ಆಫ್ಘನ್ನರಿಗೆ ಭಾರತ ಆಸರೆ: ಧರ್ಮಾತೀತವಾಗಿ ತುರ್ತು ವೀಸಾ, ಕೇಂದ್ರದ ಮಾನವೀಯ ನಡೆ!

By Kannadaprabha News  |  First Published Aug 18, 2021, 7:33 AM IST

* ತಾಲಿಬಾನಿಗಳಿಗೆ ಹೆದರಿ ದೇಶ ದೊರೆಯುತ್ತಿರುವ ಆಫ್ಘನ್ನರಿಗೆ ಧರ್ಮಾತೀತವಾಗಿ ತುರ್ತು ವೀಸಾ

* 6 ತಿಂಗಳವರೆಗೆ ಭಾರತದಲ್ಲಿ ವಾಸಿಸಲು ಅವಕಾಶ

* ಕೇಂದ್ರ ಸರ್ಕಾರದ ಮಾನವೀಯ ನಿರ್ಧಾರ


ನವದೆಹಲಿ(ಆ.18): ಅಷ್ಘಾನಿಸ್ತಾನವನ್ನು ತಾಲಿಬಾನ್‌ ಭಯೋತ್ಪಾದಕರು ವಶಪಡಿಸಿಕೊಂಡ ಬೆನ್ನಲ್ಲೇ ಆತಂಕದಿಂದ ಆ ದೇಶವನ್ನು ತೊರೆಯುತ್ತಿರುವ ಜನತೆಗೆ ಆಶ್ರಯ ನೀಡಲು ಮುಂದಾಗುವ ಮೂಲಕ ಭಾರತ ಮಾನವೀಯತೆ ಮೆರೆದಿದೆ. ಆಫ್ಘನ್‌ ನಿರಾಶ್ರಿತರಿಗಾಗಿ 6 ತಿಂಗಳ ಅವಧಿಯ ವಿಶೇಷ ‘ಇ-ಎಮರ್ಜೆನ್ಸಿ ಎಕ್ಸ್‌-ಮಿಸ್ಕ್‌ ವೀಸಾ’ ಪ್ರಕಟಿಸಿದೆ. ಇದು ಧರ್ಮಾತೀತವಾಗಿದ್ದು, ಅಷ್ಘಾನಿಸ್ತಾನದ ಯಾವುದೇ ಪ್ರಜೆ ಬೇಕಾದರೂ ಆಶ್ರಯ ಕೋರಬಹುದಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ‘ಅಷ್ಘಾನಿಸ್ತಾನದಲ್ಲಿನ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಸ ಮಾದರಿಯ ‘ಇ-ಎಮರ್ಜೆನ್ಸಿ ಎಕ್ಸ್‌-ಮಿಸ್ಕ್‌ ವೀಸಾ’ ಎಂಬ ಎಲೆಕ್ಟ್ರಾನಿಕ್‌ ವೀಸಾ ಪರಿಚಯಿಸಲಾಗಿದೆ. ಇದು ಭಾರತಕ್ಕೆ ಬರಲು ಬಯಸುವವರಿಗೆ ತುರ್ತು ವೀಸಾ ಪಡೆಯಲು ಅವಕಾಶ ಮಾಡಿಕೊಡಲಿದೆ. ಯಾವುದೇ ಧರ್ಮದವರಾದರೂ ಸೂಕ್ತ ದಾಖಲಾತಿಗಳೊಂದಿಗೆ ಆನ್‌ಲೈನ್‌ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಈ ಎಲ್ಲಾ ಅರ್ಜಿಗಳನ್ನು ದೆಹಲಿಯ ಕಚೇರಿಯಿಂದಲೇ ನಿರ್ವಹಿಸಲಾಗುವುದು. ಈ ವೀಸಾದ ಅವಧಿ 6 ತಿಂಗಳಿನದ್ದಾಗಿರುತ್ತದೆ’ ಎಂದು ತಿಳಿಸಿದೆ.

Tap to resize

Latest Videos

undefined

ತಾಲಿಬಾನ್‌ ಆಳ್ವಿಕೆಯಿಂದ ಭಯಭೀತರಾಗಿರುವ ಅಷ್ಘಾನಿಸ್ತಾನಿಯರು ತಾತ್ಕಾಲಿಕ ಅಂದರೆ ಗರಿಷ್ಠ ಆರು ತಿಂಗಳ ಅವಧಿವರೆಗೆ ಭಾರತದಲ್ಲಿ ನೆಲೆಯೂರಲು ಈ ವೀಸಾ ಅವಕಾಶ ನೀಡುತ್ತದೆ. ಆದರೆ ಆರು ತಿಂಗಳ ವಾಯಿದೆ ಮುಗಿದ ಬಳಿಕ ಮುಂದೇನು ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟಮಾಹಿತಿ ಲಭ್ಯವಿಲ್ಲ. ಭಾರತದಲ್ಲಿ ನಿರಾಶ್ರಿತರಿಗೆ ಸಂಬಂಧಿಸಿದಂತೆ ಯಾವುದೇ ನೀತಿ ಇಲ್ಲ. ಆದರೆ ವಿದೇಶಗಳಲ್ಲಿ ಹಿಂಸೆಗೆ ತುತ್ತಾಗುವವರಿಗೆ ಪ್ರಕರಣಗಳನ್ನು ಆಧರಿಸಿ ಆಶ್ರಯ ನೀಡುತ್ತಾ ಬಂದಿದೆ.

