
ಕೊಲಂಬೋ(ಮೇ.12): ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ, ಈ ವಾರವೇ ಹೊಸ ಸಂಪುಟ ರಚನೆ ಮಾಡಿ, ಹೊಸ ಪ್ರಧಾನಿ ನೇಮಕ ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಭರವಸೆ ನೀಡಿದ್ದಾರೆ. ಬುಧವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಗೋಟಬಯ, ಸಂಪೂರ್ಣ ಬಹುಮತ ಹೊಂದಿರುವ ಸಂಪುಟವನ್ನು ಈ ವಾರವೇ ರಚಿಸಲಾಗುವುದು. ಬಳಿಕ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಜೊತೆಗೆ ದೇಶದ ಹೊಸ ಪ್ರಧಾನಿಗೆ ದೇಶವನ್ನು ಮುನ್ನಡೆಸಲು ಅಗತ್ಯವಾದ ಅಧಿಕಾರವನ್ನು ನೀಡಲಾಗುವುದು. ಅಧ್ಯಕ್ಷರ ಅಧಿಕಾರವನ್ನು ಮತ್ತಷ್ಟುಮೊಟಕುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಲಂಕಾದೆಲ್ಲೆಡೆ ಶಾಂತಿ ಕಾಪಾಡಲು ಸೇನೆ ನಿಯೋಜನೆ
ದೇಶದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ತಕ್ಷಣಕ್ಕೆ ತಹಬದಿಗೆ ಬರುವ ಸಾಧ್ಯತೆಗಳು ದೂರವಾಗಿರುವ ಹಿನ್ನೆಲೆಯಲ್ಲಿ, ಶ್ರೀಲಂಕಾ ಸರ್ಕಾರ ದೇಶಾದ್ಯಂತ ಪ್ರಮುಖ ನಗರಗಳು, ಆಯಕಟ್ಟಿನ ಪ್ರದೇಶಗಳ ಬಳಿ ಸೇನೆ ಮತ್ತು ಸೇನಾ ವಾಹನಗಳನ್ನು ನಿಯೋಜಿಸಿದೆ.
ಲಂಕಾ ಮಾಜಿ ಪ್ರಧಾನಿ ಮಹಿಂದಾ ಪರಾರಿ?: ಮನೆಗೆ ಬೆಂಕಿ, ಕುಟುಂಬ ನೌಕಾ ನೆಲೆಗೆ ಶಿಫ್ಟ್!
ಸರ್ಕಾರಿ ಅಥವಾ ಖಾಸಗಿ ಆಸ್ತಿಪಾಸ್ತಿ ಲೂಟಿ, ಧ್ವಂಸ ಮಾಡುವು ಕೃತ್ಯಗಳು ಕಂಡುಬಂದರೆ ಅವರ ಮೇಲೆ ಕಂಡಲ್ಲಿ ಗುಂಡಿನ ದಾಳಿ ನಡೆಸುವಂತೆ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ರಕ್ಷಣಾ ಸಚಿವಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವು ತಿಂಗಳಿನಿಂದ ಸರಣಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸೋಮವಾರ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಡಳಿತಾರೂಢ ಪಕ್ಷದ ಹಲವು ನಾಯಕರ ಮನೆ, ಕಚೇರಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ದೇಶಾದ್ಯಂತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿಯಲ್ಲಿರುವ ತುರ್ತುಪರಿಸ್ಥಿತಿ ಜೊತೆಗೆ ಕಫä್ರ್ಯ ಹೇರಲಾಗಿದೆ. ಇದೆಲ್ಲದರ ನಡುವೆಯೇ ದೇಶದ ಹಾಲಿ ಪರಿಸ್ಥಿತಿಗೆ ಕಾರಣಕರ್ತ ಎಂಬ ಟೀಕೆಗೆ ಗುರಿಯಾಗಿದ್ದ ಪ್ರಧಾನಿ ಮಹಿಂದ ರಾಜಪಕ್ಸೆ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ಬೆಂಬಲಿಗರಿಂದ ದಾಳಿ:
ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಸೋಮವಾರ ಕೊಲಂಬೋ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾರ್ವಜನಿಕರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರಧಾನಿ ಮಹಿಂದಾ ಅವರ ಬೆಂಬಲಿಗರ ಗುಂಪು ಕೊಲಂಬೋದಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸುದ್ದಿ ಕೆಲವೇ ಹೊತ್ತಿನಲ್ಲಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಎಲ್ಲೆಡೆ ಹಿಂಸಾಚಾರ ಭುಗಿಲೆದ್ದಿತು.
Sri Lanka Crisis ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯಲ್ಲಿ ಗುಂಡಿನ ದಾಳಿ, ಸಂಸದ ಸಾವು!
ಸರ್ಕಾರ ವಿರೋಧಿ ಪ್ರತಿಭಟನಾಕಾರರು, ಅಡಳಿತಾರೂಢ ಪಕ್ಷದ ಸಂಸದರು, ಸಚಿವರು, ನಾಯಕರ ಮೇಲೆ, ಅವರಿಗೆ ಸೇರಿದ ಕಟ್ಟಡ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