
ಬೀಜಿಂಗ್: ನೆರೆಯ ಬಾಂಗ್ಲಾದೇಶದ ಜನತೆಯೊಂದಿಗೆ ಯಾವುದೇ ರೀತಿಯ ಡೇಟಿಂಗ್ ಮತ್ತು ಮದುವೆ ಸಂಬಂಧ ಹೊಂದಬಾರದು ಎಂದು ತನ್ನ ಜನತೆಗೆ ಚೀನಾ ಖಡಕ್ ಸಂದೇಶವನನ್ನು ರವಾನಿಸಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ಏರ್ಪಟ್ಟಿದ್ದು, ಮಧ್ಯಂತರ ಸರ್ಕಾರದ ಪ್ರಧಾನಿಯಾಗಿರುವ ಮೊಹಮ್ಮದ್ ಯೂನುಸ್ ಸಹ ರಾಜೀನಾಮೆ ನೀಡುವ ಮಾತುಗಳನ್ನಾಡುತ್ತಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ವೇಳೆ ಬಾಂಗ್ಲಾದೇಶದ ಜೊತೆ ನಿಕಟ ಸಂಪರ್ಕ ಹೊಂದಿರುವ ಚೀನಾ ಅಚ್ಚರಿಯ ಆದೇಶವನ್ನು ಪ್ರಕಟಿಸಿದೆ. ಚೀನಾದ ನಾಗರಿಕರು ಯಾವುದೇ ವಿದೇಶಿ ಪುರುಷ/ಮಹಿಳೆಯನ್ನು ಮದುವೆಯಾಗಬಾರದು ಎಂಬ ಹೊಸ ನಿಯಮವನ್ನು ರೂಪಿಸಿದೆ. ಈ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಚೀನಾ ಸರ್ಕಾರ ಆದೇಶಿಸಿದೆ.
ಚೀನಾ ರಾಯಭಾರಿ ಕಚೇರಿ ಭಾನುವಾರ ರಾತ್ರಿಯೇ ಈ ಸಲಹೆಯನ್ನು ತನ್ನ ನಾಗರೀಕರಿಗೆ ನೀಡಿದೆ. ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಈ ಸಲಹೆಯಲ್ಲಿ ಚೀನಾದ ಪ್ರಜೆಗಳು ಅಕ್ರಮ ಮ್ಯಾಚ್‌ಮೇಕಿಂಗ್ ಏಜೆಂಟ್‌ಗಳ ಬಲೆಯಲ್ಲಿ ಸಿಲುಕಬಾರದು. ವಿದೇಶಿ ಪತ್ನಿಯರ ಮೋಹಕ್ಕೆ ಒಳಗಾಗಬಾರದು. ಅಕ್ರಮ ಮ್ಯಾಚ್ ಮೇಕಿಂಗ್ ಏಜೆಂಟ್, ಡೇಟಿಂಗ್ ಆಪ್‌ಗಳಿಂದ ಜಾಗರೂಕರಾಗಿರುವಂತೆ ತಿಳಿಸಲಾಗಿದೆ. ಅದರಲ್ಲಿಯೂ ಬಾಂಗ್ಲಾದೇಶ ಮೂಲದವರನ್ನು ಮದುವೆ ಅಥವಾ ಸಂಬಂಧ ಹೊಂದುವ ಮುನ್ನ ಎಚ್ಚರಿಕೆಯಿಂದಿರಬೇಕು. ಚೀನಾದ ನಾಗರಿಕರು ಯಾವುದೇ ರೀತಿಯಲ್ಲಿಯೂ ಮೋಸಕ್ಕೆ ಒಳಗಾಗಬಾರದು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಚೀನಾದಿಂದ ಯಾಕೆ ಈ ಆದೇಶ?
