ಸಿರಿಯನ್ ತಾಯಿ, ಒಮನ್ ತಂದೆ, ಅಲ್‌ಖೈದಾ ನಂಟು? ಫ್ಲೈದುಬೈ ದಾಳಿಕೋರನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು!

Published : Oct 03, 2026, 09:29 AM IST
Flydubai flight pilot attack

ಸಾರಾಂಶ

ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ದಾಳಿ ಮಾಡಿದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಬಗ್ಗೆ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ. ಹಿಂದೆ ಮೂಲಭೂತವಾದಿ ವೆಬ್‌ಸೈಟ್‌ಗೆ ಭೇಟಿ ನೀಡಿದ್ದ ಕಾರಣ ಒಮನ್ ಏರ್‌ನಿಂದ ವಜಾಗೊಂಡಿದ್ದ. ಅಲ್ಲಿಂದ ಫ್ಲೈದುಬೈಗೆ ಸೇರಿದ್ದೇಗೆ?

ವಾಷಿಂಗ್ಟನ್ ಡಿಸಿ(ಅ. 3) ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ(Flydubai) ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಮೇಲೆ ದಾಳಿ ಮಾಡಿದ ಆರೋಪ ಎದುರಿಸುತ್ತಿರುವ ಒಮನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಬಗ್ಗೆ ಶಾಕಿಂಗ್ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ದಾಳಿ ನಡೆದು ಮೂರು ದಿನಗಳೇ ಕಳೆದರೂ ಯಾಕೆ ದಾಳಿ ಕೋರನ ಹೆಸರು ಬಹಿರಂಗಪಡಿಸುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಪ್ರಶ್ನಿಸುತ್ತಲೇ ಇದ್ದರು. ಆದರೆ ಇದೀಗ ದಾಳಿಕೋರನ ಹೆಸರಷ್ಟೇ ಅಲ್ಲ, ಈ ಹಿಂದೆ ದಾಳಿಕೋರ ಎಲ್ಲಿ ತರಬೇತಿ ಪಡೆದಿದ್ದ, ಅವನ ತಾಯಿ ಉಗ್ರರ ಕುರಿತಾಗಿ ಸಹಾನುಭೂತಿ ಹೊಂದಿದ್ದ ಬಗ್ಗೆಯೂ ಇದೀಗ ಬಹಿರಂಗಗೊಂಡಿದೆ.

ಮೂಲಭೂತವಾದಿ ವೆಬ್‌ಸೈಟ್‌ಗೆ ಇಣುಕಿದ್ದ ದಾಳಿಕೋರ

ದಾಳಿಕೋರ ಹಮಾಮ್ ಅಲ್-ಹಮ್ಮಾಮಿ ಈ ಹಿಂದೆ ಒಮನ್ ಏರ್‌ನಲ್ಲಿ ಪೈಲಟ್ ತರಬೇತಿ ಪಡೆದಿದ್ದ. ಆದರೆ ತರಬೇತಿ ಅವಧಿಯಲ್ಲಿ ಆತ ಕೆಲವು ಮೂಲಭೂತವಾದಿಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿರುವ ಬಗ್ಗೆ ಒಮನ್ ಸರ್ಕಾರದ ಭದ್ರತಾ ವ್ಯವಸ್ಥೆ ಪತ್ತೆಹಚ್ಚಿತ್ತು. ಇದಾದ ಬಳಿಕ ಅವನನ್ನು ವಿಮಾನದ ಪೈಲಟ್ ಹುದ್ದೆಯಿಂದ ತೆಗೆದುಹಾಕಿತ್ತು ಎಂದು CBS News ವರದಿ ಮಾಡಿದೆ.

CBS News ಜತೆ ಮಾತನಾಡಿದ ಮೂಲವೊಂದರ ಪ್ರಕಾರ, ವಿಮಾನ ಹಾರಿಸುವ ಹುದ್ದೆಯಿಂದ ಕಚೇರಿ ಕೆಲಸಕ್ಕೆ ಟ್ರಾನ್ಸಫರ್ ಆದ ನಂತರ ಅಲ್-ಹಮ್ಮಾಮಿ ಒಮನ್ ಏರ್‌ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ. 2024ರ ಸುಮಾರಿಗೆ ಆ ಸಂಸ್ಥೆ ತೊರೆದಿದ್ದ ಎಂದು ಮೂಲ ತಿಳಿಸಿದೆ.

