ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ ದಿಢೀರ್ ತೈವಾನ್ ಭೇಟಿ ವಿಚಾರ ಚೀನಾ ಕೆರಳಿ ಕೆಂಡವಾಗಿದೆ. ಇದನ್ನು ಬಾಹ್ಯ ಶಕ್ತಿಗಳ ಹಸ್ತಕ್ಷೇಪ ಎಂದು ಉಲ್ಲೇಖಿಸಿ ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಅಮೆರಿಕಾಗೆ ವಾರ್ನಿಂಗ್ ನೀಡಿದೆ. ಇದೇ ವೇಳೆ ಪರೋಕ್ಷವಾಗಿ ಭಾರತಕ್ಕೂ ಎಚ್ಚರಿಕೆ ನೀಡಿದೆ.
ನವದೆಹಲಿ(ಆ.02): ತೈವಾನ್ ಮೇಲೆ ಚೀನಾ ಬಹುತೇಕ ಹಿಡಿತ ಸಾಧಿಸಿದೆ. ಚೀನಾದ ಪ್ರಕಾರ ಡ್ರ್ಯಾಗನ್ ರಾಷ್ಟ್ರದ ಅಭಿಭಾಜ್ಯ ಅಂಗ. ಆದರೆ ತೈವಾನ್ ಸ್ವತಂತ್ರ ದೇಶವಾಗಿ ಗುರುತಿಸಿಕೊಳ್ಳಲು ಸದಾ ಹವಣಿಸಿದೆ. ಈ ಸಂಘರ್ಷ ಶತಮಾನಗಳಿಂದಲೂ ನಡೆಯುತ್ತಿದೆ. ಇದರ ನಡುವೆ ತೈವಾನ್‌ಗೆ ಇತರ ಯಾವುದೇ ದೇಶವನ್ನು ಭೇಟಿಯಾಗಲು ಚೀನಾ ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಚೀನಾ ಅನುಮತಿ ಇಲ್ಲದೆ ತೈವಾನ್ ಪ್ರವೇಶಿಸಿದರೆ ಎಚ್ಚರಿಕೆ ಸಂದೇಶ ರವಾನಿಸುವುದರಲ್ಲಿ ಹಿಂದೇಟು ಹಾಕಿಲ್ಲ. ತೈವಾನ್ ವಿಚಾರದಲ್ಲಿ ಭಾರತಕ್ಕೂ ಚೀನಾ ಎಚ್ಚರಿಕೆ ನೀಡಿದೆ. ಇದೀಗ ಅಮೆರಿಕಾ ಸ್ಪೀಕರ್ ತೈವಾನ್ ಭೇಟಿಗೆ ಸಜ್ಜಾಗಿದ್ದಾರೆ. ಇದರಿಂದ ಚೀನಾ ಕೆರಳಿ ಕೆಂಡವಾಗಿದೆ. ಆದರೆ ಎಚ್ಚರಿಕೆ ನೀಡುವಾಗ ಚೀನಾ ಭಾರಿ ರಣತಂತ್ರ ರೂಪಿಸಿದೆ. ಅಮೆರಿಕಾದಲ್ಲಿರುವ ಚೀನಾ ರಾಯಭಾರಿ ಬದಲು ಭಾರತದಲ್ಲಿರುವ ಚೀನಾ ರಾಯಭಾರಿಯಿಂದ ಅಮೆರಿಕಾಗೆ ಎಚ್ಚರಿಕೆ ನೀಡಿದೆ. ಈ ಮೂಲಕ ಭಾರತವೂ ತೈವಾನ್ ವಿಚಾರದಲ್ಲಿ ಮೂಗುತೂರಿಸಬಾರದು ಅನ್ನೋ ಪರೋಕ್ಷ ಸಂದೇಶವನ್ನು ಚೀನಾ ರವಾನಿಸಿದೆ.
ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಏಷ್ಯಾ ಪ್ರವಾಸದ ಎರಡನೇ ದಿನ ಮಲೇಷಿಯಾಗೆ ಆಗಮಿಸಿದ್ದಾರೆ. ಮಲೇಷಿಯಾ ಭೇಟಿ ಬಳಿಕ ಸ್ಪೀಕರ್ ತೈವಾನ್ ಭೇಟಿ ಮೊದಲೇ ನಿಗಧಿಯಾಗಿದೆ. ಆದರೆ ಈ ವಿಚಾರದಲ್ಲಿ ಚೀನಾ ಭಾರಿ ವಿರೋಧ ವ್ಯಕ್ತಪಡಿಸಿದೆ. ಬಾಹ್ಯ ಶಕ್ತಿಗಳ ಹಸ್ತಕ್ಷೇಪದ ಕಡೆಗೆ ಪ್ರತ್ಯೇಕತಾವಾದಿ ಚಲನೆಗಳನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ ಮತ್ತು "ತೈವಾನ್ ಸ್ವಾತಂತ್ರ್ಯ" ಪಡೆಗಳಿಗೆ ಯಾವುದೇ ರೂಪದಲ್ಲಿ ಅವಕಾಶ ನೀಡುವುದಿಲ್ಲ ಎಂದು ಭಾರತದಲ್ಲಿರುವ ಚೀನಾರಾಯಭಾರಿ ವಾಂಗ್ ಕ್ಸಿಯೋಜಿಯಾನ್ ಟ್ವೀಟ್ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತೈವಾನ್‌ಗಾಗಿ ಯುದ್ಧಕ್ಕೆ ಹಿಂಜರಿಯಲ್ಲ: ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಲೇಷಿಯಾಗೆ ಭಾರಿ ಭದ್ರತಾ ಪಡೆಗಳೊಂದಿಗೆ ಆಗಮಿಸಿದ್ದಾರೆ. ತೈವಾನ್ ಭೇಟಿಗೆ ಹೆಚ್ಚಿನ ಭದ್ರತೆಯ ಅವಶ್ಯಕತೆ ಇರುವುದರಿಂದ ಅಮೆರಿಕ ಮೊದಲ ನಿರ್ಧರಿಸಿ ಭಾರಿ ಭದ್ರತೆ ಕಲ್ಪಿಸಿದೆ. ಇದು ಚೀನಾವನ್ನು ಮತ್ತಷ್ಟು ಕೆರಳಿಸಿದೆ. ಅಮೆರಿಕ ತನ್ನ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತಿದೆ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಚೀನಾ ಅನುಮತಿ ಇಲ್ಲದೆ ತೈವಾನ್ ಪ್ರವೇಶ ಅಮೆರಿಕಾ ಹಾಗೂ ಬೀಜಿಂಗ್ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಕುತ್ತು ತರಲಿದೆ ಎಂದಿದೆ. ಚೀನಾ-ಯುಎಸ್ ಸಂಬಂಧಗಳು ದುರ್ಬಲಗೊಳ್ಳುವುದಲ್ಲದೆ, ಅತ್ಯಂತ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಂಗ್ ಕ್ಸಿಯೋಜಿಯಾನ್ ಹೇಳಿದ್ದಾರೆ.
ಮಲೇಷಿಯಾ ಪ್ರಧಾನಿ ಇಸ್ಮಾಯಿಲ್ ಸಾಬ್ರಿ ಯಾಕೋಬ್ ಜೊತೆ ಭೋಜನ ಸವಿದ ಸ್ಪೀಕರ್ ನ್ಯಾನ್ಸಿ ಇದುವರೆಗೂ ತೈವಾನ್ ಭೇಟಿಯ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಇಷ್ಟೇ ಅಲ್ಲ ಅಮೆರಿಕ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ತೈವಾನ್ ಮಾಧ್ಯಮಗಳು ಆಗಸ್ಟ್ 2 ರಾತ್ರಿ ನ್ಯಾನ್ಸಿ ತೈವಾನ್‌ನಲ್ಲಿ ತಂಗಲಿದ್ದಾರೆ ಎಂದು ಮಾಧ್ಯಮಗಳು ಪ್ರಕಟಿಸಿವೆ.
ರಷ್ಯಾ-ಉಕ್ರೇನ್ ಆಯ್ತು.. ತೈವಾನ್-ಚೀನಾ ವಾರ್ ಶುರು..!
ಚೀನಾ ಪ್ರತಿಷ್ಠಿತ ಮಾಧ್ಯಮಗಳು ಅಮೆರಿಕ ಸ್ಪೀಕರ್ ತೈವಾನ್ ಭೇಟಿಯನ್ನು ಖಚಿತಪಡಿಸಿದೆ. ಇದು ಚೀನಾವನ್ನು ಇನ್ನಿಲ್ಲದಂತೆ ಕೆರಳಿಸಿದೆ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮರಿಕಾಗೆ ವಾರ್ನಿಂಗ್ ನೀಡಿದೆ. ಈ ಹಿಂದೆ ಭಾರತದ ನಡೆಯಿಂದ ಚೀನಾ ಕೆರಳಿತ್ತು. ಗಡಿಯಲ್ಲಿ ಚೀನಾ ಉಪಟಳ ಹೆಚ್ಚಾದಂತೆ ಭಾರತ ತೈವಾನ್ ಜೊತೆ ವ್ಯಾಪಾರ ವಹಿವಾಟಿಗೆ ಆಫರ್ ನೀಡಿತ್ತು. ಇದು ಚೀನಾವನ್ನು ಕೆರಳಿಸಿತ್ತು. ತೈವಾನ್‌ಗೆ ಸ್ವತಂತ್ರದೇಶದ ಸ್ಥಾನಮಾನ ಚೀನಾ ನೀಡಿಲ್ಲ. ಇತ್ತ ಭಾರತ ವ್ಯಾಪಾರ ವಹಿವಾಟಿನ ಮೂಲಕ ತೈವಾನ್‌ಗೆ ಸ್ವತಂತ್ರ ದೇಶದ ಸ್ಥಾನ ಮಾನ ನೀಡಲು ಭಾರತವೂ ಮುಂದಾಗಿದೆ. ಇದೇ ಕಾರಣಕ್ಕೆ ಇದೀಗ ಭಾರತದಲ್ಲಿರುವ ಚೀನಾ ರಾಯಭಾರಿ ಮೂಲಕ ಅಮೆರಿಕಾಗೆ ನೀರ ಎಚ್ಚರಿಕೆ ನೀಡುವ ಜೊತೆಗೆ ಭಾರತಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದೆ.