'ಗುಂಡಿನ ದಾಳಿ ವೇಳೆ ಸತ್ತೇ ಹೋದೆ ಅಂತ ಭಾವಿಸಿದ್ದೆ, ದೇವರ ದಯೆಯಿಂದ ಬದುಕಿದೆ' :ಡೊನಾಲ್ಡ್‌ ಟ್ರಂಪ್‌

By Kannadaprabha News  |  First Published Jul 16, 2024, 6:11 AM IST

ಗುಂಡಿನ ದಾಳಿ ಬಳಿಕ ನಾನು ಸತ್ತು ಹೋದೆ ಎಂದೇ ಭಾವಿಸಿದ್ದೆ. ಆದರೆ ದೇವರ ದಯೆಯಿಂದ ಬದುಕುಳಿದಿದ್ದೇನೆ ಎಂದು ಯುವಕನೊಬ್ಬನ ಗುಂಡಿನ ದಾಳಿಯ ಹೊರತಾಗಿಯೂ ಭಾನುವಾರ ಪ್ರಾಣ ಉಳಿಸಿಕೊಂಡ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.


ವಾಷಿಂಗ್ಟನ್‌ (ಜು.16): ಗುಂಡಿನ ದಾಳಿ ಬಳಿಕ ನಾನು ಸತ್ತು ಹೋದೆ ಎಂದೇ ಭಾವಿಸಿದ್ದೆ. ಆದರೆ ದೇವರ ದಯೆಯಿಂದ ಬದುಕುಳಿದಿದ್ದೇನೆ ಎಂದು ಯುವಕನೊಬ್ಬನ ಗುಂಡಿನ ದಾಳಿಯ ಹೊರತಾಗಿಯೂ ಭಾನುವಾರ ಪ್ರಾಣ ಉಳಿಸಿಕೊಂಡ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಘಟನೆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್‌, ‘ನಿಜಕ್ಕೂ ಅದೊಂದು ಕನಸಿನಂಥ ಘಟನೆ. ಅಕ್ರಮ ವಲಸಿಗರ ಕುರಿತಾದ ವಿಷಯವೊಂದನ್ನು ಓದುವ ಸಲುವಾಗಿ ನಾನು ನನ್ನ ತಲೆಯನ್ನು ಸ್ವಲ್ಪ ವಾಲಿಸದೇ ಹೋಗಿದ್ದಲ್ಲಿ ನಾನು ಸತ್ತೇ ಹೋಗಿರುತ್ತಿದ್ದೆ. ದೇವರ ದಯೆಯಿಂದ, ಬಹಳಷ್ಟು ಜನರು ಹೇಳುವಂತೆ ದೇವರ ಕೃಪೆಯಿಂದ ನಾನಿಂದು ಬದುಕಿ ಉಳಿದಿದ್ದೇನೆ’ ಎಂದು ಹೇಳಿದ್ದಾರೆ.ಇದೇ ವೇಳೆ ತಮ್ಮನ್ನು ರಕ್ಷಿಸಿದ ಸೀಕ್ರೆಟ್‌ ಸರ್ವೀಸ್ ಏಜೆಂಟ್‌ಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಟ್ರಂಪ್‌, ‘ಅವರು ದಾಳಿಕೋರನನ್ನು ಒಂದೇ ಗುಂಡಿನಲ್ಲಿ ಹತ್ಯೆಗೈದರು. ಅವರು ಅತ್ಯುತ್ತಮ ಕೆಲಸ ಮಾಡಿದರು. ಘಟನೆ ನಮಗೆಲ್ಲರಿಗೂ ಒಂದು ರೀತಿಯ ಕನಸಿನಂತಾಗಿತ್ತು’ ಎಂದರು. 

Latest Videos

undefined

ಟ್ರಂಪ್ ಮೇಲೆ‌ ದಾಳಿ..ವೈರಲ್ ಆಯ್ತು ಭವಿಷ್ಯ ಹೇಳಿದ್ದ ಪಾದ್ರಿ ವೀಡಿಯೋ!

