
ವಾಷಿಂಗ್ಟನ್ : ಪಹಲ್ಗಾಂ ದಾಳಿ ಬಳಿಕದ ಭಾರತ-ಪಾಕ್ ನಡುವಿನ ಸಂಘರ್ಷ ನಿಲ್ಲಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಪಾತ್ರವಹಿಸಿದ್ದರು ಎಂದು ಇದೀಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಕೂಡ ಹೇಳಿದ್ದಾರೆ. ಈ ಮೂಲಕ ತಮ್ಮದೇ ಮಧ್ಯಸ್ಥಿಕೆಯಿಂದಾಗಿ ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿದವು ಎಂದು ಟ್ರಂಪ್ 30ಕ್ಕೂ ಹೆಚ್ಚು ಸಲ ಹೇಳಿದ್ದಕ್ಕೆ ದನಿಗೂಡಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ‘ಭಾರತ ಮತ್ತು ಪಾಕ್ ಯುದ್ಧದ ವೇಳೆ ಟ್ರಂಪ್ ನೇರವಾಗಿ ಮಧ್ಯಪ್ರವೇಶಿದ್ದರು. ಅಣ್ವಸ್ತ್ರ ಹೊಂದಿದ ಈ ಎರಡೂ ದೇಶಗಳು ಸಂಘರ್ಷ ನಿಲ್ಲಿಸಿ, ಶಾಂತಿ ಸ್ಥಾಪಿಸುವಲ್ಲಿ ಟ್ರಂಪ್ ಯಶಸ್ವಿಯಾದರು. ಇದೇ ರೀತಿ ಕಾಂಬೋಡಿಯಾ-ಥಾಯ್ಲೆಂಡ್, ಅಜರ್‌ಬೈಜಾನ್-ಅರ್ಮೇನಿಯಾ, ಕಾಂಗೋ ಮತ್ತು ರ್‍ವಾಂಡಾ ನಡುವಿನ ಸಂಘರ್ಷ ನಿಲ್ಲಿಸುವಲ್ಲೂ ಟ್ರಂಪ್ ಪ್ರಮುಖ ಪಾತ್ರವಹಿಸಿದ್ದಾರೆ. ಟ್ರಂಪ್ ಅವರು ಶಾಂತಿಗೆ ಬದ್ಧವಾಗಿದ್ದಾರೆ. ಅವರು ಶಾಂತಿ ಸ್ಥಾಪಿಸುವ ಅಧ್ಯಕ್ಷರಾಗಿದ್ದಾರೆ’ ಎಂದರು.
ಜತೆಗೆ, ‘ಉಕ್ರೇನ್-ರಷ್ಯಾ ನಡುವಿನ ಯುದ್ಧ ನಿಲ್ಲಿಸುವ ವಿಚಾರದಲ್ಲೂ ನಾವು ಭರವಸೆ ಹೊಂದಿದ್ದೇವೆ’ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಕಿಡಿ:
ರುಬಿಯೋ ಹೇಳಿಕೆ ಬೆನ್ನಲ್ಲೇ ಇದೀಗ ಪ್ರತಿಪಕ್ಷ ಕಾಂಗ್ರೆಸ್ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದೆ. ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇ ತಾನು ಎಂದು ಟ್ರಂಪ್ ಈಗಾಗಲೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಈಗ ಅಮೆರಿಕ ವಿದೇಶಾಂಗ ಸಚಿವ ರುಬಿಯೋ ಕೂಡ ಇದೇ ಮಾತಾಡಿದ್ದಾರೆ. ಟ್ರಂಪ್ ಹೇಳಿಕೆಯನ್ನು ಸಾರ್ವಜನಿಕವಾಗಿ ನಿರಾಕರಿಸಲು ಮೋದಿ ಏಕೆ ಹೆದರುತ್ತಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