
ಇಸ್ಲಾಮಾಬಾದ್(ಮಾ.28): ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ನೆಲೆಯೂರಿದ್ದ ಕಾರಣ ಬೆಂಗಳೂರಿನಲ್ಲಿ 4 ವರ್ಷಗಳಿಂದ ಬಂಧಿಯಾಗಿದ್ದ ಪಾಕಿಸ್ತಾನದ ಮಹಿಳೆ ಸುಮೈರಾ ರೆಹಮಾನ್ ತನ್ನ 4 ವರ್ಷದ ಪುತ್ರಿ ಜತೆ ಕಡೆಗೂ ತವರು ದೇಶ ಸೇರಿದ್ದಾಳೆ.
ಸುಮೈರಾ ಹಾಗೂ ಆಕೆಯ ಪುತ್ರಿಯನ್ನು ಪಂಜಾಬ್‌ನ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಿದ್ದಾರೆ. ಅಲ್ಲಿ ಆಕೆಯ ದಾಖಲೆ ಪರಿಶೀಲನೆ ನಡೆಯುತ್ತಿದೆ. ಆನಂತರ ಆಕೆ ಪಾಕಿಸ್ತಾನದಲ್ಲಿ ಇಷ್ಟಬಂದ ಕಡೆ ಹೋಗಬಹುದು ಎಂದು ಪಾಕಿಸ್ತಾನದ ಸೆನೆಟ್ (ಸಂಸತ್ತಿನ ಮೇಲ್ಮನೆ) ಸದಸ್ಯ ಇರ್ಫಾನ್ ಸಿದ್ದಿಖಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಷ್ಟ್ರೀಯತೆ ಪತ್ರಕ್ಕೆ ಸುಮೈರಾ ಕೋರಿಕೆ ಇಟ್ಟಿದ್ದಾಳೆ ಎಂದು ನವದೆಹಲಿಯ ಪಾಕಿಸ್ತಾನ ಹೈಕಮಿಷನ್ ಕಚೇರಿ ಪಾಕಿಸ್ತಾನದ ಆಂತರಿಕ ಸಚಿವಾಲಯಕ್ಕೆ ತಿಳಿಸಿತ್ತು. ಆದರೂ ಆಂತರಿಕ ಸಚಿವಾಲಯ ರಾಷ್ಟ್ರೀಯತೆ ಪತ್ರ ಕೊಟ್ಟಿರಲಿಲ್ಲ. ಈ ವಿಷಯವನ್ನು ಪಾಕಿಸ್ತಾನ ಸೆನೆಟ್‌ನಲ್ಲಿ ಸಿದ್ದಿಖಿ ಪ್ರಸ್ತಾಪಿಸಿದ್ದರು.
ಯಾರು ಈ ಸುಮೈರಾ?:
ಪಾಕಿಸ್ತಾನ ಮೂಲದ ಸುಮೈರಾ ಖತಾರ್‌ನಲ್ಲಿ ನೆಲೆಯೂರಿದ್ದಳು. 2017ರಲ್ಲಿ ಭಾರತ ಮೂಲದ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಶಹಾಬ್ ಅನ್ನು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವರಿಸಿದ್ದಳು. ವಿವಾಹ ನಂತರ ಸುಮೈರಾಳನ್ನು ಶಹಾಬ್ ಭಾರತಕ್ಕೆ ಕರೆದು ತಂದಿದ್ದ. ವೀಸಾ ಅವಧಿ ಮುಗಿದ ಬಳಿಕವೂ ತಂಗಿದ್ದ ಕಾರಣ ಸುಮೈರಾಳನ್ನು ಆಕೆಯ ಪತಿ ಸಮೇತ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಶಹಾಬ್‌ನನ್ನು ಬಿಡುಗಡೆ ಮಾಡಿದ ಅಧಿಕಾರಿಗಳು, ಸುಮೈರಾಳನ್ನು ಬಂಧನದಲ್ಲಿಟ್ಟಿದ್ದರು. ಆಗ ಆಕೆ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಳು. 2018ರಲ್ಲಿ ಪಾಕಿಸ್ತಾನ ಹೈಕಮೀಷನ್ ಸುಮೈರಾಗೆ ರಾಜತಾಂತ್ರಿಕ ಸಂಪರ್ಕ ನೀಡಿತ್ತು.
ಸುಮೈರಾಳ ರಾಷ್ಟ್ರೀಯತೆಯನ್ನು ಖಚಿತಪಡಿಸುವಂತೆ ಆಕೆಯನ್ನು ಭೇಟಿ ಮಾಡಿದ ಬಳಿಕ ಹೈಕಮಿಷನ್ ತನ್ನ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಈ ಪತ್ರವನ್ನು ನಿರ್ಲಕ್ಷಿಸಿತ್ತು. 4 ವರ್ಷಗಳ ಕಾಲ ಜೈಲಿನಲ್ಲಿದ್ದ ಸುಮೈರಾ, ದಾನಿಗಳಿಂದ ಸಂಗ್ರಹಿಸಿ ಭಾರತ ಸರ್ಕಾರಕ್ಕೆ 10 ಲಕ್ಷ ರು. ದಂಡವನ್ನೂ ಕಟ್ಟಿದ್ದಳು. ನಂತರ ಆಕೆಯನ್ನು ವಿದೇಶಿಗರ ಬಂಧನ ಕೇಂದ್ರಕ್ಕೆ ರವಾನಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