ದಾಳಿಯ ಬಳಿಕ ತಾವು ಕೈಎತ್ತಿ ಕೊಂಡು ಫೈಟ್‌ ಎಂದು ಕೂಗಿದ ಫೋಟೋ ವೈರಲ್‌ ಆಗಿದ್ದು ಬೆಂಬಲಿಗರು ಅದನ್ನು ಐಕಾನಿಕ್‌ ಫೋಟೋ ಎಂದು ಕರೆದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಟ್ರಂಪ್‌, ‘ಬಹಳಷ್ಟು ಜನರು ನಾವು ಇದುವರೆಗೆ ನೋಡಿದ್ದರಲ್ಲೇ ಇದು ಐಕಾನಿಕ್ ಫೋಟೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯ ಸರಿಯಾಗಿದೆ ಮತ್ತು ನಾನು ಸಾಯಬೇಕಿತ್ತು. ಏಕೆಂದರೆ ಐಕಾನಿಕ್‌ ಫೋಟೋ ವೇಳೆ ನೀವು ಸತ್ತಿರಬೇಕು’ ಎಂದು ಹಾಸ್ಯವಾಗಿ ಹೇಳಿದರು.

ಹತ್ಯೆ ಯತ್ನದ ಬೆನ್ನಲ್ಲೇ ಚೀನಾ ಕಂಪನಿಯಿಂದ ಟ್ರಂಪ್‌ ಟೀ ಶರ್ಟ್‌ ಸೇಲ್‌

ಬೀಜಿಂಗ್‌: ಡೊನಾಲ್ಡ್‌ ಟ್ರಂಪ್‌ ಹತ್ಯೆ ಯತ್ನ ನಡೆದ 2 ಗಂಟೆಯಲ್ಲೇ ಟ್ರಂಪ್‌ರನ್ನು ಕಠಿಣ ವ್ಯಕ್ತಿ ಎಂದು ತೋರಿಸುವ ಟೀ ಶರ್ಟ್‌ಗಳನ್ನು ಚೀನಾದ ಆನ್‌ಲೈನ್‌ ಕಂಪನಿಗಳು ಮಾರಾಟಕ್ಕೆ ಇಟ್ಟಿದ್ದವು. ಟ್ರಂಪ್‌ ಮೇಲಿನ ದಾಳಿಯ ಕುರಿತು 6.30ಕ್ಕೆ ಸುದ್ದಿ ಹೊರಬಿದ್ದಿತ್ತು. 8.40ರ ವೇಳೆಗೆ ಚೀನಾದ ಆನ್‌ಲೈನ್‌ ತಾಣಗಳಲ್ಲಿ ದಾಳಿ ನನ್ನನ್ನು ಇನ್ನಷ್ಟು ಕಠಿಣ ಮಾಡುತ್ತದೆ ಎಂದು ಬರಹ ಇರುವ ಮತ್ತು ಟ್ರಂಪ್‌ ಕೈ ಎತ್ತಿಕೊಂಡ ಫೋಟೋ ಇರುವ ಟೀ ಶರ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಮಾರಾಟಕ್ಕೆ ಇಟ್ಟ ಕೆಲವೇ ನಿಮಿಷಗಳಲ್ಲಿ 2000ಕ್ಕೂ ಹೆಚ್ಚು ಶರ್ಟ್‌ಗಳಿಗೆ ಬೇಡಿಕೆ ಕೂಡಾ ವ್ಯಕ್ತವಾಗಿತ್ತು.

ಗುಂಡೇಟು ತಿಂದರೂ ಪಕ್ಷದ ಸಭೆಯಲ್ಲಿ ಟ್ರಂಪ್‌ ಭಾಗಿ

: ಭಾನುವಾರ ನಡೆದ ತಮ್ಮ ಹತ್ಯೆ ಯತ್ನದ ನಡುವೆಯೂ ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಸೋಮವಾರ ಇಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾದರು.

ದಾಳಿಕೋರಗೆ ಸರಿಯಾಗಿ ಗುಂಡು ಹಾರಿಸಲೂ ಬರಲ್ಲ!

