
ನ್ಯೂಯಾರ್ಕ್/ವಾಷಿಂಗ್ಟನ್ : ಭಾರತ ಇನ್ನುಮುಂದೆ ರಷ್ಯಾದಿಂದ ತೈಲ ತರಿಸಿಕೊಳ್ಳುವುದಿಲ್ಲ ಎಂದು ಕೇಳಲ್ಪಟ್ಟಿದ್ದೇನೆ. ಇದು ನಿಜವೇ ಆಗಿದ್ದರೆ ಒಳ್ಳೆಯ ಹೆಜ್ಜೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾದೊಂದಿಗಿನ ವ್ಯಾಪಾರ ಮುಂದುವರೆಸಿದರೆ ಅಂತಹ ದೇಶಗಳ ಮೇಲೆ ದಂಡ ವಿಧಿಸುವ ತಮ್ಮ ಬೆದರಿಕೆಗೆ ಬೆದರಿ ಭಾರತ ತಲೆಬಾಗಿದೆ ಎಂಬರ್ಥದಲ್ಲಿ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಭಾರತ ಇನ್ನು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಮಾಹಿತಿ ದೊರೆತಿದೆ. ಅದು ನಿಜವೋ ಅಲ್ಲವೋ ತಿಳಿದಿಲ್ಲ. ಆದರೆ ಅದು ನಿಜವೇ ಆಗಿದ್ದರೆ ಒಳ್ಳೆಯ ನಡೆ. ಏನಾಗುತ್ತದೆ ನೋಡೋಣ’ ಎಂದು ಹೇಳಿದರು.
ಜತೆಗೆ, ‘ಅಮೆರಿಕಕ್ಕೆ ಭಾರತದ ಜತೆ ವ್ಯಾಪಾರ ಸಂಬಂಧ ಚೆನ್ನಾಗಿಲ್ಲ. ಅವರು ನಮ್ಮ ಮೇಲೆ ಅತ್ಯಧಿಕ ತೆರಿಗೆ ಹೇರುತ್ತಾರೆ. ಜತೆಗೆ, ರಷ್ಯಾದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಸುತ್ತಾರೆ. ರಷ್ಯಾ ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಬೇಕೆಂದು ಎಲ್ಲರೂ ಬಯಸುತ್ತಿರುವ ಹೊತ್ತಿನಲ್ಲೇ ಭಾರತ ಮತ್ತು ಚೀನಾ ಹೀಗೆ ಮಾಡುತ್ತಿವೆ’ ಎಂದು ಎಂದಿನಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರವಷ್ಟೇ ಟ್ರಂಪ್, ಭಾರತ ಸೇರಿ 70 ದೇಶಗಳ ಆಮದಿನ ಮೇಲಿನ ತೆರಿಗೆ ಆದೇಶಕ್ಕೆ ಸಹಿ ಮಾಡಿದ್ದರು. ಇದರನ್ವಯ ಆ.7ರಿಂದ ಭಾರತದ ಉತ್ಪನ್ನಗಳು ಶೇ.25ರಷ್ಟು ಸುಂಕ ಭರಿಸಿ ಅಮೆರಿಕದ ಮಾರುಕಟ್ಟೆ ಪ್ರವೇಶಿಸಬೇಕಿದೆ. ಒಂದೊಮ್ಮೆ ರಷ್ಯಾದಿಂದ ತೈಲ ಮತ್ತು ರಕ್ಷಣಾ ಸಾಮಗ್ರಿಗಳ ಆಮದನ್ನು ಮುಂದುವರೆಸಿದರೆ, ಹೆಚ್ಚುವರಿ ದಂಡವನ್ನು ವಿಧಿಸುವುದಾಗಿಯೂ ಟ್ರಂಪ್ ಬೆದರಿಸಿದ್ದಾರೆ.
ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ: ಭಾರತ ಸ್ಪಷ್ಟನೆ
ನವದೆಹಲಿ: ‘ಭಾರತ ರಷ್ಯಾದಿಂದ ತೈಲ ಆಮದು ನಿಲ್ಲಿಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತ ಸರ್ಕಾರದ ಮೂಲಗಳು, ‘ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೇ ಜಾಗತಿಕವಾಗಿ ಇಂಧನದ ಬೆಲೆ ಸ್ಥಿರವಾಗಿದೆ’ ಎಂದು ಸಮರ್ಥಿಸಿಕೊಂಡಿವೆ.
‘ಇಂಧನ ಉತ್ಪಾದಕ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತಗೊಳಿಸಿದ ಪರಿಣಾಮ ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಹೀಗೆ ಮಾಡಿರದಿದ್ದರೆ, ಜಾಗತಿಕ ಇಂಧನ ಬೆಲೆ ವೇಗವಾಗಿ ಏರಿಬಿಡುತ್ತಿತ್ತು. ನಾವು ಜಾಗತಿಕ ಮಟ್ಟದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದೇವೆ’ ಎಂದು ಮೂಲಗಳು ಹೇಳಿವೆ.
ಅತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, ‘ಭಾರತೀಯ ತೈಲ ಸಂಸ್ಥೆಗಳು ರಷ್ಯಾದ ಆಮದುಗಳನ್ನು ನಿಲ್ಲಿಸಿರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಭಾರತದ ಇಂಧನ ಖರೀದಿಗಳು ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಮಾರುಕಟ್ಟೆ ಶಕ್ತಿಗಳಿಂದ ನಡೆಸಲ್ಪಡುತ್ತವೆ’ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಈ ನಡುವೆ ತೈಲ ಸಂಸ್ಕರಣಾಗಾರರು ಮತ್ತು ತೈಲ ಸಚಿವಾಲಯ ಈವರೆಗೆ ರಷ್ಯಾ ತೈಲ ಆಮದು ಸ್ಥಗಿತದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