ಮತ್ತೆ ಭಯೋತ್ಪಾದಕರ ತೆಕ್ಕೆಗೆ ಜಾರಿದ ಆಷ್ಘಾನಿಸ್ತಾನ: ಕಂದಹಾರ್‌ ತಾಲಿಬಾನ್‌ ವಶ!

By Suvarna News  |  First Published Jul 12, 2021, 7:13 AM IST

* ಆಫ್ಘನ್‌ನ 2ನೇ ಅತಿದೊಡ್ಡ ನಗರಕ್ಕೆ ಉಗ್ರರ ಪ್ರವೇಶ

* ಮತ್ತೆ ಭಯೋತ್ಪಾದಕರ ತೆಕ್ಕೆಗೆ ಜಾರಿದ ಆಷ್ಘಾನಿಸ್ತಾನ, ಕಂದಹಾರ್‌ ತಾಲಿಬಾನ್‌ ವಶ

* ಇಡೀ ದೇಶದ 85% ಭಾಗ ಆಕ್ರಮಣ

* ಅಮೆರಿಕ ಪಡೆಗಳ ಹಿಂತೆಗೆತ ಬೆನ್ನಲ್ಲೇ ಅಟ್ಟಹಾಸ

* ಉಗ್ರರ ಮಣಿಸಲು ಸರ್ಕಾರದ ಹರಸಾಹಸ


ಕಾಬೂಲ್‌(ಜು.12): ದಿನೇ ದಿನೇ ಆಷ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿರುವ ತಾಲಿಬಾನ್‌ ಉಗ್ರರು, ಇದೀಗ ದೇಶದ 2ನೇ ಅತಿದೊಡ್ಡ ನಗರವಾಗಿರುವ 6 ಲಕ್ಷ ಜನಸಂಖ್ಯೆಯುಳ್ಳ ಕಂದಹಾರ್‌ ನಗರವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಇರಾನ್‌ ಜೊತೆಗಿನ ವ್ಯಾಪಾರ ನಡೆಸುವ ಗಡಿ ಚೆಕ್‌ಪೋಸ್ಟ್‌ ಅನ್ನೂ ವಶಕ್ಕೆ ಪಡೆಯುವ ಮೂಲಕ ಸರ್ಕಾರಕ್ಕೆ ದೊಡ್ಡ ಸವಾಲು ಹಾಕಿದ್ದಾರೆ.

ವಿಶೇಷವೆಂದರೆ, 1990ರಲ್ಲಿ ಆಂತರಿಕ ಸಂಘರ್ಷ ತೀವ್ರವಾದ ಹೊತ್ತಿನಲ್ಲಿ ಕಂದಹಾರ್‌ನಲ್ಲೇ ತಾಲಿಬಾನ್‌ ಸಂಘಟನೆ ಜನ್ಮತಾಳಿತ್ತು. ಈಗ ಮೇ 1ರಿಂದ ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ಹಿಂದೆ ಸರಿಯುವ ಪ್ರಕ್ರಿಯೆ ಆರಂಭಿಸಿದ ಬಳಿಕ, ತಾಲಿಬಾನ್‌ ಉಗ್ರರು ಒಂದೊಂದೇ ಪ್ರಾಂತ್ಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾ ಬರುತ್ತಿದ್ದಾರೆ. ಈಗಾಗಲೇ ದೇಶದ ಶೇ.85ರಷ್ಟುಭಾಗವನ್ನು ವಶಪಡಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೇ ದೇಶದ ಎರಡನೇ ಅತಿದೊಡ್ಡ ನಗರ ಕಂದಹಾರ್‌ ಅನ್ನು ಕಳೆದ ಶುಕ್ರವಾರ ಉಗ್ರರು ಪ್ರವೇಶಿಸಿದ್ದಾರೆ ಎಂದು ಸ್ವತಃ ಕಂದಹಾರ್‌ನ ಗವರ್ನರ್‌ರ ವಕ್ತಾರರಾದ ಬಹಿರ್‌ ಅಹಮದಿ ಹೇಳಿದ್ದಾರೆ.

