
ಬಾರ್ಸಿಲೋನಾ: ಹಳಿಯ ಮೇಲೆ ನಿಂತಿದ್ದ ಹೈಸ್ಪೀಡ್ ರೈಲಿಗೆ ಮತ್ತೊಂದು ಹೈಸ್ಪೀಡ್ ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ 68 ಜನರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಸ್ಪೇನ್‌ನ ಟೊಲೆಡೊ ಪ್ರಾಂತ್ಯದ ಉರ್ದಾ ಮತ್ತು ಲಾಸ್ ಯೆಬೆನೆಸ್ ನಗರಗಳ ನಡುವಿನ ಪ್ರದೇಶದಲ್ಲಿ ಬುಧವಾರ ನಡೆದಿದೆ.
ರಾಜಧಾನಿ ಮಾಡ್ರಿಡ್‌ನಿಂದ ಸೆವಿಲ್ಲೆಗೆ ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಐರಿಯೊ ಕಂಪನಿಯ ಹೈಸ್ಪೀಡ್ ರೈಲು ಹಳಿಯ ಮೇಲೆ ನಿಂತಿತ್ತು. ಅದೇ ಮಾರ್ಗದಲ್ಲಿ ಬಂದ ಸರ್ಕಾರಿ ಸ್ವಾಮ್ಯದ ರೇನ್ಫೆ ಕಂಪನಿಯ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ 2 ರೈಲು ಬೋಗಿಗಳು ಹಳಿ ತಪ್ಪಿದ್ದು, ಒಂದು ಬೋಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ರೇನ್ಫೆ ರೈಲಿನಲ್ಲಿ 397 ಪ್ರಯಾಣಿಕರು ಹಾಗೂ ಐರಿಯೊ ರೈಲಿನಲ್ಲಿ 147 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ದುರಂತದಲ್ಲಿ ಕನಿಷ್ಠ 68 ಮಂದಿ ಪ್ರಾಣ ಕಳೆದುಕೊಂಡಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ರಕ್ಷಣಾ ಪಡೆಗಳು ಬೋಗಿಗಳಲ್ಲಿ ಸಿಲುಕಿರುವ ಸಂತ್ರಸ್ತರನ್ನು ಮತ್ತು ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ವರ್ಷ ಸ್ಪೇನ್‌ನಲ್ಲಿ ಸಂಭವಿಸಿದ 2ನೇ ದೊಡ್ಡ ರೈಲು ದುರಂತ ಇದಾಗಿದೆ. ಇದಕ್ಕೂ ಮುನ್ನ ಕಳೆದ ಜನವರಿಯಲ್ಲಿಯೂ 45 ಜನರ ಜೀವ ಬಲಿ ಪಡೆದ ರೈಲು ಅಪಘಾತ ಸಂಭವಿಸಿತ್ತು.
ಅಪಘಾತದ ತೀವ್ರತೆಗೆ ರೈಲಿನ ಬೋಗಿಗಳು ಹಳಿ ತಪ್ಪಿ, ಜಲ್ಲಿಕಲ್ಲುಗಳ ಇಳಿಜಾರಿನಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಭೀಕರ ದುರಂತದ ಹಿನ್ನೆಲೆಯಲ್ಲಿ ಮ್ಯಾಡ್ರಿಡ್, ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೈಸ್ಪೀಡ್ ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರಾಥಮಿಕ ತನಿಖೆ ಅನ್ವಯ ಸಿಬ್ಬಂದಿ ಕರ್ತವ್ಯಲೋಪವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣವನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಪ್ರಾಥಮಿಕ ತನಿಖೆಯಲ್ಲಿ ಕಂಪ್ಯೂಟರ್ ಸಂವಹನ ವ್ಯವಸ್ಥೆಯ ದೋಷ ಎನ್ನಲಾಗಿದೆ.
ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ರೈಲ್ವೆ ಸುರಕ್ಷತಾ ವ್ಯವಸ್ಥೆಯಲ್ಲಿ ಉಂಟಾದ ಕಂಪ್ಯೂಟರ್ ಸಂವಹನ ವೈಫಲ್ಯದಿಂದಾಗಿ ಸುಮಾರು 63 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲುಗಳನ್ನು ಸ್ವಯಂಚಾಲಿತವಾಗಿ ತಡೆಯುವ ವ್ಯವಸ್ಥೆ ಸ್ಥಗಿತಗೊಂಡಿತ್ತು. ಈ ವೇಳೆ ಸರ್ಕಾರಿ ಸ್ವಾಮ್ಯದ 'ಎಡಿಐಎಫ್' ಮೂಲಸೌಕರ್ಯ ನಿರ್ವಹಣಾ ಸಂಸ್ಥೆಯು ನಿಯಂತ್ರಣವನ್ನು ಮಾನವನಿಂದ ನಿರ್ವಹಿಸಲು ಮುಂದಾಯಿತು. ಮಾರ್ಗದಲ್ಲಿ ಕೆಂಪು ಸಿಗ್ನಲ್ ಪ್ರದರ್ಶಿತವಾಗುತ್ತಿದ್ದರೂ, ಕಂಟ್ರೋಲರ್‌ಗಳ ತಪ್ಪು ಸೂಚನೆಯ ಮೇರೆಗೆ 'ರೆನ್ಫೆ' ಹೈಸ್ಪೀಡ್ ರೈಲಿಗೆ ಮುಂದೆ ಚಲಿಸಲು ಅನುಮತಿ ನೀಡಲಾಯಿತು ಎಂದು ವಿವರಿಸಿದ್ದಾರೆ.
ಸಾಮಾನ್ಯವಾಗಿ ನಿಷೇಧಿತ ಸಿಗ್ನಲ್ ಇದ್ದಾಗ ರೈಲುಗಳು ಚಲಿಸುವಂತಿಲ್ಲ. ಆದರೆ ಈ ವಿವರಿಸಲಾಗದ ನಿರ್ಧಾರದಿಂದಾಗಿ, ಗಂಟೆಗೆ ಸುಮಾರು 124 ಮೈಲು (200 ಕಿ.ಮೀ) ವೇಗದಲ್ಲಿ ಚಲಿಸುತ್ತಿದ್ದ 'ರೆನ್ಫೆ' ರೈಲು, ಹಳಿಯಲ್ಲಿ ನಿಂತಿದ್ದ 'ಇರಿಯೊ' (IRYO) ರೈಲಿಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಆಘಾತ ವ್ಯಕ್ತಪಡಿಸಿರುವ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಶಾದ್ಯಂತ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದ ಅವರು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಇಂದು ಇಡೀ ಸ್ಪೇನ್ ದೇಶವೇ ದುಃಖಸಾಗರದಲ್ಲಿ ಮುಳುಗಿದೆ. ಸ್ಪೇನ್‌ನಂತಹ ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶದಲ್ಲಿ ಒಂದೇ ವರ್ಷದಲ್ಲಿ ಎರಡು ಪ್ರಮುಖ ಹೈಸ್ಪೀಡ್ ರೈಲು ದುರಂತಗಳು ಸಂಭವಿಸುವುದು ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ಆಕ್ರೋಶ ಹೊರ ಹಾಕಿದ್ದಾರೆ.
ಸ್ಪೇನ್‌ನ ಹೈಸ್ಪೀಡ್ ರೈಲು ಜಾಲವು 1992 ರಲ್ಲಿ ಪ್ರಾರಂಭವಾದಾಗಿನಿಂದ ಅತ್ಯಂತ ಸುರಕ್ಷಿತವೆಂಬ ಹೆಸರು ಪಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿರುವುದು ಆತಂಕ ಮೂಡಿಸಿದೆ. ಇದೇ ವರ್ಷದ ಜನವರಿಯಲ್ಲಿ ದಕ್ಷಿಣ ಸ್ಪೇನ್‌ನಲ್ಲಿ ಇರಿಯೊ ರೈಲು ಹಳಿತಪ್ಪಿ ಎದುರಿನಿಂದ ಬರುತ್ತಿದ್ದ ರೆನ್ಫೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 45 ಜನರು ಸಾವನ್ನಪ್ಪಿದ್ದರು. 2013 ರಲ್ಲಿ ನಡೆದ ಭೀಕರ ಅಪಘಾತದಲ್ಲಿ 80 ಜನರು ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