
ಅಮೆರಿಕಾದಲ್ಲಿ ಭಾರತೀಯನ ಗುಂಡಿಕ್ಕಿ ಹತ್ಯೆ
ಅಮೆರಿಕಾದಲ್ಲಿ ಮತ್ತೊರ್ವ ಭಾರತೀಯನ ಹತ್ಯೆ ನಡೆದಿದೆ. ಅಮೆರಿಕಾದಲ್ಲಿ ಉದ್ಯೋಗದಲ್ಲಿದ್ದ ತೆಲಂಗಾಣ ಮೂಲದ ಯುವಕನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕ್ಯಾಲಿಫೋರ್ನಿಯಾದ ಸಂತಾ ಕ್ಲಾರಾದಲ್ಲಿ ಪೊಲೀಸರೇ ಭಾರತೀಯ ಯುವಕನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ 29 ವರ್ಷದ ಯುವಕ ಮೊಹಮ್ಮದ್ ನಿಜಾಮುದ್ದೀನ್ ಕೊಲೆಯಾದ ಯುವಕ. ಮಗನ ಹಠಾತ್ ಸಾವಿನಿಂದ ದುಃಖಿತರಾಗಿರುವ ಪೋಷಕರು ಈಗ ತಮ್ಮ ಪುತ್ರನ ಮೃತದೇಹವನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ಸಂತಾಕ್ಲಾರಾ ಪೊಲೀಸರಿಂದ ತೆಲಂಗಾಣದ ಯುವಕನಿಗೆ ಗುಂಡೇಟು
ರೂಮ್ ಮೇಟ್ ಜೊತೆಗಿನ ಮಾತಿನ ಚಕಮಕಿಯ ನಂತರ ಸೆಪ್ಟೆಂಬರ್ 18ರಂದು ಈ ದುರಂತ ನಡೆದಿದೆ ಎಂದು ಮೊಹಮ್ಮದ್ ನಿಜಾಮುದ್ದೀನ್ ಅವರ ಪೋಷಕರು ಹೇಳಿದ್ದಾರೆ. ಮೊಹಮ್ಮದ್ ನಿಜಾಮುದ್ದೀನ್ ಅವರು ಉನ್ನತ ಶಿಕ್ಷಣಕ್ಕಾಗಿ 2016ರಲ್ಲಿ ಅಮೆರಿಕಾಗೆ ಹೋಗಿದ್ದು, ಅಲ್ಲೇ ನೆಲೆಸಿದ್ದರು. ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್ ಅವರ ಪ್ರಕಾರ ಅವರಿಗೆ ನಿನ್ನೆ ಮಗನ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದೆ. ಸಂತಾ ಕ್ಲಾರಾದ ಪೊಲೀಸರ ಗುಂಡೇಟಿಗೆ ತಮ್ಮ ಪುತ್ರ ಬಲಿಯಾಗಿದ್ದು, ಆತನ ಶವವೂ ಅಲ್ಲಿನ ನಗರದ ಆಸ್ಪತ್ರೆಯಲ್ಲಿ ಇದೆ ಎಂದು ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಗನ ಪಾರ್ಥಿವ ಶರೀರ ಭಾರತಕ್ಕೆ ತರಲು ಸಹಾಯ ಮಾಡುವಂತೆ ಕುಟುಂಬದ ಮನವಿ
ಅವರು ಏಕೆ ನನ್ನ ಮಗನಿಗೆ ಗುಂಡಿಕ್ಕಿ ಕೊಂದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಘಟನೆಗೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ನಿನ್ನೆ ಪತ್ರ ಬರೆದಿರುವ ಹಸನುದ್ದೀನ್, ಮಗನ ಮೃತದೇಹವನ್ನು ತಾಯ್ನೆಲಕ್ಕೆ ತರುವುದಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಇರುವ ಭಾರತದ ವಿದೇಶಾಂಗ ಸಚಿವಾಲಯ ಹಾಗೂ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ಗೆ, ತಮ್ಮ ಪುತ್ರನ ಮೃತದೇಹವನ್ನು ಭಾರತಕ್ಕೆ ತಲುಪಿಸುವುದಕ್ಕೆ ಸಹಾಯ ಮಾಡುವುದಕ್ಕೆ ನಿರ್ದೇಶನ ನೀಡುವಂತೆ ಹಾಗೂ ಮಗನ ಹಠಾತ್ ಸಾವಿಗೆ ಕಾರಣವಾಗಿದ್ದು ಎಂಬುದರ ಬಗ್ಗೆ ತನಿಖೆ ಮಾಡಲು ಸೂಚಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಜ್ಲೀಸ್ ಬಚಾವೊ ತೆಹ್ರಿಕ್ ವಕ್ತಾರ ಅಮ್ಜಿದ್ ಉಲ್ಹಾ ಖಾನ್ ಅವರು ಟ್ವಿಟ್ಟರ್‌ನಲ್ಲಿ ಮೊಹಮ್ಮದ್ ನಿಜಾಮುದ್ದೀನ್ ಅವರು ಬರೆದಿರುವ ಪತ್ರವನ್ನು ಹಂಚಿಕೊಂಡಿದ್ದು, ಕೇಂದ್ರ ವಿದೇಶಾಂಗ ಸಚಿವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ದುಃಖಿತ ಕುಟುಂಬಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಅಮೆರಿಕಾದಲ್ಲಿ ಭಾರತೀಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ಅಮೆರಿಕಾದಲ್ಲಿ ಕೆಲಸಗಾರನೋರ್ವ ತಲೆಕಡಿದು ಹತ್ಯೆ ಮಾಡಿದ ಭಯಾನಕ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮೊದಲೇ ಈಗ ಮತ್ತೊಂದು ದುರಂತ ನಡೆದಿದ್ದು, ಅಮೆರಿಕಾದಲ್ಲಿ ಭಾರತೀಯ ಸಮುದಾಯದ ಸುರಕ್ಷತೆ ಬಗ್ಗೆ ಕಳವಳ ಮೂಡಿದೆ.
ಇದನ್ನೂ ಓದಿ: ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