ಅಲ್-ಅರೇಬಿಯಾ ಇಂಗ್ಲಿಷ್ ಸುದ್ದಿ ಕೂಡ ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ ವರದಿ ಮಾಡಿದ್ದು ಅಲ್-ಹಮ್ಮಾಮಿಯನ್ನು ಮೂಲಭೂತವಾದಿಗಳಿಂದ ಪ್ರಭಾವಿತನಾಗಿದ್ದರಿಂದ ಹೀಗಾಗಿ ಒಮನ್‌ನಲ್ಲಿ ಈ ಹಿಂದೆ ವಿಮಾನ ಹಾರಿಸುವ ಹುದ್ದೆಯಿಂದ ಒಮನ್ ಸರ್ಕಾರ ತೆಗೆದುಹಾಕಿತ್ತು ಎಂದು ತಿಳಿಸಿದೆ. ಈ ಹಿಂದೆ ಸಿರಿಯಾದಲ್ಲಿ ನೆಲೆಸಿದ್ದಾಗಲೇ ಮೂಲಭೂತವಾದಗಳಿಂದ ಪ್ರಭಾವಿತನಾಗಿದ್ದ ಬಗ್ಗೆಯ ಬಯಲಾಗಿದೆ.

ಇಸ್ರೇಲಿ ಏರ್‌ಲೈನ್ಸ್ ವಿಡಿಯೋ ಹಂಚಿಕೊಂಡಿದ್ದ ದಾಳಿಕೋರ!

ಈ ಹಿಂದೆ ದಾಳಿಕೋರ ಅಲ್-ಹಮ್ಮಾಮಿ ದುಬೈನಲ್ಲಿ ಎಲ್ ಅಲ್ ಇಸ್ರೇಲಿ ಏರ್‌ಲೈನ್ಸ್(El Al Israel Airlines) ವಿಮಾನದ ವಿಡಿಯೋವೊಂದನ್ನು ಹಂಚಿಕೊಂಡಿದ್ದ. ಆ ವಿಡಿಯೋ ಕೊನೆಯಲ್ಲಿ 2022ರಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಯಾದ ಅಲ್‌ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿ(Al Qaeda leader Ayman al-Zawahiri) ಅವರ ಫೋಟೋವನ್ನು ಹಾಕಲಾಗಿತ್ತು.

ಅಲ್-ಹಮ್ಮಾಮಿ ದುಬೈಗೆ ತೆರಳಿ ಪೈಲಟ್ ಆಗಿದ್ದು ಹೇಗೆ?

ದುಬೈಗೆ ಸ್ಥಳಾಂತರಗೊಂಡ ಬಳಿಕ ಫ್ಲೈದುಬೈಗೆ ಪೈಲಟ್ ಆಗಿ ಸೇರುವಾಗ ವಿಮಾನಯಾನ ಸಂಸ್ಥೆ ಅಲ್-ಹಮ್ಮಾಮಿ ಬಗ್ಗೆ ಪರಿಶೀಲನೆ ನಡೆಸಿರಲಿಲ್ಲ. ಈ ಹಿಂದೆ ಎಲ್ಲಿ ಕೆಲಸ ಮಾಡಿದ್ದ, ಯಾಕೆ ಹುದ್ದೆಯಿಂದ ತೆಗೆದುಹಾಕಿದ್ದು, ಈ ಒಮನ್ ಸರ್ಕಾರದ ಮೂಲಕ ಯಾವುದೇ ಅಧಿಕೃತ ಹಿನ್ನೆಲೆ ಪರಿಶೀಲನೆ ನಡೆಸದೇ ಫ್ಲೈದುಬೈನಲ್ಲಿ ಕೆಲಸ ನೀಡಲಾಗಿತ್ತು ಎಂದು ಸಿಬಿಎಸ್ ನ್ಯೂಸ್‌ಗೆ ಮೂಲಗಳು ತಿಳಿಸಿವೆ.

ಅಲ್-ಹಮ್ಮಾಮಿ ಒಮನ್‌ ಪೌರತ್ವ ಹೊಂದಿದ್ರೂ ಅಲ್ಲಿ ಹುಟ್ಟಿದವನಲ್ಲ!

