
ಟೆಲ್ ಅವೀವ್: ‘ನಾನು ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್ ಎಂಬ ಡಾಕ್ಯುಮೆಂಟರಿಯಲ್ಲಿ ವಿಮಾನ ನಿಯಂತ್ರಿಸುವುದು ಹೇಗೆ ಎಂಬುದನ್ನು ನೋಡಿದ್ದೆ. ಅದರಲ್ಲಿ ತೋರಿಸಿದ್ದಂತೆ ಮಾಡಿ, ಇದ್ದಕ್ಕಿದ್ದಂತೆ ಎತ್ತರ ಕಳೆದುಕೊಂಡು ಭೂಮಿಯತ್ತ ನುಗ್ಗುತ್ತಿದ್ದ ವಿಮಾನವನ್ನು ನಿಯಂತ್ರಿಸಿದೆ’ ಎಂದು, ಸಂಭವನೀಯ ಅನಾಹುತದಿಂದ ಪಾರಾದ ಫ್ಲೈದುಬೈ ಎಫ್‌ಜೆಡ್ 1073 ವಿಮಾನದಲ್ಲಿದ್ದ ಟ್ರಕ್ ಡ್ರೈವರ್ ಯನಿವ್ ಹಯೌನ್ ಹೇಳಿದ್ದಾರೆ. ಅವರ ಸಾಹಸವನ್ನು ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಂಡಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಯೌನ್, ‘ಎದುರು ಆಸನದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕಿರುಚಿದ್ದನ್ನು ಕೇಳಿ ಕಾಕ್‌ಪಿಟ್‌ನತ್ತ ಓಡಿದೆ. ಬಾಗಿಲು ತೆರೆದು ಒಳನುಗ್ಗಿದಾಗ ಪೈಲಟ್ ಗಾಯಗೊಂಡು ಬಿದ್ದಿದ್ದರು. ಅತ್ತ ದಾಳಿ ಮಾಡಿದ ಸಹಪೈಲಟ್, ವಿಮಾನದ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ಮುಂದಾಗಿದ್ದ. ಹಾಗಾದರೆ ಅನಾಹುತವಾದೀತೆಂಬುದನ್ನು ಕಂಡುಕೊಂಡು, ಆತನ ಕತ್ತು ಹಿಡಿದು ಇತರೆ ಪ್ರಯಾಣಿಕರ ಸಹಾಯದಿಂದ ಹೊರದಬ್ಬಿದೆ. ಬಳಿಕ, ಈ ಹಿಂದೆ ಹೆಂಡತಿಗೆ ತಿಳಿಯದಂತೆ ನೋಡಿದ್ದ ಸಾಕ್ಷ್ಯಚಿತ್ರವೊಂದರಲ್ಲಿ ತೋರಿಸಿದ್ದ ವಿಧಾನ ಪಾಲಿಸಿ ವಿಮಾನದ ಕಂಟ್ರೋಲ್ ನನ್ನ ಕೈಗೆ ತೆಗೆದುಕೊಂಡೆ. ಈ ಮೂಲಕ ಕೆಳಮುಳವಾಗಿ ಚಲಿಸುತ್ತಿದ್ದ ವಿಮಾನ ನೇರವಾಗಿ ಹಾರತೊಡಗಿತು’ ಎಂದು ಹೇಳಿದರು.
ಮುಂದುವರಿದು, ‘ಅಷ್ಟರಲ್ಲಿ ಫ್ಲೈದುಬೈ ವಿಮಾನದ ಪೈಲಟ್ ಆಗಿದ್ದ ಇನ್ನೊಬ್ಬರು ಬಂದು ವಿಮಾನ ಚಾಲನೆ ಜವಾಬ್ದಾರಿಯನ್ನು ಕೈಗೆತ್ತಿಕೊಂಡರು. ನಾವಿತ್ತ ಗಾಯಗೊಂಡ ಪೈಲಟ್‌ನ ಆರೈಕೆಯಲ್ಲಿ ತೊಡಗಿದೆವು’ ಎಂದು ತಿಳಿಸಿದರು. ಸಾಹಸಿ ಹಯೌನ್ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ನೆತನ್ಯಾಹು ಎದುರುಗೊಂಡು ಅಪ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಮಿತ್ ಮಚ್ಛರ್ ಅವರ ಮೇಲೆ ಹಲ್ಲೆ ನಡೆಸಲು ಒಮಾನಿ ಪೈಲಟ್ ಹೊರಗಿನಿಂದ ಯಾವುದೇ ಚಾಕು ಅಥವಾ ಆಯುಧವನ್ನು ತಂದಿರಲಿಲ್ಲ. ಬದಲಾಗಿ ವಿಮಾನದ ಕಾಕ್‌ಪಿಟ್‌ನಲ್ಲೇ ತುರ್ತು ಸಂದರ್ಭಗಳಿಗಾಗಿ ಇರಿಸಲಾಗುವ ‘ಕ್ರ್ಯಾಶ್ ಆಕ್ಸ್’ (ಕೊಡಲಿ) ಬಳಸಿ ಈ ದಾಳಿ ನಡೆಸಿದ್ದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಅಂತಾರಾಷ್ಟ್ರೀಯ ವಿಮಾನಯಾನ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ವಾಣಿಜ್ಯ ವಿಮಾನದಲ್ಲೂ ಕಾಕ್‌ಪಿಟ್ ಒಳಗೆ ಇಂತಹದೊಂದು ಕೈ ಕೊಡಲಿಯನ್ನುಇಡುವುದು ಕಡ್ಡಾಯವಾಗಿದೆ. ವಿಮಾನ ತಯಾರಾಗುವಾಗಲೇ ಈ ಆಯುಧವನ್ನು ಅಲ್ಲಿ ಅಳವಡಿಸಲಾಗಿರುತ್ತದೆ. ಅಪಘಾತ, ಬೆಂಕಿ ಅನಾಹುತದಂತಹ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕಾಕ್‌ಪಿಟ್‌ನ ಬಾಗಿಲು ಅಥವಾ ಕಿಟಕಿಗಳನ್ನು ಮುರಿದು ಹೊರಬರಲು ಇದನ್ನು ಬಳಸಲಾಗುತ್ತದೆ.
