ನಾವು ಬದಲಾಗಿದ್ದೇವೆ, ಮಹಿಳೆಯರನ್ನು ಹಿಂಸಿಸಲ್ಲ: ವಿಶ್ವಕ್ಕೆ ತಾಲಿಬಾನ್‌ ಭರವಸೆ!

By Kannadaprabha News  |  First Published Aug 18, 2021, 7:40 AM IST

* ಸ್ತ್ರೀಯರ ಉದ್ಯೋಗ, ವಿದ್ಯಾಭ್ಯಾಸಕ್ಕೂ ಅವಕಾಶ ಸರ್ಕಾರದಲ್ಲೂ ಹುದ್ದೆ ಕೊಡುತ್ತೇವೆ

* ನಾವು ಬದಲಾಗಿದ್ದೇವೆ, ಮಹಿಳೆಯರನ್ನು ಹಿಂಸಿಸಲ್ಲ: ವಿಶ್ವಕ್ಕೆ ತಾಲಿಬಾನ್‌ ಭರವಸೆ

* ಟೀವಿ ಚಾನಲ್‌ನಲ್ಲಿ ಮಹಿಳಾ ಆ್ಯಂಕರ್‌ಗಳಿಗೆ ಸಂದರ್ಶನ ನೀಡಿದ ತಾಲಿಬಾನ್‌ ಉಗ್ರರು


ಕಾಬೂಲ್‌(ಆ.18): ತಪ್ಪು ಮಾಡಿದರಿಗೆ ಚಾಟಿ ಏಟು ನೀಡುವ, ಕೈ- ಕಾಲು ಕತ್ತರಿಸುವ, ಗುಂಡಿಟ್ಟು ಹತ್ಯೆ ಮಾಡುವ ಮತ್ತು ಮಹಿಳೆಯರ ಮೇಲೆ ಹೇಯ ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಇಡೀ ವಿಶ್ವದಲ್ಲೇ ಕುಖ್ಯಾತಿ ಹೊಂದಿದ್ದ ತಾಲಿಬಾನಿಗಳು, ಇದೀಗ ನಾವು ಮಹಿಳೆಯರನ್ನು ಹಿಂಸಿಸಲ್ಲ ಎಂದು ಘೋಷಣೆ ಮಾಡಿದ್ದಾರೆ. ತನ್ಮೂಲಕ 90ರ ದಶಕಕ್ಕೆ ಹೋಲಿಸಿದರೆ ನಾವು ಬದಲಾಗಿದ್ದೇವೆ ಎಂಬ ಭರವಸೆಯನ್ನು ವಿಶ್ವ ಸಮುದಾಯಕ್ಕೆ ರವಾನಿಸಿದ್ದಾರೆ.

ಮಹಿಳೆಯರು ಬಲಿಪಶುಗಳಾಗಿದ್ದರು. ಇನ್ನು ಮುಂದೆಯೂ ಅವರು ಬಲಿಪಶುಗಳಾಗಲು ಬಿಡುವುದಿಲ್ಲ. ನಾವು ಅವರ ಉದ್ಯೋಗ, ವಿದ್ಯಾಭ್ಯಾಸಕ್ಕೆ ಅಗತ್ಯ ವಾತಾವರಣ ಕಲ್ಪಿಸುತ್ತೇವೆ ಎಂದು ತಾಲಿಬಾನ್‌ ಘೋಷಿಸಿದೆ.

Latest Videos

undefined

ಇದಕ್ಕೆ ಇಂಬು ನೀಡುವಂತೆ, ಟೀವಿ ಚಾನೆಲೊಂದರಲ್ಲಿ ಮಹಿಳಾ ಆ್ಯಂಕರ್‌ಗಳಿಗೆ ತಾಲಿಬಾನ್‌ ಉಗ್ರರು ಸಂದರ್ಶನ ನೀಡುವ ಮೂಲಕ ತಾವು ಬದಲಾಗಿದ್ದೇವೆ ಎಂಬುದನ್ನು ನಿರೂಪಿಸಲು ಯತ್ನಿಸಿದ್ದಾರೆ. ತಮ್ಮ ನೂತನ ಸರ್ಕಾರದಲ್ಲಿ ಭಾಗಿಯಾಗಲು ಮಹಿಳೆಯರಿಗೂ ಆಹ್ವಾನ ನೀಡಿದ್ದಾರೆ. ಅಲ್ಲದೆ ಇಡೀ ದೇಶದ ಜನರಿಗೆ ಬೇಷರತ್‌ ಕ್ಷಮಾದಾನ ಪ್ರಕಟಿಸಿದ್ದಾರೆ. ಜೊತೆಗೆ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್‌ ನಾಯಕರನ್ನು ಭೇಟಿಯಾಗಿ ಅವರಿಗೆ ಎಲ್ಲಾ ರೀತಿಯ ರಕ್ಷಣೆಯ ಭರವಸೆ ನೀಡಿದ್ದಾರೆ. ಇದು ಸಾಕಷ್ಟುಅಚ್ಚರಿಯ ಜೊತೆಗೆ ಅನುಮಾನಕ್ಕೂ ಕಾರಣವಾಗಿದೆ.

90ರ ದಶಕದಲ್ಲಿ ದೇಶವನ್ನು ಆಳಿದ ವೇಳೆ ತಮಗೆ ಅಂಟಿಕೊಂಡಿದ್ದ ಕ್ರೂರತೆಯ ನಂಟನ್ನು ತೊಡೆದುಹಾಕಿ, ನಾವೀಗ ಬದಲಾಗಿದ್ದೇವೆ. ಜನರ ಅಭ್ಯುದಯವೇ ನಮ್ಮ ಗುರಿ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮತ್ತು ಇಮೇಜ್‌ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಇಂಥ ತಂತ್ರಗಳಿಗೆ ಉಗ್ರರು ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಆಹ್ವಾನ:

ಮಂಗಳವಾರ ಹೇಳಿಕೆಯೊಂದನ್ನು ನೀಡಿರುವ ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಾಗನಿ, ‘ಅಷ್ಘಾನಿಸ್ತಾನದಲ್ಲಿನ 40 ವರ್ಷಗಳ ಸಂಕಷ್ಟದ ವೇಳೆ ಮಹಿಳೆಯರೇ ಪ್ರಮುಖವಾಗಿ ಬಲಿಪಶುವಾಗಿದ್ದರು. ಹೀಗಾಗಿ ‘ದ ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಅಷ್ಘಾನಿಸ್ತಾನ್‌’ ಮಹಿಳೆಯರು ಇನ್ನು ಮುಂದೆಯೂ ಬಲಿಪಶುವಾಗಲು ಬಿಡುವುದಿಲ್ಲ. ನಾವು ಅವರಿಗೆ ಉದ್ಯೋಗ, ವಿದ್ಯಾಭ್ಯಾಸಕ್ಕೆ ಅಗತ್ಯ ವಾತಾವರಣ ಕಲ್ಪಿಸುತ್ತೇವೆ ಮತ್ತು ಷರಿಯಾ ಕಾನೂನು ಮತ್ತು ಸಾಂಸ್ಕೃತಿಕ ಮೌಲ್ಯಗಳ ಅನ್ವಯ ಸರ್ಕಾರದ ವಿವಿಧ ವಿಭಾಗಗಳಲ್ಲೂ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ‘ನಾವು ಎಲ್ಲಾ ಆಫ್ಘನ್ನರಿಗೂ ಕ್ಷಮಾದಾನ ಘೋಷಿಸುತ್ತೇವೆ. ಜೊತೆಗೆ ಆಫ್ಘನ್‌ ಅಥವಾ ವಿದೇಶಗಳ ಜೊತೆ ಕೆಲಸ ಮಾಡಿದವರ ಮೇಲೆ ನಾವು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸುತ್ತೇವೆ’ ಎಂಬ ಭರವಸೆ ನೀಡಿದ್ದಾರೆ.