ಅಲ್-ಹಮ್ಮಾಮಿ ಒಮನ್ ಪೌರತ್ವ ಹೊಂದಿದ್ದರೂ ಒಮನ್‌ನಲ್ಲಿ ಹುಟ್ಟಿದವನಲ್ಲ. ತನ್ನ ಜೀವನದ ಬಹುಪಾಲು ಸಮಯವನ್ನು ವಿದೇಶದಲ್ಲೇ ಕಳೆದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತನ ತಾಯಿ ಸಿರಿಯನ್ ಮೂಲದವರಾಗಿದ್ದು, ತಂದೆ ಒಮನ್‌ನವರು ಆದರೆ ಆತನ ಪೌರತ್ವದ ಬಗ್ಗೆ ಒಮನ್ ಸರ್ಕಾರ ಈವರೆಗೆ ಸಾರ್ವಜನಿಕವಾಗಿ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಈ ನಡುವೆ, ಸಿಎನ್‌ಎನ್ ಕೂಡ ಮೂಲಗಳು ಹಾಗೂ ಇಸ್ರೇಲಿ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ. ಬುಧವಾರ ನಡೆದ ಘಟನೆಗೆ ಸಂಬಂಧಿಸಿದ ಫ್ಲೈದುಬೈ ಪೈಲಟ್ ಎಂದು ಗುರುತಿಸಲಾದ ಹಮಾಮ್ ಅಲ್-ಹಮ್ಮಾಮಿ ಹೆಸರಿನ ಲಿಂಕ್ಡ್‌ಇನ್ ಖಾತೆಯಲ್ಲಿ ಘಟನೆಯ ಸುಮಾರು 9 ಗಂಟೆಗಳ ಬಳಿಕ ಎರಡು ಪೋಸ್ಟ್‌ಗಳನ್ನು ಪ್ರಕಟಿಸಲಾಗಿತ್ತು. ಅವುಗಳಲ್ಲಿ ಎಲ್ ಅಲ್ ವಿಮಾನದ ಕಾಕ್‌ಪಿಟ್ ದೃಶ್ಯಗಳು ಮತ್ತು ಅಲ್‌ಖೈದಾ ಸಂಘಟನೆಯ ಪ್ರಮುಖರ ಚಿತ್ರಗಳು ಇದ್ದವು!

ಆ ವ್ಯಕ್ತಿ(ಅಲ್-ಹಮ್ಮಾಮಿ) ಈ ಹಿಂದೆ ಮೊರಾಕೊದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ರಾಯಲ್ ಏರ್ ಮಾರೋಕ್‌ನಲ್ಲಿ ಕೆಲಸ ಮಾಡಿದ್ದ ಫ್ಲೈದುಬೈ ಘಟನೆಗೂ ಮುನ್ನ ಎಂಟು ತಿಂಗಳ ಕಾಲ ಆತ ಫ್ಲೈದುಬೈನಲ್ಲಿ ಕೆಲಸ ಮಾಡಿದ್ದ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ

ಹಮಾಮ್ ಅಲ್-ಹಮ್ಮಾಮಿ ಹೆಸರಿನ ಲಿಂಕ್ಡ್‌ಇನ್ ಖಾತೆಯಲ್ಲಿ ದಾಳಿಕೋರ ಒಮನ್ ಏರ್‌ನಲ್ಲಿ ಏಳು ವರ್ಷಗಳ ಕಾಲ ಪೈಲಟ್ ಆಗಿ ಕೆಲಸ ಮಾಡಿದ್ದು ಫೆಬ್ರವರಿ 2025ರಲ್ಲಿ ಆ ಉದ್ಯೋಗ ಕೊನೆಗೊಂಡಿದೆ. ಬಳಿಕ ಜೂನ್ 2025ರಿಂದ ಜನವರಿ 2026ರವರೆಗೆ ರಾಯಲ್ ಏರ್ ಮಾರೋಕ್‌ನಲ್ಲಿ ಕೆಲಸ ಮಾಡಿದ್ದಾಗಿ ಮಾಹಿತಿಯಿದೆ. ಆದರೆ ಫ್ಲೈದುಬೈನಲ್ಲಿ ಕೆಲಸ ಮಾಡಿದ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಈ ಖಾತೆ ನಕಲಿಯಲ್ಲ, ಬುಧವಾರದ ಘಟನೆಯಲ್ಲಿ ಆರೋಪಿಯಾಗಿರುವ ಪೈಲಟ್‌ದ್ದೇ ಎಂದು ಮೂಲವೊಂದು ದೃಢಪಡಿಸಿದೆ.

