ಪ್ರತಿಭಟನೆ ನಡುವೆ ಮಾಲ್ಡೀವ್ಸ್‌ಗೆ ಪರಾರಿಯಾದ ಶ್ರೀಲಂಕಾ ಅಧ್ಯಕ್ಷ ಗೊಟಬಯ!

By Suvarna News  |  First Published Jul 13, 2022, 9:15 AM IST
  • ಶ್ರೀಲಂಕಾದಲ್ಲಿ ಪ್ರತಿಭಟನೆ ಕಾವು ತೀವ್ರ, ಅಧ್ಯಕ್ಷ  ಮಾಲ್ಡೀವ್ಸ್‌ಗೆ ಪರಾರಿ
  • ಗೊಟಬಯ ರಾಜಪಕ್ಸ ಇಂದು ರಾಜೀನಾಮೆ ಘೋಷಣೆ
  • ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬಳಿಕ ಪ್ರಯಾಣಕ್ಕೆ ಅನುಮತಿ

ಕೊಲೊಂಬೊ(ಜು.13): ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆರ್ಥಿಕ ಬಿಕ್ಕಟ್ಟಿನ ನಡುವೆ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ. ಲಂಕಾ ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಪ್ರಧಾನಿ, ಅಧ್ಯಕ್ಷರ ಮನೆಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಭಾರಿ ಪ್ರತಿಭಟನೆ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ.  ಕಳೆದ ಒಂದು ವಾರದಿಂದ ವಿದೇಶಕ್ಕೆ ಪಲಾಯನ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದ ಗೊಟಬಯಗೆ ಶ್ರೀಲಂಕಾ ಇಮಿಗ್ರೇಷನ್ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಆದರೆ ಗೊಟಬಯ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬಳಿಕ ಅಧಿಕಾರಿಗಳು ಗೊಟಬಯ ಪ್ರಯಾಣಕ್ಕೆ ಅನುಮತಿ ನೀಡಿದ್ದಾರೆ. ದುಬೈ ಪ್ರಯಾಣಕ್ಕೆ ಯತ್ನಿಸಿದ್ದ ಗೊಟಬಯ ಕೊನೆಗೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕುಟುಂಬ ಸಮೇತ ಇದೀಗ ಮಾಲ್ಡೀವ್ಸ್‌ನಲ್ಲಿದ್ದಾರೆ ಎಂದು ಶ್ರೀಲಂಕಾ ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿನ್ನೆ(ಜು.12) ರಾಜೀನಾಮೆ ಪತ್ರಕ್ಕೆ ರಹಸ್ಯ ಸ್ಥಳದಲ್ಲೇ ಸಹಿ ಹಾಕಿದ ಗೊಟಬಯ ರಾಜಪಕ್ಸ, ಸರ್ಕಾರದ ಹಿರಿಯ ಅಧಿಕಾರಿಗೆ ರವಾನಿಸಿದ್ದರು. ಹಿರಿಯ ಅಧಿಕಾರಿ ಈಗಾಗಲೇ ಸ್ಪೀಕರ್‌ಗೆ ರಾಜೀನಾಮೆ ಪತ್ರ ನೀಡಿದ್ದು, ಇಂದು ಗೊಟಬಯ ರಾಜೀನಾಮೆ ಘೋಷಣೆ ಮಾಡಲಿದ್ದಾರೆ.

ಗೊಟಬಯ ಹಾಗೂ ಅವರ ಪತ್ನಿ, ಜೊತೆಗೆ ಗೊಟಬಯ ಸಹೋದರ, ಮಾಜಿ ಹಣಕಾಸು ಸಚಿವ ಬಸಿಲ್ ಪಾಜಪಕ್ಸ ಸೇರಿದಂತೆ ಕುಟುಂಬ ವಿದೇಶಕ್ಕೆ ಪಲಾಯನ ಮಾಡಿದೆ. ಮಿಲಿಟರಿ ವಿಮಾನ ಮೂಲಕ ಮಾಲ್ಡೀವ್ಸ್‌ನ ಮಾಲೆಗೆ ತೆರಳಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 3 ಗಂಟೆಗೆ ಮಾಲೆ ತಲುಪಿದ್ದಾರೆ. ರಾಜಪಕ್ಸ್ ಕುಟುಂಬದ ಜೊತೆಗೆ ಬಾಡಿಗಾರ್ಡ್ ಕೂಡ ಮಾಲ್ಡೀವ್ಸ್ ಪ್ರಯಾಣ ಮಾಡಿದ್ದಾರೆ ಎಂದು ಇಮಿಗ್ರೇಷನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶ್ರೀಲಂಕಾ ಮಿಲಿಟರಿ ಏರ್‌ಕ್ರಾಫ್ಟ್ ಏಂಟನೋವಾ 32 ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.

