
ಅಭಯಾರಣ್ಯದಲ್ಲಿ ಸಫಾರಿ ಮಾಡುವ ಅನುಭವವೇ ರೋಚಕವಾಗಿದ್ದರೂ, ಅಲ್ಲಿ ಇರುವ ನಿಯಮ, ಷರತ್ತುಗಳನ್ನು ಗಮನದಲ್ಲಿ ಇರಿಸಿಕೊಳ್ಳದೇ ಹೋದರೆ ಪ್ರಾಣಕ್ಕೆ ಕಂಟಕ ಎನ್ನುವುದೂ ಅಷ್ಟೇ ದಿಟ. ಸಫಾರಿಗೆಂದು ಇಲಾಖೆಯವರೇ ಇಟ್ಟಿರುವ ವಾಹನಗಳಲ್ಲಿ ಹೋಗುವುದು ಉತ್ತಮವಾದರೂ ಕೆಲ ವರ್ಷಗಳ ಹಿಂದೆ ಇದೇ ಗಾಡಿಯಲ್ಲಿದ್ದ ಮಗುವೊಂದನ್ನು ಹುಲಿ ಎಳೆದೊಯ್ದಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಆದ್ದರಿಂದ ಇದೀಗ ವಾಹನಗಳಿಗೂ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಆದರೆ ಹಲವರು ತಮ್ಮ ಸ್ವಂತ ಗಾಡಿಯಲ್ಲಿ ತೆರಳುವುದಕ್ಕೆ ಕೆಲವಡೆ ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದ ಸಂದರ್ಭದಲ್ಲಿ ಅವರಿಗೆ ಹಲವಾರು ರೀತಿಯ ನಿಬಂಧನೆಗಳನ್ನು ವಿಧಿಸಲಾಗಿರುತ್ತದೆ. ಯಾವುದೇ ಕಾರಣಕ್ಕೂ ಅವರು ತಮ್ಮ ವಾಹನದಿಂದ ಕೆಳಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿರುತ್ತದೆ.
ಆದರೆ ಸಿಟ್ಟು ಎನ್ನುವುದು ಹಲವರಿಗೆ ನಿಯಂತ್ರಣ ಮಾಡಿಕೊಳ್ಳಲು ಆಗುವುದೇ ಇಲ್ಲವಲ್ಲ! ಸಿಟ್ಟು ಬಂದಾಗ ತಾವು ಏನು ಮಾಡುತ್ತೇವೆ ಎನ್ನುವ ಪರಿವೇ ಇಲ್ಲದೇ ತಮ್ಮ ಪ್ರಾಣಕ್ಕೆ ಮಾತ್ರವಲ್ಲದೇ ಇತರ ಪ್ರಾಣಕ್ಕೂ ಸಂಚಕಾರ ತರುವುದು ಹೊಸ ವಿಷಯವೇನಲ್ಲ. ಇಲ್ಲೊಂದು ಘಟನೆಯಲ್ಲಿ ಅದೇ ರೀತಿಯಾಗಿದೆ. ಸಫಾರಿಗೆ ಸ್ವಂತ ಕಾರಿನಲ್ಲಿ ಕುಟುಂಬ ಹೋಗುವ ಸಮಯದಲ್ಲಿ, ಗಂಡನ ಜೊತೆ ಯಾವುದೋ ಕಾರಣಕ್ಕೆ ಜಗಳವಾಡಿದ್ದಾಳೆ ಪತ್ನಿ. ಆಕೆ ಕಾರಿನ ಹಿಂದುಗಡೆ ಕುಳಿತಿದಿದ್ದಳು. ಅದೇ ಕೋಪದಲ್ಲಿ ತಾವು ಇರುವುದು ಅಭಯಾರಣ್ಯದಲ್ಲಿ ಎನ್ನುವುದನ್ನೂ ಮರೆತು, ಕಾರಿನಿಂದ ಇಳಿದು ಗಂಡನ ಜೊತೆ ಕಿತ್ತಾಡಲು ಹೋಗಿದ್ದಾಳೆ. ಆದರೆ ಗ್ರಹಚಾರ ಸರಿಯಿರಲಿಲ್ಲ. ಅದೇ ಸಮಯದಲ್ಲಿ ಹುಲಿಯೊಂದು ಬಂದು ಮಹಿಳೆಯನ್ನು ಎಳೆದೊಯ್ದಿದೆ.