ಹಿಂದೆ ಈ ಕೊಡಲಿಯನ್ನು ವಿಮಾನದ ಮುಖ್ಯ ಕ್ಯಾಬಿನ್‌ನಲ್ಲಿ (ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ) ಇಡಲಾಗುತ್ತಿತ್ತು. ಆದರೆ, 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕರ ದಾಳಿಯ ನಂತರ, ಸುರಕ್ಷತಾ ದೃಷ್ಟಿಯಿಂದ ಇವುಗಳನ್ನು ಕ್ಯಾಬಿನ್‌ನಿಂದ ತೆಗೆದು ಕಾಕ್‌ಪಿಟ್‌ಗೆ ಸ್ಥಳಾಂತರಿಸಲಾಯಿತು. ಪೈಲಟ್‌ಗಳಿಗೆ ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಕೈಗೆ ಸಿಗುವಂತೆ ಇದನ್ನು ಕಾಕ್‌ಪಿಟ್‌ನಲ್ಲಿ ಕಾಯ್ದಿರಿಸಲಾಗಿರುತ್ತದೆ.
‘ದಾಳಿ ಬಳಿಕ ಸ್ಮಿತ್ ಮಚ್ಛಾರ್ ಸ್ಥಿತಿ ತುಂಬಾ ಗಂಭೀರವಾಗಿತ್ತು. ತಲೆ, ಹೊಟ್ಟೆ, ಕೈಗಳಿಗೆ ಗಂಭೀರ ಗಾಯವಾಗಿದ್ದ ಕಾರಣ ರಕ್ತ ಕೋಡಿಯಾಗಿ ಹರಿಯುತ್ತಿತ್ತು. ಅವರು ನೆತ್ತರ ಮಡುವಿನಲ್ಲಿ ಬಿದ್ದಿದ್ದರು’ ಎಂದು, ಸಹಪೈಲಟ್‌ನಿಂದ ಇರಿತಕ್ಕೊಳಗಾಗಿದ್ದ ಫ್ಲೈದುಬೈ ವಿಮಾನದ ಪೈಲಟ್‌ರ ಆರೈಕೆ ಮಾಡಿದ ದಂತವೈದ್ಯ ಮುಸಾಯೆವ್ ಶೋಟಾ ಹೇಳಿದ್ದಾರೆ.
‘ಕಾಕ್‌ಪಿಟ್‌ನಲ್ಲಿ ಏನೋ ಸಮಸ್ಯೆಯಾಗಿದೆ ಎಂದು ತಿಳಿಯುತ್ತಿದ್ದಂತೆ ಅತ್ತ ಓಡಿದೆ. ಆ ಸಮಯದಲ್ಲಿ ವಿಮಾನದಲ್ಲಿ ಬೇರೆ ಯಾರೂ ವೈದ್ಯರಿರಲಿಲ್ಲ. ಶೋಚನೀಯ ಸ್ಥಿತಿಯಲ್ಲಿದ್ದ ಪೈಲಟ್ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು. ನಿರಂತರವಾಗಿ ರಕ್ತ ಒಸರುತ್ತಿದ್ದ ಕಾರಣ ಅವರ ಸ್ಥಿತಿ ಹದಗೆಡುತ್ತಿತ್ತು. ತಡಮಾಡದೆ ಚಿಕಿತ್ಸೆ ನೀಡಿ ರಕ್ತ ಸೋರುವುದನ್ನು ನಿಲ್ಲಿಸಿದೆ. ಅವರು ರಕ್ತದ ಮಡುವಿನಲ್ಲಿದ್ದ ಹೊರತಾಗಿಯೂ ನಮ್ಮೊಂದಿಗೆ ಮಾತನಾಡುತ್ತಿದ್ದರು’ ಎಂದು ಶೋಟಾ ತಿಳಿಸಿದರು.
ವಿಮಾನ ಸೌದಿಯ ತಾಬೂಕ್‌ನಲ್ಲಿಳಿಯುತ್ತಿದ್ದಂತೆ ಮಚ್ಛಾರ್ ಅವರಿಗೆ ಅಗತ್ಯ ವೈದ್ಯಕೀಯ ನೆರವು ನೀಡಿ, ಚಿಕಿತ್ಸೆಗಾಗಿ ದುಬೈಗೆ, ಬಳಿಕ ಅಬುಧಾಬಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸೌದಿಯಲ್ಲಿರುವ ಭಾರತೀಯ ದೂತಾವಾಸ ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