ಭಾನುವಾರ ಪೆನ್ಸಿಲ್ವೇನಿಯಾದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತಲೆಗೆ ಗುಂಡಿಕ್ಕುವ ಪ್ರಯತ್ನದಲ್ಲಿ ವಿಫಲನಾದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌, ಸರಿಯಾಗಿ ಗುಂಡು ಹಾರಿಸಲು ಬರುವುದಿಲ್ಲ ಎಂಬ ಕಾರಣಕ್ಕೆ ಶಾಲೆಯ ಶೂಟಿಂಗ್‌ ಕ್ಲಬ್‌ನಿಂದ ತಿರಸ್ಕೃತಗೊಂಡಿದ್ದ ಎನ್ನಲಾಗಿದೆ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದ ಬೆಥೆಲ್‌ ಪಾರ್ಕ್‌ ನಿವಾಸಿಯಾದ ಕ್ರೂಕ್ಸ್‌ ಹೈಸ್ಕೂಲ್‌ನಲ್ಲಿ ‘ಅತ್ಯಂತ ಕೆಟ್ಟ ದಾಳಿಕೋರ’ ಎಂಬ ಹಣೆಪಟ್ಟಿ ಹೊತ್ತಿದ್ದ ಈತ ಕ್ಲಬ್‌ಗೆ ಸೇರುವುದರಿಂದ ತಿರಸ್ಕೃತನಾಗಿದ್ದ ಎಂದು ಮೂಲಗಳು ತಿಳಿಸಿವೆ. ಆದರೆ ಇತ್ತೀಚೆಗೆ ಆತ ಸ್ಥಳೀಯ ಕ್ಲೇರ್‌ಟನ್‌ ಸ್ಪೋರ್ಟ್ಸ್‌ಮೆನ್ಸ್‌ ಶೂಟಿಂಗ್‌ ಕ್ಲಬ್‌ ಸೇರಿಕೊಂಡಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ಅಮೆರಿಕದಲ್ಲಿ ಗನ್‌ ಸಂಸ್ಕೃತಿ ಸ್ವಚ್ಛಂದವಾಗಿದ್ದು, ಅಲ್ಲಲ್ಲಿ ಗುಂಡು ಹಾರಿಸುವ ತರಬೇತಿ ಕೇಂದ್ರಗಳು ಇರುತ್ತವೆ.

ಎಫ್‌ಬಿಐಗೆ ಇರೋದೇ ಒಂದು ಕೆಲಸ ಅದರಲ್ಲೂ ವೈಫಲ್ಯ!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಅಮೆರಿಕದ ಅತ್ಯುನ್ನತ ಭದ್ರತಾ ಸಂಸ್ಥೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತೆ ಮಾಡಿದೆ. ಅಮೆರಿಕದ ಹಾಲಿ, ಮಾಜಿ ಅಧ್ಯಕ್ಷರು ಮತ್ತ ಗಣ್ಯರ ರಕ್ಷಣೆಯೊಂದೇ ಎಫ್‌ಬಿಐ (ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌) ಗೆ ಇರುವ ಕೆಲಸ. ಅದರಲ್ಲೂ ಅದು ವಿಫಲವಾಗಿದೆ ಎಂಬ ಟೀಕೆ ಕೇಳಿಬಂದಿದೆ.