ಹಲವು ಬದಲಾವಣೆ:

ಈ ಹಿಂದಿನ ಆಡಳಿತಕ್ಕೆ ಹೋಲಿಸಿದರೆ ಈ ಬಾರಿ ತಾಲಿಬಾನಿಗಳು, ಸಾರ್ವಜನಿಕವಾಗಿ ಸಾಕಷ್ಟುಪ್ರಗತಿಪರರಾಗಿ ಕಾಣಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಮುಖ್ಯವಾಗಿ ದೇಶವನ್ನು ತೆಕ್ಕೆಗೆ ತೆಗೆದುಕೊಂಡ ಮೇಲೆ ಎಲ್ಲೂ ಹಿಂಸಾಚಾರ ನಡೆಸಿಲ್ಲ. ವಿದೇಶಿಯರು ಅಥವಾ ಸ್ಥಳೀಯರ ಮೇಲೆ ಹಲ್ಲೆ ನಡೆಸಲು ಹೋಗಿಲ್ಲ. ಜೊತೆಗೆ ಸುದ್ದಿ ವಾಹಿನಿಗಳಲ್ಲಿ ಮಹಿಳಾ ಆ್ಯಂಕರ್‌ಗಳಿಗೆ ಸಾಕಷ್ಟುಪ್ರಮಾಣದಲ್ಲಿ ಸಂದರ್ಶನ ನೀಡುವ ಮೂಲಕ ಸ್ಥಳೀಯರು ಮತ್ತು ಜಾಗತಿಕ ಮಟ್ಟದಲ್ಲಿ ಬೆಂಬಲ ಪಡೆಯುವ ಯತ್ನ ನಡೆಸಿದ್ದಾರೆ.

ಅಲ್ಪಸಂಖ್ಯಾತರ ಭೇಟಿ:

ಈ ನಡುವೆ ಕೆಲ ತಾಲಿಬಾನ್‌ ನಾಯಕರು ಭಾನುವಾರ ಮತ್ತು ಸೋಮವಾರ ಕೆಲ ಹಿಂದೂ, ಸಿಖ್‌ ನಾಯಕರನ್ನು ಭೇಟಿ ಮಾಡಿ ಅವರಿಗೆ ಎಲ್ಲಾ ರೀತಿಯ ರಕ್ಷಣೆಯ ಭರವಸೆ ನೀಡಿದ್ದಾರೆ. ಹಿಂದಿನಂತೆಯೂ ಜೀವನ ನಡೆಸಿಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ.

1. ಹಿಂದು, ಸಿಖ್‌ ಮುಖಂಡರನ್ನು ಭೇಟಿಯಾಗಿ ರಕ್ಷಣೆಯ ಭರವಸೆ ನೀಡಿದ ಉಗ್ರರು

2. ದೇಶದ ಎಲ್ಲರಿಗೂ ಬೇಷರತ್‌ ಕ್ಷಮಾದಾನ ಪ್ರಕಟ. ಪ್ರತೀಕಾರ ಇಲ್ಲ ಎಂದು ಭರವಸೆ

3. ಇಡೀ ದೇಶವನ್ನು ವಶಕ್ಕೆ ತೆಗೆದುಕೊಂಡಿದ್ದರೂ ಜನರನ್ನು ಹಿಂಸಿಸದೆ ಸೌಮ್ಯ ನಡವಳಿಕೆ

4. ಕಟ್ಟರ್‌ ಇಸ್ಲಾಮ್‌ವಾದಿಗಳಾಗಿದ್ದರೂ ಮಹಿಳಾ ಆ್ಯಂಕರ್‌ಗಳಿಗೆ ಸಂದರ್ಶನ

click me!