ಆ ಹೊತ್ತಿಗೆ ಮಹಿಳೆಯ ತಾಯಿ, ಗಂಡ, ಮಗ ಎಲ್ಲರೂ ಗಾಬರಿಯಿಂದ ಕಾರಿನಿಂದ ಹೊರಕ್ಕೆ ಬರುವುದನ್ನು ಅಲ್ಲಿರುವ ಸಿಸಿಟಿವಿಯಲ್ಲಿ ನೋಡಬಹುದಾಗಿದೆ. ಇಷ್ಟು ವಿಡಿಯೋ ನೋಡಿದರೆ, ಆ ಹುಲಿ ಮಹಿಳೆಯನ್ನು ಸಾಯಿಸಿರಬಹುದು ಎನ್ನಿಸುವುದು ಉಂಟು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಲ್ಲಿ ಸಾವು ಮಹಿಳೆಗೆ ಸಮೀಪಿಸಿರಲಿಲ್ಲ, ಆದರೆ ಆಕೆಯ ತಾಯಿಯ ಸಾವು ಕಾದುಕುಳಿತಿತ್ತು. ಮಗಳನ್ನು ಉಳಿಸಿಕೊಳ್ಳಲು ತಾಯಿ ಆ ಹುಲಿಯನ್ನು ತನ್ನ ಪ್ರಾಣವನ್ನು ಪಣಕ್ಕಿಟ್ಟು ಓಡಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅದಾಗಲೇ ಹುಲಿ ಸುಮಾರು ದೂರ ಮಗಳನ್ನು ಎಳೆದೊಯ್ದಿತ್ತು. ಮಗಳನ್ನು ಕಾಪಾಡುವಲ್ಲಿ ತಾಯಿ ಯಶಸ್ವಿಯಾದಳು. ಆದರೆ ಅದೇ ಸಂದರ್ಭದಲ್ಲಿ ಅಲ್ಲಿದ್ದ ಮತ್ತೊಂದು ಹುಲಿ ತಾಯಿಯ ಮೇಲೆರಗಿ ಆಕೆಯನ್ನು ಕೊಂದುಹಾಕಿದೆ. ಮಗಳ ಪ್ರಾಣ ಉಳಿಸಿದ ತಾಯಿ ಕೊನೆಯುಸಿರೆಳೆದಿದ್ದಾಳೆ!
ಈ ಘಟನೆ ನಡೆದಿರುವುದು 2016ರಲ್ಲಿ ಎನ್ನಲಾಗಿದೆ. ಚೀನಾದ ಬೀಜಿಂಗ್ನಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಬಡಾಲಿಂಗ್ ವನ್ಯಜೀವಿ ಪಾರ್ಕ್‌ನಲ್ಲಿ ಘಟನೆ ನಡೆದಿದೆ. ಇದು ಹುಲಿ ಸಫಾರಿ ಪಾರ್ಕ್‌ನಲ್ಲಿ ಸಂಭವಿಸಿದೆ, ಅಲ್ಲಿ ಸಂದರ್ಶಕರು ವಾಹನ ಚಲಾಯಿಸುವ ಮೂಲಕ ಜೀವಿಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಗಂಡನ ಜೊತೆ ಜಗಳವಾಡಿದ ಮಹಿಳೆಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಬಳಿಕ ಆಕೆ ಚೇತರಿಸಿಕೊಂಡಿದ್ದಾಳೆ. ಆದರೆ ಮಗಳನ್ನು ಉಳಿಸಲು ತಾಯಿ ಪ್ರಾಣ ಕಳೆದುಕೊಂಡಿದ್ದಾಳೆ. ಬಳಿಕ ಕುಟುಂಬಸ್ಥರು ವನ್ಯಜೀವಿ ತಾಣದ ಮೇಲೆ ಕೇಸು ದಾಖಲು ಮಾಡಿದ್ದಾರೆ. ಇದರಲ್ಲಿ ಇವರದ್ದೇ ತಪ್ಪಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಷರತ್ತುಗಳನ್ನು ಉಲ್ಲಂಘಿಸಿ ಅವರು ಹೀಗೆ ಮಾಡಿದ್ದರೂ ಮಾನವೀಯ ನೆಲೆಗಟ್ಟಿನಲ್ಲಿ ಅಲ್ಲಿಯ ಕೋರ್ಟ್ ಪರಿಹಾರಕ್ಕೂ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