ಟ್ರಂಪ್‌ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ, ಟ್ರಂಪ್‌ ಭಾಷಣ ಮಾಡುತ್ತಿದ್ದ ಸ್ಥಳದಿಂದ ಕೇವಲ 150 ಮೀಟರ್‌ ದೂರದ ಕಟ್ಟಡದ ಮೇಲೆ ಕುಳಿತು ಗುಂಡಿನ ದಾಳಿಯನ್ನು ನಡೆಸಿದ್ದ. ಈ ಕುರಿತು ಸುಳಿವು ಪತ್ತೆಹಚ್ಚಲು ಮತ್ತು ಆತನ ಚಲನವಲನ ಗಮನಿಸಲೂ ಎಫ್‌ಬಿಐನ ಸೀಕ್ರೇಟ್‌ ಸರ್ವೀಸ್‌ ಏಜೆಂಟ್‌ಗಳು ವಿಫಲವಾಗಿದ್ದು ಹೇಗೆ? ಅಷ್ಟು ಎತ್ತರದ ಕಟ್ಟಡದ ಮೇಲೆ ಸೀಕ್ರೇಟ್‌ ಸರ್ವೀಸ್ ಸಿಬ್ಬಂದಿಯನ್ನು ಏಕೆ ನಿಯೋಜಿಸಿರಲಿಲ್ಲ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಜಗನ್ನಾಥನೇ ಟ್ರಂಪ್‌ರನ್ನು ಕಾಪಾಡಿದ್ದಾನೆ: ಇಸ್ಕಾನ್‌

ವಾಷಿಂಗ್ಟನ್‌: ಯುವಕನೊಬ್ಬನಿಂದ ಹತ್ಯೆ ಯತ್ನಕ್ಕೆ ಒಳಗಾದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಜಗ್ನಾಥ ದೇವರೇ ಕಾಪಾಡಿದ್ದಾನೆ ಎಂದು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ (ಇಸ್ಕಾನ್‌) ಹೇಳಿದೆ.

ಇಸ್ಕಾನ್‌ ವಕ್ತಾರ ರಾಧಾರಾಮ ದಾಸ್‌ ಮಾತನಾಡಿ, ‘48 ವರ್ಷಗಳ ಹಿಂದೆ 1976ರ ಜುಲೈನಲ್ಲಿ ಅಮೆರಿಕದಲ್ಲಿ ಮೊದಲ ಬಾರಿ ಇಸ್ಕಾನ್‌ ಸಂಸ್ಥೆಯು 9 ದಿನಗಳ ಜಗನ್ನಾಥನ ರಥಯಾತ್ರೆ ಮಾಡಲು ಮುಂದಾಗಿತ್ತು. ಅದಕ್ಕೆ ಸರ್ಕಾರದ ಅನುಮತಿ ಸಿಗುತ್ತೋ ಇಲ್ಲವೋ ಆತಂಕವಿತ್ತು. ಎಲ್ಲ ಯತ್ನಗಳು ವಿಫಲ ಆದಾಗ ಕೊನೆಗೆ ಯಾತ್ರೆ ನಡೆಸಲು ಮೊದಲು ಅವಕಾಶ ಮಾಡಿಕೊಟ್ಟವರೇ ಟ್ರಂಪ್‌. ತಮ್ಮ ಯಾರ್ಡ್‌ನಲ್ಲಿ ರಥ ನಿರ್ಮಿಸಲೂ ಅವರು ಅವಕಾಶ ನೀಡಿದರು’ ಎಂದು ಬಣ್ಣಿಸಿದ್ದಾರೆ.

‘ಈಗಲೂ ಜುಲೈ ಮಾಹೆಯಲ್ಲಿ 9 ದಿನಗಳ ಜಗನ್ನಾಥನ ಉತ್ಸವ ನಡೆದಿದೆ. ಉತ್ಸವದ ವೇಳೆಯೇ ಟ್ರಂಪ್‌ ಮೇಲೆ ಯತ್ನ ನಡೆದಿದೆ. ಆದರೆ ಜಗನ್ನಾಥನ ಕೃಪಾಶೀರ್ವಾದದಿಂದ ಟ್ರಂಪ್‌ ಬದುಕುಳಿದಿದ್ದಾರೆ’ ಎಂದು ದಾಸ್‌ ಹರ್ಷಿಸಿದ್ದಾರೆ.