Tap to resize

Latest Videos

undefined

ಕಳೆದ ಒಂದೂವರೆ ತಿಂಗಳಿನಿಂದ ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡು ಬರುತ್ತಿದ್ದ ಶಸ್ತ್ರಸಜ್ಜಿತ ಉಗ್ರರು, ಇದೀಗ ಕಂದಹಾರ್‌ನ 7 ಪೊಲೀಸ್‌ ಜಿಲ್ಲಾ ಪ್ರದೇಶದ ಮೂಲಕ ನಗರವನ್ನು ಮೊದಲ ಬಾರಿಗೆ ಪ್ರವೇಶಿಸಿದ್ದಾರೆ. ಉಗ್ರರನ್ನು ಹಿಮ್ಮೆಟ್ಟಿಸಲು ಆಫ್ಘನ್‌ ಸೇನೆ ಕೂಡ ಯತ್ನಿಸುತ್ತಿದೆಯಾದರೂ, ನಗರ ಜನನಿಬಿಡ ಪ್ರದೇಶವಾದ ಕಾರಣ, ಜನರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ ಎರಡೂ ಬಣಗಳ ನಡುವೆ ಸಂಘರ್ಷ ಮುಂದುವರೆದಿದೆ.

ಚೆಕ್‌ಪೋಸ್ಟ್‌ ವಶ:

ಈ ನಡುವೆ ಇರಾನ್‌ ಜೊತೆಗಿನ ವ್ಯಾಪಾರ ನಡೆಸುವ ಪ್ರಮುಖ ರಸ್ತೆ ಮಾರ್ಗವಾದ ಇಸ್ಲಾಂ ಖಲಾ ಕೂಡಾ ಉಗ್ರರ ವಶಕ್ಕೆ ಹೋಗಿದೆ. ಹೀಗಾಗಿ ಅಲ್ಲಿಗೆ ಹೆಚ್ಚಿನ ಯೋಧರನ್ನು ನಿಯೋಜಿಸುವ ಮೂಲಕ ಮತ್ತೆ ಅದನ್ನು ಕೈವಶ ಮಾಡಿಕೊಳ್ಳಲು ಸರ್ಕಾರ ಯತ್ನ ನಡೆಸುತ್ತಿದೆ.

ಅಮೆರಿಕ ತೆರವು:

2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಉಗ್ರರ ದಾಳಿಯಿಂದ ಆಕ್ರೋಶಗೊಂಡ ಅಮೆರಿಕ, ಉಗ್ರರನ್ನು ಮಟ್ಟಹಾಕುವ ಸಲುವಾಗಿ ಆಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. ಸುಮಾರು 20 ವರ್ಷಗಳ ಅಲ್ಲಿಂದ ಪೂರ್ಣ ಪ್ರಮಾಣದಲ್ಲಿ ಹಿಂದೆ ಸರಿಯುವ ನಿರ್ಧಾರವನ್ನು ಅಮೆರಿಕ ಕೈಗೊಂಡಿದ್ದು, ಮೇ 1ರಿಂದ ಆ ಪ್ರಕ್ರಿಯೆ ಆರಂಭಿಸಿದೆ.

ಏನಾಗ್ತಿದೆ?

- 9/11 ದಾಳಿ ಬಳಿಕ ತಾಲಿಬಾನ್‌ ಉಗ್ರರ ಮೇಲೆ ಅಮೆರಿಕ ಮುಗಿಬಿದ್ದಿತ್ತು

- 20 ವರ್ಷದ ಹೋರಾಟ ಬಳಿಕ ಅಮೆರಿಕ ಯೋಧರು ವಾಪಸಾಗುತ್ತಿದ್ದಾರೆ

- ಮೇ 1ರಿಂದ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದೆ

- ಇದರ ಬೆನ್ನಲ್ಲೇ ತಾಲಿಬಾನಿಗಳು ಪ್ರಭಾವಶಾಲಿಗಳಾಗಿ ಪುಟಿದೆದ್ದಿದ್ದಾರೆ

- ದೇಶದ ಬಹುಭಾಗವನ್ನು ಭಯೋತ್ಪಾದಕರು ವಶಕ್ಕೆ ತೆಗೆದುಕೊಂಡಿದ್ದಾರೆ

- ಇದೀಗ 6 ಲಕ್ಷದಷ್ಟುಜನಸಂಖ್ಯೆ ಇರುವ ಕಂದಹಾರ್‌ಗೂ ಪ್ರವೇಶ ಪಡೆದಿದ್ದಾರೆ

- ಆಷ್ಘಾನಿಸ್ತಾನ ಪೂರ್ಣ ಪ್ರಮಾಣದಲ್ಲಿ ತಾಲಿಬಾನ್‌ ಕೈವಶವಾಗುವ ಅಪಾಯವಿದೆ

click me!