ಮಾನವ ಕಳ್ಳಸಾಗಣೆ ಆತಂಕ ಚೀನಾಕ್ಕೆ ಎದುರಾಗಿದೆ. ಮಾನವ ಕಳ್ಳಸಾಗಣೆಯನ್ನು ತಪ್ಪಿಸಲು ಚೀನಾ ತನ್ನ ನಾಗರೀಕರಿಗೆ ಸಲಹೆ ರೂಪದಲ್ಲಿ ಈ ಆದೇಶವನ್ನು ಪ್ರಕಟಿಸಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಅಲ್ಲಿಯ ಜನರು ದೇಶ ತೊರೆಯುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚೀನಾ ಈ ಕ್ರಮ ತೆಗೆದುಕೊಂಡಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿನಿಂದ ಭಾರತ ಸಹ ಗಡಿಯಲ್ಲಿ ತೀವ್ರ ನಿಗಾ ಇರಿಸಿದೆ. ಬಾಂಗ್ಲಾದೇಶದೊಂದಿಗೆ ಭಾರತ ಗಡಿ ಹಂಚಿಕೊಂಡಿರುವ ಕಾರಣ, ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ದೇಶದೊಳಗೆ ನುಸಳುವ ಸಾಧ್ಯತೆಗಳು ಅಧಿಕವಾಗಿರುತ್ತವೆ.
ಇತ್ತೀಚಿನ ವರದಿಗಳ ಪ್ರಕಾರ, ಬಾಂಗ್ಲಾದೇಶದ ಪ್ರಜೆಗಳು ವಿದೇಶಿ ಪ್ರಜೆಗಳನ್ನು ಮದುವೆಯಾಗುವ ಮೂಲಕ ಅಕ್ರಮ ರೂಪದಲ್ಲಿ ಗಡಿ ಪ್ರವೇಶಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಚೀನಾ ಕಳವಳ ವ್ಯಕ್ತಪಡಿಸಿದೆ ಮತ್ತು ತನ್ನ ಜನರನ್ನು ಎಚ್ಚರಿಸಿದೆ. ಬಾಂಗ್ಲಾದೇಶದಲ್ಲಿ ಅಕ್ರಮ ಗಡಿಯಾಚೆಗಿನ ವಿವಾಹಗಳಲ್ಲಿ ಭಾಗಿಯಾಗಿರುವವರನ್ನು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗುತ್ತದೆ ಎಂದು ಚೀನಾ ರಾಯಭಾರ ಕಚೇರಿ ಎಚ್ಚರಿಸಿದೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಸಂಘಟನೆಗಳಿಂದ ಹಿಡಿದು ವಿರೋಧ ಪಕ್ಷಗಳವರೆಗೆ ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಸ್ತುತ ಮುಖ್ಯಸ್ಥ ಮೊಹಮ್ಮದ್ ಯೂನಸ್ ತೀವ್ರ ಸಂಕಷ್ಟದಲ್ಲಿದ್ದಾರೆ. ವಿರೋಧ ಪಕ್ಷವು ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತಿದೆ. ಇಡೀ ವಿಷಯ ಸರ್ಕಾರ vs ಸೈನ್ಯ ಎಂಬಂತಾಗಿದೆ. ಮೊಹಮ್ಮದ್ ಯೂನಸ್ ಸರ್ಕಾರ ಮತ್ತು ಮಿಲಿಟರಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬಾಂಗ್ಲಾದೇಶದ ಮ್ಯಾನ್ಮಾರ್ ಗಡಿಯಲ್ಲಿ ಮಾನವೀಯ ಕಾರಿಡಾರ್ ನಿರ್ಮಿಸುವ ಯೋಜನೆ. ಇದರಿಂದಾಗಿ ಇಬ್ಬರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊಹಮ್ಮದ ಯೂನುಸ್ ವಿರುದ್ಧ ಶೇಖ್ ಹಸೀನಾ ಆರೋಪ
ಇತ್ತ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ನಾನು ಎಂದಿಗೂ ಅಧಿಕಾರಕ್ಕಾಗಿ ದೇಶವನ್ನು ಮಾರಿಲ್ಲ. ದೇಶವನ್ನು ಉಳಿಸಲು ನಾನು ಗಡಿಪಾರು ಹೋಗುವುದು ಅನಿವಾರ್ಯವಾಗಿತ್ತು.ಯೂನುಸ್ ಅಧಿಕಾರಕ್ಕೆ ಬರಲು ತಮ್ಮ ಸರ್ಕಾರ ವರ್ಷಗಳ ಕಾಲ ಹೋರಾಡಿದ ಭಯೋತ್ಪಾದಕ ಸಂಘಟನೆಗಳನ್ನೇ ಬಳಸಿಕೊಂಡಿದ್ದಾರೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಹಲವಾರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಆದರೆ ಈಗ ಜೈಲುಗಳು ಖಾಲಿಯಾಗಿವೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