ಅಷ್ಘಾನಿಸ್ತಾನಿಯರಿಗೆ ಈವರೆಗೂ ಭಾರತ ಇ- ವೀಸಾ ಸೌಲಭ್ಯ ವಿಸ್ತರಿಸಿರಲಿಲ್ಲ. ಆದರೆ ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿ ಸದ್ಯ ಬಂದ್‌ ಆಗಿರುವುದರಿಂದ ಆನ್‌ಲೈನ್‌ ಮೂಲಕ ವೀಸಾ ಸಲ್ಲಿಸಲು ಆಫ್ಘನ್‌ ಜನರಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ರೀತಿಯ ಅರ್ಜಿಗಳನ್ನು ಸಾರಾಸಗಟಾಗಿ ಪರಿಗಣಿಸುವುದಿಲ್ಲ. ಭದ್ರತಾ ಸಂಸ್ಥೆಗಳು ಅನುಮೋದನೆ ನೀಡಿದರಷ್ಟೇ ವೀಸಾ ಮಂಜೂರು ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಎಕ್ಸ್‌-ಮಿಸ್ಕ್‌?:

ಯಾವುದೇ ದೇಶಕ್ಕೆ ಭೇಟಿ ನೀಡುವವರು ನಿರ್ದಿಷ್ಟಉದ್ದೇಶದ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ ಯಾವುದೇ ಉದ್ದೇಶವಿಲ್ಲದೆ ದೇಶಕ್ಕೆ ಬರುವವರಿಗೆ, ತಾತ್ಕಾಲಿಕ ಅವಧಿಗೆ ನೀಡಲಾಗುವ ವೀಸಾವನ್ನು ‘ಎಕ್ಸ್‌-ಮಿಸ್ಕ್‌’ ಎಂದು ಪರಿಗಣಿಸಲಾಗುತ್ತದೆ.

ತಾಲಿಬಾನ್‌ ಸರ್ಕಾರ ರಚನೆ ಖಚಿತವಾಗುತ್ತಲೇ, ಸಾವಿರಾರು ಆಫ್ಘನ್‌ ಪ್ರಜೆಗಳು ದೇಶ ತೊರೆಯಲು ಮುಂದಾಗಿದ್ದಾರೆ. ಅವರೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಕಳೆದ 3 ದಿನಗಳಿಂದ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನಕ್ಕೆ ದೌಡಾಯಿಸಿದ ಕಾರಣ ಅಲ್ಲಿ ನೂಕುನುಗ್ಗಲು ಉಂಟಾಗಿದೆ. ಈ ಪೈಕಿ ಹಲವಾರು ಆಫ್ಘನ್ನರು ವಿದೇಶಗಳಿಗೆ ತೆರಳಲು ಸಜ್ಜಾದ ವಿಮಾನಗಳ ಕಿಟಕಿ, ಬಾಗಿಲು ಹಿಡಿದು ಪ್ರಯಾಣಕ್ಕೆ ಹೋಗಿ ಸಾವನ್ನಪ್ಪಿದ ಘಟನೆಯೂ ಸೋಮವಾರ ನಡೆದಿದೆ. ಅದರ ಬೆನ್ನಲ್ಲೇ ಭಾರತ ಸರ್ಕಾರ ಈ ಮಾನವೀಯ ನಿಲುವು ಪ್ರಕಟಿಸಿದೆ.

- ಆಶ್ರಯ ಅಗತ್ಯವಿರುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

- ಭದ್ರತಾ ಪಡೆಗಳ ಪರಿಶೀಲನೆ ಬಳಿಕ ವೀಸಾ ಮಂಜೂರು

- 180 ದಿನಗಳ ಕಾಲ ಭಾರತದಲ್ಲಿ ಆಫ್ಘನ್ನರು ವಾಸಿಸಬಹುದು

- ಆನಂತರ ಏನು ಎಂಬುದರ ಬಗ್ಗೆ ಕೇಂದ್ರದಿಂದ ಮಾಹಿತಿ ಇಲ್ಲ

- ಭಾರತದಲ್ಲಿ ವಿದೇಶಗಳ ರೀತಿ ನಿರಾಶ್ರಿತರಿಗೆ ಸಂಬಂಧಿಸಿದ ನೀತಿ ಇಲ್ಲ

- ಆದರೆ ಪ್ರಕರಣ ಆಧರಿಸಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಾ ಬಂದಿದೆ

click me!