ಭಾರತೀಯ ವಾಯುಪಡೆ ವಿಮಾನವೆಂದು ಸ್ಪೈಸ್‌ ಜೆಟ್‌ ಮೇಲೆ ಪಾಕ್‌ ‘ಅಟ್ಯಾಕ್‌’!

By Web DeskFirst Published Oct 18, 2019, 11:44 AM IST
Highlights

ಸ್ಪೈಸ್‌ ಜೆಟ್‌ ಮೇಲೆ ಪಾಕ್‌ನ ಎಫ್‌ 16 ‘ಅಟ್ಯಾಕ್‌’| ಭಾರತೀಯ ವಾಯುಪಡೆ ವಿಮಾನವೆಂದು ಭಾವಿಸಿ ಸುತ್ತುವರೆದಿದ್ದ ಪಾಕ್‌ ಯುದ್ಧ ವಿಮಾನಗಳು

ಇಸ್ಲಾಮಾಬಾದ್‌[ಅ.18]: ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಹಗೆ ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಪಾಕಿಸ್ತಾನಕ್ಕೆ ಕಂಡದೆಲ್ಲಾ ಭಾರತವೆಂಬಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಭಾರತದ ವಾಯುಪಡೆ ವಿಮಾನ ಎಂದು ತಪ್ಪಾಗಿ ಭಾವಿಸಿದ ಪಾಕಿಸ್ತಾನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನ ಹಾರಾಟಕ್ಕೆ ಅಡ್ಡಿಪಡಿಸಿದ ಘಟನೆ ಬೆಳಕಿಗೆ ಬಂದಿದೆ. ಸೆ.23ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬಯಲಾಗಿದೆ.

40 ಸಿಆರ್‌ಪಿಎಫ್‌ ಯೋಧರ ಬಲಿಪಡೆದ ಪುಲ್ವಾಮಾ ದಾಳಿಗೆ ಭಾರತ ವಾಯುಪಡೆ ಕೈಗೊಂಡ ಬಾಲಾಕೋಟ್‌ ದಾಳಿ ಬಳಿಕ ಭಾರತದ ವಿರುದ್ಧ ಉರಿದುಬಿದ್ದಿರುವ ಪಾಕಿಸ್ತಾನ, ತನ್ನ ವಾಯು ಸೀಮೆ ಪ್ರವೇಶಿಸದಂತೆ ಭಾರತದ ವಿಮಾನಗಳ ಮೇಲೆ ಪಾಕಿಸ್ತಾನ ನಿರ್ಬಂಧ ಹೇರಿತ್ತು. ಆದರೆ, ಜುಲೈ ತಿಂಗಳಿನಲ್ಲಿ ಕೆಲ ವಾಯು ಸೀಮೆ ಪ್ರದೇಶಗಳ ಪ್ರವೇಶಕ್ಕೆ ಪಾಕಿಸ್ತಾನ ಅನುಮತಿ ನೀಡಿತ್ತು. ಏತನ್ಮಧ್ಯೆ, ಸೆ.23ರಂದು ದೆಹಲಿ ವಿಮಾನ ನಿಲ್ದಾಣದಿಂದ 120 ಪ್ರಯಾಣಿಕರೊಂದಿಗೆ ಎಸ್‌ಜಿ-21 ಹೆಸರಿನ ಸ್ಪೈಸ್‌ಜೆಟ್‌ ವಿಮಾನವು ಆಷ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನತ್ತ ಸಾಗುತ್ತಿತ್ತು.

ವಿಮಾನ ಪಾಕಿಸ್ತಾನದ ಗಡಿ ಪ್ರವೇಶಿಸುತ್ತಿದ್ದಂತೆ ಸ್ಪೈಸ್‌ಜೆಟ್‌ ವಿಮಾನಕ್ಕೆ ಎಫ್‌-16 ಯುದ್ಧ ವಿಮಾನಗಳೊಂದಿಗೆ ಎದುರುಗೊಂಡ ಪಾಕಿಸ್ತಾನ ವಾಯುಪಡೆ, ವಾಣಿಜ್ಯಾತ್ಮಕ ವಿಮಾನವು ತೀರಾ ಎತ್ತರದಲ್ಲಿ ಹಾರಾಡುತ್ತಿದೆ. ವಿಮಾನದ ಎತ್ತರವನ್ನು ಕಡಿಮೆಗೊಳಿಸಿ. ವಿಮಾನದ ಮಾಹಿತಿ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿತು.

ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನಗಳು ಸ್ಪೈಸ್‌ಜೆಟ್‌ ವಿಮಾನದ ಸುತ್ತುವರಿಯುತ್ತಿದ್ದಂತೆ ಪ್ರಯಾಣಿಕರು ಭೀತಿಗೊಂಡಿದ್ದರು. ಹೀಗಾಗಿ, ಈ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಕಿಟಕಿಯ ಬಾಗಿಲುಗಳನ್ನು ಮುಚ್ಚಿ ಧೈರ್ಯವಾಗಿ ಮತ್ತು ಶಾಂತವಾಗಿ ಕುಳಿತುಕೊಳ್ಳುವಂತೆ ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಧೈರ್ಯ ತುಂಬಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆದರೆ, ಸ್ಪೈಸ್‌ಜೆಟ್‌ ವಿಮಾನದ ಮೇಲೆ ಎಸ್‌ಜಿ-21 ಅನ್ನು ಐಎ(ಇಂಡಿಯನ್‌ ಆರ್ಮಿ)(ಭಾರತೀಯ ಸೇನೆ) ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ಈ ಅಚಾತುರ್ಯ ನಡೆದಿದೆ ಎಂದು ಪಾಕಿಸ್ತಾನದ ಎಟಿಸಿ ತಿಳಿಸಿದೆ. ಅಲ್ಲದೆ, ಈ ಬಗ್ಗೆ ಮನವರಿಕೆಯಾಗುತ್ತಿದ್ದಂತೆ, ಪಾಕಿಸ್ತಾನದ ಗಡಿ ದಾಟಿ ಆಷ್ಘಾನಿಸ್ತಾನ ತಲುಪುವವರೆಗೂ ಸ್ಪೈಸ್‌ಜೆಟ್‌ನ ಪ್ರಯಾಣಿಕರ ವಿಮಾನಕ್ಕೆ ಪಾಕಿಸ್ತಾನದ ವಾಯುಪಡೆಯೇ ಬೆಂಗಾವಲು ಭದ್ರತೆ ನೀಡಿತ್ತು ಎಂಬ ವಿಚಾರವೂ ತಿಳಿದುಬಂದಿದೆ.

click me!