಾನ ದುರಂತ 32 ಪ್ರಯಾಣಿಕರು ಸಾವು!
ಚೀನಾದ ಚಿನ್ನದ ಕೋಟೆಯಲ್ಲಿ 'ಮಹಾ ಬಿರುಕು' ಏಷ್ಯನ್ ಗೇಮ್ಸ್‌ನಲ್ಲಿ ಭಾರೀ ಅವಮಾನಕ್ಕೆ ಒಳಗಾದ ಡ್ರ್ಯಾಗನ್