ರಹಸ್ಯ ಕಡತ ಇಟ್ಟುಕೊಂಡ ಪ್ರಕರಣ: ಟ್ರಂಪ್‌ ವಿರುದ್ಧದ ಕೇಸು ವಜಾ
ವಾಷಿಂಗ್ಟನ್‌: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ರಹಸ್ಯ ದಾಖಲೆಗಳ ಪ್ರಕರಣವನ್ನು ಫ್ಲೋರಿಡಾದ ಫೆಡರಲ್ ನ್ಯಾಯಾಧೀಶರು ಸೋಮವಾರ ವಜಾಗೊಳಿಸಿದ್ದಾರೆ. ಇದರಿಂದ ಟ್ರಂಪ್‌ ಅಧ್ಯಕ್ಷ ಹುದ್ದೆಯ ಸ್ಪರ್ಧಾ ಹಾದಿ ಸುಗಮವಾಗಿದೆ.ವಿಶೇಷ ವಕೀಲ ಜಾಕ್ ಸ್ಮಿತ್ ಅವರನ್ನು ಪ್ರಕರಣದ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿರುವುದು ಅಮೆರಿಕದ ಸಂವಿಧಾನದ ನೇಮಕಾತಿ ಷರತ್ತನ್ನು ಉಲ್ಲಂಘಿಸಿದೆ ಎಂದ ನ್ಯಾಯಾಲಯ, ಟ್ರಂಪ್‌ ವಿರುದ್ಧದ ಪ್ರಕರಣ ವಜಾ ಮಾಡಿದೆ.

ಜನವರಿ 2021ರಲ್ಲಿ ಟ್ರಂಪ್‌ ಶ್ವೇತಭವನವನ್ನು ತೊರೆದ ನಂತರ ರಹಸ್ಯ ಸರ್ಕಾರಿ ದಾಖಲೆಗಳನ್ನು ತಮ್ಮ ಬಳಿಯೇ ಅಕ್ರಮವಾಗಿ ಉಳಿಸಿಕೊಂಡಿದ್ದರು ಹಾಗೂ ಸರ್ಕಾರಿ ಅಧಿಕಾರಿಗೆ ಅವುಗಳನ್ನು ನೀಡಲು ನಿರಾಕರಿಸಿದ್ದರು. ಹೀಗಾಗಿ ಅವರ ಮೇಲೆ ಕೇಸು ದಾಖಲಾಗಿತ್ತು.

ಹತ್ಯೆ ಯತ್ನದಿಂದ ಚುನಾವಣೆಯಲ್ಲಿ ಟ್ರಂಪ್‌ ಪರ ಅನುಕಂಪದ ಅಲೆ? ಮಸ್ಕ್‌, ಬೆಜೋಸ್‌ ಬೆಂಬಲ

ಟ್ರಂಪ್‌ ಮೇಲೆ ಒಂಟಿ ದಾಳಿ, ಅನ್ಯರ ಕೈವಾಡವಿಲ್ಲ: ಎಫ್‌ಬಿಐ

ಪಿಟಿಐ ಮಿಲ್ವಾಕಿಶನಿವಾರ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮೇಲೆ ಗುಂಡು ಹಾರಿಸಿದ ಬಂದೂಕುಧಾರಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ (20) ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೆ. ಆತನ ಹಿಂದೆ ಯಾರ ಕುಮ್ಮಕ್ಕೂ ಇದ್ದಂತಿಲ್ಲ ಎಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ತಿಳಿಸಿದೆ. ಅಲ್ಲದೆ, ಇದನ್ನು ಇದು ಸಂಭಾವ್ಯ ‘ದೇಶೀಯ ಭಯೋತ್ಪಾದನೆ’ ಎಂಬ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

‘ಈಗಿನ ಹಂತದಲ್ಲಿ ಇದು ಒಂಟಿ ದಾಳಿ ಎಂದು ತೋರುತ್ತದೆ. ಆದರೂ ನಾವು ಇನ್ನೂ ಹೆಚ್ಚಿನ ತನಿಖೆ ಮಾಡುತ್ತೇವೆ. ಆತನ ಉದ್ದೇಶ ಏನಿತ್ತು ಎಂಬುದನ್ನು ಬಯಲಿಗೆ ತರುತ್ತೇವೆ’ ಎಂದು ಎಫ್‌ಬಿಐ ಹೇಳಿದೆ.

click me!