Texas Shooting: ಅಮೆರಿಕದ ಶಾಲೆಗಳ ಮೇಲೆ ಶೂಟೌಟ್ ಗಳ ರಕ್ತಸಿಕ್ತ ಇತಿಹಾಸ!

By Santosh NaikFirst Published May 25, 2022, 10:12 AM IST
Highlights

ಜಗತ್ತಿನ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಅಮೆರಿಕಕ್ಕೆ ಈಗ ಇದೇ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. ಗನ್ ಲಾಬಿ ಅಮೆರಿಕ ಸರ್ಕಾರವನ್ನು ಯಾವ ಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿಸಿದೆಯೆಂದರೆ, ಪ್ರತಿ ವರ್ಷ ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಸಾಮೂಹಿಕ ಶೂಟೌಟ್ ಗಳು ನಡೆಯುತ್ತಿವೆ. ಈ ಸಾಲಿಗೆ ಹೊಸದು ಟೆಕ್ಸಾಸ್ ಶೂಟಿಂಗ್. ಅಮೆರಿಕದಲ್ಲಿ ಕೇವಲ ಶಾಲೆಗಳ ಮೇಲೆ ನಡೆದಿರುವಂಥ ಶೂಟೌಟ್ ಗಳ ಇತಿಹಾಸ ಇಲ್ಲಿದೆ.

ಬೆಂಗಳೂರು (ಮೇ.25): ಜಗತ್ತಿಗೆ ದೊಡ್ಡಣ, ವಿಶ್ವದ ಶ್ರೀಮಂತ ರಾಷ್ಟ್ರ ಅಮೆರಿಕದ ಪಾಲಿಗೆ ಭಯೋತ್ಪಾದಕ ದಾಳಿಗಳಿಗಿಂತ, ತನ್ನ ದೇಶದ ಹದಿಹರೆಯದವರನ್ನು ನಿಯಂತ್ರಣದಲ್ಲಿಡೋದೇ ಸವಾಲಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಗನ್ ಹಿಡಿದು ನುಗ್ಗುವ ಅಲ್ಲಿನ ಯುವ ಜನತೆ, ಎದುರಿಗೆ ಸಿಕ್ಕವರ ಮೇಲೆ ಗುಂಡು ಹಾರಿಸುವ ಪ್ರವೃತ್ತಿ ಬೆಳೆಸಿಕೊಂಡಿದೆ. 

ಕಳೆದ ಕೆಲವೊಂದಷ್ಟು ವರ್ಷಗಳಲ್ಲಿ ಅಮೆರಿಕದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಡಜನ್‌ಗಟ್ಟಲೆ ಗುಂಡಿನ ದಾಳಿಗಳು ಮತ್ತು ಇತರ ದಾಳಿಗಳು ನಡೆದಿವೆ. ಆದರೆ 1999 ರಲ್ಲಿ ಕೊಲೊರಾಡೋದ ಕೊಲಂಬೈನ್ ಹೈಸ್ಕೂಲ್‌ನಲ್ಲಿ ನಡೆದ ಹತ್ಯಾಕಾಂಡದವರೆಗೆ, ಸಾವಿನ ಪ್ರಮಾಣ ಕೇವಲ ಒಂದಂಕಿಗಳಲ್ಲಿ ಇರುತ್ತಿತ್ತು. ಆದರೆ, ಕೊಲಂಬೈನ್ ದಾಳಿಯಿಂದ ಸಾವಿನ ಪ್ರಮಾಣ ಎರಡಂಕಿಗೆ ಏರಿದೆ. ಶಾಲೆ ಹಾಗೂ ಕಾಲೇಜುಗಳಲ್ಲಿ ಶೂಟೌಟ್ ಆದಲ್ಲಿ ಸಾವಿನ ಪ್ರಮಾಣ 10ಕ್ಕಿಂತ ಮೇಲೇರುವುದು ಸಹಜವಾಗಿ ಬಿಟ್ಟಿದೆ. ಇತ್ತೀಚಿನ ಎರಡು ಶೂಟೌಟ್ ಗಳು ಟೆಕ್ಸಾಸ್ ನಲ್ಲಿಯೇ ನಡೆದಿರುವುದು ವಿಪರ್ಯಾಸ.