Tap to resize

Latest Videos

ಸಾರ್ವಜನಿಕರ ಕೋಪಕ್ಕೆ ಶ್ರೀಲಂಕಾ ರಾಜಕಾರಣಿಗಳು ಗಢಗಢ, ಎಲೆಕ್ಷನ್‌ಗೂ ನಕಾರ!

ಕೊಲೊಂಬೊ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಮಿಲಿಟರಿ ಏರ್‌ಬೇಸ್ ಮೂಲಕ ಗೊಟಬಯ ರಾಜಪಕ್ಸ ಪರಾರಿಯಾಗಿದ್ದಾರೆ. ಇಂದು ರಾಜೀನಾಮೆ ಪತ್ರ ಘೋಷಣೆ ಮಾಡಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ ಗೊಟಬಯ ರಾಜಪಕ್ಸ ಬಂಧನ ಭೀತಿ ಎದುರಿಸುತ್ತಿದ್ದರು. ಇದನ್ನು ತಪ್ಪಿಸಲು ಗೊಟಬಯ ವಿದೇಶಕ್ಕೆ ಪರಾರಿಯಾಗಿದ್ದಾರೆ. ಲಂಕಾದಲ್ಲಿ ಕಳೆದ ವಾರ ಜನರು ದಂಗೆ ಎದ್ದ ಬೆನ್ನಲ್ಲೇ ರಹಸ್ಯ ಸ್ಥಳಕ್ಕೆ ಸ್ಥಳಾಂತರವಾಗಿದ್ದ ಗೊಟಬಯ ರಾಜಪಕ್ಸ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದರು. ವಿದೇಶಕ್ಕೆ ಪರಾರಿಯಾಗಿ ಅಲ್ಲಿಂದಲೇ ತಮ್ಮ ಅಧಿಕಾರ ಚಲಾಯಿಸಲು ಯತ್ನಿಸಿದ್ದರು. ಆದರೆ ಇದು ಸಾಧ್ಯವಾಗದ ಕಾರಣ ಜುಲೈ 13ಕ್ಕೆ ರಾಜೀನಾಮೆ ಘೋಷಿಸುವುದಾಗಿ ಹೇಳಿದ್ದರು. ಆದರೆ ರಾಜೀನಾಮೆ ಪತ್ರಕ್ಕೆ  ಹಾಕಿದ ಬಳಿಕವಷ್ಟೇ ಅಧಿಕಾರಿಗಳು ಗೊಟಬಯ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.

ಲಂಕಾ ಬಿಕ್ಕಟ್ಟು ನಿರ್ವಹಣೆಗೆ ಸೇನೆ ರವಾನೆ ಇಲ್ಲ: ಭಾರತ ಸ್ಪಷ್ಟನೆ

ದುಬೈ ಪ್ರಯಾಣಕ್ಕಿರುವ ವಿಐಪಿ ಕೌಂಟರ್ ಮುಚ್ಚಿದ ಶ್ರೀಲಂಕಾ ವಿಮಾನ ನಿಲ್ದಾಣ ಅಧಿಕಾರಿಗಳು, ದುಬೈ ಪ್ರಯಾಣ ಮಾಡುವ ಎಲ್ಲರೂ ಸಾರ್ವಜನಿಕ ಕೌಂಟರ್ ಮೂಲಕ ತೆರಳಬೇಕು ಎಂದು ಸೂಚಿಸಲಾಗಿತ್ತು. ಸಾರ್ವಜನಿಕ ಕೌಂಟರ್ ಮೂಲಕ ತೆರಳಿದರೆ ದಂಗೆ ಎದ್ದ ಸಾರ್ವಜನಿಕರು ಪ್ರಯಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಇಷ್ಟೇ ಅಲ್ಲ ನಾಗರೀಕರ ದಂಗೆ ನಡುವೆ ದಾಳಿಯಾಗುವ ಸಾಧ್ಯತೆಯನ್ನು ಅರಿತ ಗೊಟಬಯ, ದುಬೈ ಬದಲು ಮಾಲ್ಡೀವ್ಸ್‌ಗೆ ಪ್ರಯಾಣ ಮಾಡಿದ್ದಾರೆ.

click me!