ಶ್ರೀಲಂಕಾ ಜನರ ಕಿಚ್ಚಿಗೆ ಮಹಿಂದಾ ಮನೆ, ಐಷಾರಾಮಿ ಕಾರುಗಳು ಬೂದಿ!

Published : May 12, 2022, 08:56 AM IST
ಶ್ರೀಲಂಕಾ ಜನರ ಕಿಚ್ಚಿಗೆ ಮಹಿಂದಾ ಮನೆ, ಐಷಾರಾಮಿ ಕಾರುಗಳು ಬೂದಿ!

ಸಾರಾಂಶ

* ಜನರ ಆಕ್ರೋಶಕ್ಕೆ ತುತ್ತಾದ ಲ್ಯಾಂಬೋರ್ಗಿನಿ ಸೇರಿ ಅನೇಕ ಕಾರು * ಮಹಿಂದಾ ಮನೆ, ಐಷಾರಾಮಿ ಕಾರುಗಳು ಬೂದಿ

ಕೊಲಂಬೋ(ಮೇ.12): ಆಢಳಿತಾರೂಢ ಶ್ರೀಲಂಕಾ ಪೀಪಲ್ಸ್‌ ಪಾರ್ಟಿಯ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶ, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಮನೆ ಮತ್ತು ಹಲವು ಐಷಾರಾಮಿ ಕಾರುಗಳನ್ನು ಬೂದಿ ಮಾಡಿದೆ.

ಸೋಮವಾರ ಮಹಿಂದಾ ಬೆಂಬಲಿಗರು, ಶಾಂತಿಯುತ ಹೋರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ 90ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಬೆನ್ನಲ್ಲೇ ಜನರು ಬೀದಿಗಿಳಿದು, ಆಡಳಿತಾರೂಢ ಪಕ್ಷದ ಹಾಲಿ, ಮಾಜಿ ಸಚಿವರು, ಸಂಸದರು, ನಾಯಕರ ನೂರಾರು ಮನೆ, ವಾಹನಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಹಂಬನ್‌ಟೋಟಾ ನಗರದಲ್ಲಿರುವ ಮಹಿಂದಾ ಅವರ ಮನೆ, ಅಧ್ಯಕ್ಷ ಗೋಟಬಯ ಅವರ ಐಷಾರಾಮಿ ಬಂಗಲೆಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಈ ವೇಳೆ ಮನೆಯ ಆವರಣದೊಳಗೆ ನಿಲ್ಲಿಸಲಾಗಿದ್ದ ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಸುಟ್ಟು ಭಸ್ಮವಾಗಿದೆ. ಮತ್ತೊಂದೆಡೆ ಕುರುನೆಗೆಲಾ ನಗರದಲ್ಲಿ ಮಹಿಂದಾ ಅವರು ಪೂರ್ವಜರ ಮನೆಯೂ ಅಗ್ನಿಗೆ ಆಹುತಿಯಾಗಿದೆ.

ಆದರೆ, ಗಲಾಟೆ ನಡೆಯುವ ವೇಳೆ ಮಹಿಂದಾ ಅವರು ಕೊಲಂಬೋದಲ್ಲಿನ ಪ್ರಧಾನಿಗಳ ಅಧಿಕೃತ ನಿವಾಸ ಪೀಪಲ್ಸ್‌ ಟ್ರೀನಲ್ಲೇ ಇದ್ದರು. ಹೀಗಾಗಿ ಪ್ರತಿಭಟನಾಕಾರರು ಬಂಗಲೆಯ ಕಾಂಪೌಂಡ್‌ ಒಳಗೆ ಪೆಟ್ರೋಲ್‌ ಬಾಂಬ್‌ ಎಸೆದು ಆತಂಕ ಹುಟ್ಟುಹಾಕಿದ್ದಲ್ಲದೇ, ಮನೆಯೊಳಗೆ ನುಗ್ಗಿ ದಾಳಿಗೆ ಯತ್ನಿಸಿದ್ದರು. ಆದರೆ ಭದ್ರತಾ ಪಡೆಗಳು ಬಿಗಿಬಂದೋಬಸ್ತ್ ಮಾಡಿದ ಕಾರಣ ಅದು ಸಾಧ್ಯವಾಗಿರಲಿಲ್ಲ.

ಲಂಕೆಗೆ ಈ ವಾರ ಹೊಸ ಪ್ರಧಾನಿ, ಹೊಸ ಸಂಪುಟ

ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ, ಈ ವಾರವೇ ಹೊಸ ಸಂಪುಟ ರಚನೆ ಮಾಡಿ, ಹೊಸ ಪ್ರಧಾನಿ ನೇಮಕ ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಭರವಸೆ ನೀಡಿದ್ದಾರೆ. ಬುಧವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಗೋಟಬಯ, ಸಂಪೂರ್ಣ ಬಹುಮತ ಹೊಂದಿರುವ ಸಂಪುಟವನ್ನು ಈ ವಾರವೇ ರಚಿಸಲಾಗುವುದು. ಬಳಿಕ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಜೊತೆಗೆ ದೇಶದ ಹೊಸ ಪ್ರಧಾನಿಗೆ ದೇಶವನ್ನು ಮುನ್ನಡೆಸಲು ಅಗತ್ಯವಾದ ಅಧಿಕಾರವನ್ನು ನೀಡಲಾಗುವುದು. ಅಧ್ಯಕ್ಷರ ಅಧಿಕಾರವನ್ನು ಮತ್ತಷ್ಟು ಮೊಟಕುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸದ್ಯ ನೌಕಾನೆಲೆಯಿಂದ ಮಹಿಂದಾ ಹೊರಬರಲ್ಲ

 

ಸರ್ಕಾರಿ ವಿರೋಧಿ ಹೋರಾಟಗಾರರ ಆಕ್ರೋಶದಿಂದ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಟ್ರಿಂಕಾಮಲೈ ನೌಕಾನೆಲೆಗೆ ಸ್ಥಳಾಂತರಿಸಲಾಗಿದೆ. ಸದ್ಯಕ್ಕೆ ಅವರು ಅಲ್ಲಿಂದ ಹೊರಬರುವುದಿಲ್ಲ ಎಂದು ಶ್ರೀಲಂಕಾ ಸೇನೆ ಅಧಿಕೃತ ಹೇಳಿಕೆ ನೀಡಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿರುವ ರಕ್ಷಣಾ ಕಾರ್ಯದರ್ಶಿ ಕಮಲ್‌ ಗುಣರತ್ನೆ, ‘ಪ್ರಧಾನಿಗಳ ಅಧಿಕೃತ ನಿವಾಸ ಟೆಂಪಲ್‌ ಟ್ರೀಸ್‌ ಮೇಲೆ ಪ್ರತಿಭಟನಾಕಾರರ ದಾಳಿ ಮತ್ತು ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆಗಳ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರನ್ನು ಟ್ರಿಂಕಾಮಲೈನಲ್ಲಿರುವ ನೌಕಾನೆಲೆಗೆ ಸ್ಥಳಾಂತರಿಸಲಾಗಿದೆ. ದೇಶದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಅವರು ಅಲ್ಲಿಯೇ ಇರಲಿದ್ದಾರೆ. ಪರಿಸ್ಥಿತಿ ಸುಧಾರಣೆಗೊಂಡ ಬಳಿಕ ಅವರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರ’ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!