ರಾಬ್ ಎಲಿಮೆಂಟರಿ ಸ್ಕೂಲ್ (ROBB ELEMENTARY SCHOOL), 2022 ಮೇ: ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ 18 ವರ್ಷದ ಬಂದೂಕುಧಾರಿ ಸಾಲ್ವಡರ್ ರಾಮೋಸ್ ಗುಂಡಿನ ದಾಳಿ ನಡೆಸಿದ್ದು, 19 ಮಕ್ಕಳು, ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಗವರ್ನರ್ ಗ್ರೆಗ್ ಅಬಾಟ್ ತಿಳಿಸಿದ್ದು, ಶೂಟರ್ ಸಾವು ಕಂಡಿದ್ದಾನೆ.

Latest Videos

ಸಾಂಟಾ ಫೆ ಹೈಸ್ಕೂಲ್ (SANTA FE HIGH SCHOOL), 2018 ಮೇ: ಹೂಸ್ಟನ್ ಪ್ರದೇಶದ ಪ್ರೌಢಶಾಲೆಯೊಂದರಲ್ಲಿ 17 ವರ್ಷದ ಯುವಕನೊಬ್ಬ ಗುಂಡು ಹಾರಿಸಿ 10 ಜನರನ್ನು ಕೊಂದಿದ್ದ. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂದು ಅಧಿಕಾರಿಗಳು ತಿಳಿಸಿದ್ದರು. ಶಂಕಿತನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.

ಮಾರ್ಜೋರಿ ಸ್ಟೋನ್‌ಮ್ಯಾನ್ ಡೌಗ್ಲಾಸ್ ಹೈಸ್ಕೂಲ್ (MARJORY STONEMAN DOUGLAS HIGH SCHOOL), 2018 ಫೆಬ್ರವರಿ: ಫ್ಲೋರಿಡಾದ ಪಾರ್ಕ್‌ಲ್ಯಾಂಡ್‌ನಲ್ಲಿರುವ ಶಾಲೆಯಲ್ಲಿ ನಡೆದ ದಾಳಿಯಲ್ಲಿ 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿ ಸಾವನ್ನಪ್ಪಿದ್ದರು. ಅನೇಕರು ಈ ಪ್ರಕರಣದಲ್ಲಿ ಗಾಯಗೊಂಡಿದ್ದರು. 20 ವರ್ಷದ ಆರೋಪಿಯ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು.

UMPQUA ಸಮುದಾಯ ಕಾಲೇಜು (UMPQUA COMMUNITY COLLEGE), 2015 ಅಕ್ಟೋಬರ್: ಒರೆಗಾನ್‌ನ ರೋಸ್‌ಬರ್ಗ್‌ನಲ್ಲಿನ ಶಾಲೆಯಲ್ಲಿ ಒಬ್ಬ ವ್ಯಕ್ತಿ ಒಂಬತ್ತು ಜನರನ್ನು ಕೊಂದಿದ್ದಲ್ಲದೆ, ಒಂಬತ್ತು ಇತರರನ್ನು ಗಾಯಗೊಳಿಸಿದ್ದ, ನಂತರ ತಾನೇ ಶೂಟ್ ಮಾಡಿಕೊಂಡು ಸಾವು ಕಂಡಿದ್ದ.

ಸ್ಯಾಂಡಿ ಹುಕ್ ಎಲಿಮೆಂಟರಿ ಸ್ಕೂಲ್ (SANDY HOOK ELEMENTARY SCHOOL), 2012 ಡಿಸೆಂಬರ್: ಅಮೆರಿಕದ ಶಾಲಾ ಶೂಟೌಟ್ ಗಳ ಇತಿಹಾಸದಲ್ಲಿಯೇ ಅತ್ಯಂತ ಕ್ರೂರ ಘಟನೆ ಇದಾಗಿತ್ತು. ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ತನ್ನ ಮನೆಯಲ್ಲಿ 19 ವರ್ಷದ ವ್ಯಕ್ತಿ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದ ಬಳಿಕ,  ಹತ್ತಿರದ ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆಗೆ ನುಗ್ಗಿ 1ನೇ ತರಗತಿಯ 20 ಮುಗ್ಧ ಮಕ್ಕಳು ಮತ್ತು ಆರು ಶಿಕ್ಷಕರನ್ನು ಕೊಂದಿದ್ದ. ಮನಸೋಇಚ್ಛೆ ಗುಂಡು ಹಾರಿಸಿದ ಬಳಿಕ ತಾನೂ ಗುಂಡಿಟ್ಟುಕೊಂಡಿದ್ದ. ಇದು ವಿಶ್ವಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

"