ಲಿಂಕ್ಡ್‌ಇನ್ ಖಾತೆಯಲ್ಲಿದ್ದ ಎರಡೂ ಪೋಸ್ಟ್‌ಗಳು ಬುಧವಾರ ಒಂದರ ನಂತರ ಒಂದರಂತೆ ಪ್ರಕಟವಾಗಿದ್ದವು. ಫ್ಲೈದುಬೈ ದಾಳಿಯಾದ ಸುಮಾರು ಸುಮಾರು 9 ಗಂಟೆಗಳ ಬಳಿಕ ಅವು ಕಾಣಿಸಿಕೊಂಡಿದ್ದವು. ಆದರೆ ಆ ಪೋಸ್ಟ್‌ಗಳನ್ನು ನಿಜವಾಗಿಯೂ ಯಾರು ಪ್ರಕಟಿಸಿದ್ದಾರೆ ಅಥವಾ ಅವುಗಳನ್ನು ಮೊದಲೇ ನಿಗದಿಪಡಿಸಲಾಗಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಿಎನ್‌ಎನ್ ವರದಿ ಮಾಡಿದೆ.

ಮೊದಲ ಪೋಸ್ಟ್‌ನಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಾಕ್‌ಪಿಟ್ ಒಳಗಿನ ದೃಶ್ಯಗಳಿದ್ದವು. ಬುಧವಾರ ದಾಳಿಯಲ್ಲಿ ಸೌದಿ ಅರೇಬಿಯಾಗೆ ತಿರುಗಿಸಲಾದ ವಿಮಾನವೂ ಇದೇ ಮಾದರಿಯ ಫ್ಲೈದುಬೈ 737 ಮ್ಯಾಕ್ಸ್ 8 ವಿಮಾನವಾಗಿತ್ತು.

ಸಿಎನ್‌ಎನ್ ಪ್ರಕಾರ, ವಿಡಿಯೋದಲ್ಲಿನ ಒಂದು ದೃಶ್ಯವನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ್ದು ಎಂದು ಗುರುತಿಸಲಾಗಿದೆ. ಅದರಲ್ಲಿ ಕ್ಯಾಮೆರಾ ಹಿಡಿದ ವ್ಯಕ್ತಿ ಎಲ್ ಅಲ್ ವಿಮಾನದತ್ತ ಜೂಮ್ ಮಾಡುತ್ತಿರುವುದು ಕಾಣಿಸುತ್ತದೆ. ಕಾಕ್‌ಪಿಟ್‌ನಲ್ಲಿರುವ ಡಿಸ್‌ಪ್ಲೇಯಲ್ಲಿ OMA624 ವಿಮಾನ ಸಂಖ್ಯೆ ಮತ್ತು ಅಕ್ಟೋಬರ್ 11, 2023ರ ದಿನಾಂಕ ಕಾಣಿಸುತ್ತಿತ್ತು. ಈ ವಿವರಗಳು ದುಬೈ-ಮಸ್ಕಟ್ ನಡುವೆ ಸಂಚರಿಸುವ ನಿಯಮಿತ ವಿಮಾನ ಸೇವೆಗೆ ಹೊಂದಿಕೆಯಾಗುತ್ತವೆ.

ವಿಡಿಯೋ ಕೊನೆಯಲ್ಲಿ ಒಸಾಮಾ ಬಿನ್ ಲಾಡೆನ್ ನಂತರ ಅಲ್‌ಖೈದಾ ನಾಯಕನಾದ ಅಯ್ಮನ್ ಅಲ್-ಜವಾಹಿರಿ ಅವರ ಚಿತ್ರಗಳು ಕಾಣಿಸಿಕೊಂಡಿದ್ದವು. 2009ರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ 9 ಜನರ ಸಾವಿಗೆ ಕಾರಣನಾದ ಅಲ್‌ಖೈದಾ ಬೆಂಬಲಿಗ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಚಿತ್ರವೂ ಇತ್ತು. ಮೃತಪಟ್ಟವರಲ್ಲಿ 7 ಮಂದಿ ಅಮೆರಿಕದ ಸಿಐಎ ಅಧಿಕಾರಿಗಳು ಮತ್ತು ಗುತ್ತಿಗೆ ಸಿಬ್ಬಂದಿ ಸೇರಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಿದ ಚಿತ್ರವಿದೆ. ಅದರಲ್ಲಿ ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಾದ ಮೆಕ್ಕಾ, ಮದೀನಾ ಮತ್ತು ಜೆರುಸಲೇಂಗಳನ್ನು ಬೆಳಗುವ ಮಾರ್ಗವೊಂದರ ಮೂಲಕ ಸಂಪರ್ಕಿಸಲಾಗಿತ್ತು. ಹಿನ್ನೆಲೆಯಲ್ಲಿದ್ದ ಕವಿತೆಯಲ್ಲಿ ಧೈರ್ಯ, ಸಾವಿನ ಭಯವಿಲ್ಲದಿರುವುದು ಮತ್ತು ಗೌರವದ ರಕ್ಷಣೆಯ ಕುರಿತ ವಿಚಾರಗಳನ್ನು ಒತ್ತಿ ಹೇಳಲಾಗಿತ್ತು ಎಂದು ಸಿಎನ್‌ಎನ್ ವರದಿ ಮಾಡಿದೆ. ಇದರ ಜೊತೆಗೆ, ಅಲ್-ಹಮ್ಮಾಮಿಯ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಆತ ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್ ನ್ಯೂ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ್ದಾಗಿ ಮಾಹಿತಿ ಇತ್ತು.

ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಭದ್ರತಾ ಘಟನೆ ನಡೆದಿತ್ತು. ಕಾಕ್‌ಪಿಟ್‌ನೊಳಗೆ ಅಲ್-ಹಮ್ಮಾಮಿ ಕ್ಯಾಪ್ಟನ್ ಮಚ್ಛರ್ ಅವರ ಮೇಲೆ ನಡೆಸಿದ ದಾಳಿ ಉದ್ದೇಶಪೂರ್ವಕವಾಗಿತ್ತೇ ಮತ್ತು ವಿಮಾನವನ್ನು ಪತನಗೊಳಿಸುವ ಉದ್ದೇಶದ ಭಯೋತ್ಪಾದಕ ಕೃತ್ಯವಾಗಿತ್ತೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಾಕ್‌ಪಿಟ್‌ನಲ್ಲಿ ನಡೆದ ಹೊಡೆದಾಟದ ಪರಿಣಾಮ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸುಮಾರು 16,000 ಅಡಿ ಕೆಳಕ್ಕೆ ಕುಸಿದಿತ್ತು. ಇದೇ ವೇಳೆ ತುರ್ತು ಹೈಜಾಕ್ ಎಚ್ಚರಿಕೆ ನೀಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಛರ್ ಪ್ರತಿರೋಧ ಮುಂದುವರಿಸಿ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ಧಾವಿಸಿ ಅಲ್-ಹಮ್ಮಾಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಿಂದ ವಿಮಾನ ಸಿಬ್ಬಂದಿಗೆ ಮತ್ತೆ ವಿಮಾನದ ನಿಯಂತ್ರಣವನ್ನು ಸ್ಥಿರಗೊಳಿಸಲು ಸಾಧ್ಯವಾಯಿತು.

ವಿಮಾನವನ್ನು ನಿರ್ವಹಿಸಲು ಕರ್ತವ್ಯದಲ್ಲಿರದ ಇಬ್ಬರು ಪೈಲಟ್‌ಗಳು ಕೂಡ ಸಹಾಯಕ್ಕೆ ಮುಂದಾದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ 180 ಜನರು ಸುರಕ್ಷಿತವಾಗಿ ಕೆಳಗಿಳಿದರು.

ಗಮನಿಸಿ: ಈ ವರದಿಯನ್ನು ಏಜೆನ್ಸಿ ಫೀಡ್‌ನಿಂದ ಯಾವುದೇ ಬದಲಾವಣೆ ಮಾಡದೆ ಪ್ರಕಟಿಸಲಾಗಿದೆ. ಸಂಪಾದಕರು ಇದನ್ನು ಪರಿಶೀಲಿಸಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕ ಇರಾನ್ ನಡುವೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುತ್ತ Flydubai ಅಟ್ಯಾಕ್? ಸಂಚಲನ ಸೃಷ್ಟಿಸಿದ ಟ್ರಂಪ್ ಹೇಳಿಕೆ!
ಕಣ್ಣಿಗೆ ಪೊರೆ ಬಂದಿದೆ ಎಂದು ಆಸ್ಪತ್ರೆಗೆ ಬಂದ ಮಹಿಳೆ ಕಣ್ಣಲ್ಲಿತ್ತು 27 ಕಾಂಟ್ಯಾಕ್ಟ್​ ಲೆನ್ಸ್​: ಬೆಚ್ಚಿಬಿದ್ದ ವೈದ್ಯರು