ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!

By Kannadaprabha News  |  First Published Sep 3, 2020, 7:18 AM IST

ಅಗ್ಗದ ಸ್ಟಿರಾಯ್ಡ್‌ ಕೊರೋನಾ ಸೋಂಕಿತರ ಜೀವರಕ್ಷಕ!| ಗಂಭೀರ ಸ್ಥಿತಿ ರೋಗಿಗಳಿಗೆ ಬಳಸಿ| ಡಬ್ಲ್ಯುಎಚ್‌ಒದಿಂದ ಸೂಚನೆ


ವಾಷಿಂಗ್ಟನ್‌: ವಿಶ್ವದಲ್ಲೆಡೆ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್‌ಗೆ ಲಸಿಕೆಯನ್ನು ಕಂಡುಹಿಡಿಯುವ ಯತ್ನ ನಡೆಯುತ್ತಿರುವಾಗಲೇ, ಅಗ್ಗದ ದರದಲ್ಲಿ ಎಲ್ಲೆಡೆ ದೊರೆಯುವ ಸ್ಟಿರಾಯ್ಡ್‌ಗಳು ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ರೋಗಿಗಳ ಜೀವವನ್ನು ಉಳಿಸಬಲ್ಲವು ಎಂಬುದನ್ನು ಅಧ್ಯಯನವೊಂದು ಖಚಿತಪಡಿಸಿದೆ.

ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಕೊರೋನಾ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸ್ಟಿರಾಯ್ಡ್‌ ಬಳಸುವಂತೆ ಶಿಫಾರಸು ಮಾಡಿದೆ. ಲಘು ಪ್ರಮಾಣದ ಸೋಂಕು ಇರುವವರಿಗೆ ಬಳಸಕೂಡದು ಎಂದೂ ಹೇಳಿದೆ.

Latest Videos

undefined

ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿ ಏಳು ಅಧ್ಯಯನಗಳನ್ನು ಒಗ್ಗೂಡಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಜರ್ನಲ್‌ನಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟವಾಗಿದೆ. 1700 ರೋಗಿಗಳ ಮೇಲೆ 3 ಬಗೆಯ ಸ್ಟಿರಾಯ್ಡ್‌ಗಳನ್ನು ಅಧ್ಯಯನ ವೇಳೆ ಪ್ರಯೋಗಿಸಲಾಗಿದೆ. ಮೂರೂ ಸ್ಟಿರಾಯ್ಡ್‌ಗಳು ಜೀವಕ್ಕೆ ಎದುರಾಗಿದ್ದ ಅಪಾಯವನ್ನು ತಗ್ಗಿಸಿವೆ. ಕೊರೋನಾಪೀಡಿತರ ಚಿಕಿತ್ಸೆ ವಿಚಾರದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ.

ದೇಹದಲ್ಲಿ ಊತ, ನೋವು, ಉರಿ ಕಾಣಿಸಿಕೊಂಡ ಸಂದರ್ಭದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ತಗ್ಗಿಸಲು ಡೆಕ್ಸಾಮೆಥಸೋನ್‌, ಹೈಡ್ರೋಕಾರ್ಟಿಸೋನ್‌ ಹಾಗೂ ಮೀಥೈಲ್‌ಪ್ರೆಡ್ನಿಸೊಲೋನ್‌ ಎಂಬ ಸ್ಟಿರಾಯ್ಡ್‌ಗಳನ್ನು ವೈದ್ಯರು ಬಳಸುತ್ತಾರೆ. ಕೋವಿಡ್‌ ರೋಗಿಗಳು ವೈರಸ್‌ಗಿಂತಲೂ ಹೆಚ್ಚಾಗಿ ದೇಹ ಅತಿಯಾಗಿ ಪ್ರತಿಕ್ರಿಯಿಸುವುದರಿಂದಲೇ ಮೃತಪಡುತ್ತಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟಿರಾಯ್ಡ್‌ಗಳು ವಯೋವೃದ್ಧರಲ್ಲಿ ಅಡ್ಡಪರಿಣಾಮಗಳನ್ನೂ ಉಂಟು ಮಾಡುವ ಸಾಧ್ಯತೆ ಇರುತ್ತದೆ.

click me!