ವರ್ಜೀನಿಯಾ ಟೆಕ್ (VIRGINIA TECH), 2007 ಏಪ್ರಿಲ್: 2007ರ ಏಪ್ರಿಲ್‌ನಲ್ಲಿ ವರ್ಜೀನಿಯಾದ ಬ್ಲ್ಯಾಕ್ಸ್‌ಬರ್ಗ್‌ನಲ್ಲಿರುವ ಕ್ಯಾಂಪಸ್‌ನಲ್ಲಿ 23 ವರ್ಷದ ವಿದ್ಯಾರ್ಥಿಯೊಬ್ಬ 32 ಜನರನ್ನು ಕೊಂದಿದ್ದ. ಎರಡು ಡಜನ್‌ಗಿಂತಲೂ ಹೆಚ್ಚು ಜನರು ಗಾಯಗೊಂಡಿದ್ದರು. ನಂತರ ಶೂಟರ್ ಆತ್ಮಹತ್ಯೆ ಮಾಡಿಕೊಂಡಿದ್ದ.

ರೆಡ್ ಲೇಕ್ ಹೈಸ್ಕೂಲ್ (RED LAKE HIGH SCHOOL), 2005 ಮಾರ್ಚ್: 16 ವರ್ಷದ ವಿದ್ಯಾರ್ಥಿಯು ತನ್ನ ಮಿನ್ನೇಸೋಟದ ಮನೆಯಲ್ಲಿ ತನ್ನ ಅಜ್ಜ ಮತ್ತು ವ್ಯಕ್ತಿಯ ಸಹಚರನನ್ನು ಕೊಂದಿದ್ದ. ನಂತರ ಹತ್ತಿರದ ರೆಡ್ ಲೇಕ್ ಹೈಸ್ಕೂಲ್‌ಗೆ ತೆರಳಿ, ತನಗೆ ತಾನೇ ಗುಂಡು ಹಾರಿಸಿಕೊಳ್ಳುವ ಮುನ್ನ, ಐದು ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಭದ್ರತಾ ಸಿಬ್ಬಂದಿಗೆ ಗುಂಡು ಹಾಕಿದ್ದ.

Texas Shooting: ಪ್ರಾಥಮಿಕ ಶಾಲೆಯಲ್ಲಿ ಯುವಕನಿಂದ ದಾಳಿ, ಅಮಾಯಕ 18 ಮಕ್ಕಳು ಬಲಿ!

ಕೊಲಂಬೈನ್ ಹೈಸ್ಕೂಲ್ (COLUMBINE HIGH SCHOOL), 1999 ಏಪ್ರಿಲ್:  ಕೊಲೊರಾಡೋದ ಲಿಟಲ್‌ಟನ್‌ನಲ್ಲಿರುವ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ತಮ್ಮ 12 ಗೆಳೆಯರನ್ನು ಮತ್ತು ಒಬ್ಬ ಶಿಕ್ಷಕರನ್ನು ಕೊಂದಿದ್ದರು. ಪೊಲೀಸರು ಇವರನ್ನು ಕೊಲ್ಲುವ ಮುನ್ನ ಅನೇಕರನ್ನು ಗಾಯಗೊಳಿಸಿದ್ದರು.

Texas Shooting: ಮೊದಲು ತನ್ನ ಅಜ್ಜಿಗೆ ಗುಂಡಿಕ್ಕಿದ ದಾಳಿಕೋರ, ನಂತರ ಶಾಲೆಗೆ ತೆರಳಿ ಗುಂಡಿನ ಮಳೆಗೆರೆದಿದ್ದ!

2022ರಲ್ಲಿಯೇ 212 ಪ್ರಕರಣ:
ಅಮೆರಿಕದಲ್ಲಿ 2022ರ ವರ್ಷವೊಂದರಲ್ಲಿಯೇ ಈವರೆಗೂ 212 ಸಾಮೂಹಿಕ ಶೂಟಿಂಗ್ ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಅಮೆರಿಕದಲ್ಲಿ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ವ್ಯಾಪಕವಾಗಿ ಏರಿಕೆ ಕಾಣುತ್ತಿದೆ. ಗನ್ ವಯಲೆನ್ಸ್ ಆರ್ಕೈವ್ ಪ್ರಕಾರ, 2022 ರಲ್ಲಿ ಕನಿಷ್ಠ 212 ಸಾಮೂಹಿಕ ಗುಂಡಿನ ಘಟನೆಗಳು ನಡೆದಿವೆ. ಜಿವಿಎ ಪ್ರಕಾರ, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ ಅಥವಾ ಗಾಯಗೊಂಡ ಘಟನೆಗಳನ್ನು ಸಾಮೂಹಿಕ ಗುಂಡಿನ ದಾಳಿಯಲ್ಲಿ ಸೇರಿಸಲಾಗಿದೆ. 

click me!