Russia Ukraine War: ಜನರ ತೆರವು ವೇಳೆ ಕದನವಿರಾಮ: ನನ್ನ ಜತೆ ನೇರವಾಗಿ ಮಾತಾಡಿ: ಪುಟಿನ್‌ಗೆ ಝೆಲೆನ್‌ಸ್ಕಿ ಆಹ್ವಾನ

Published : Mar 04, 2022, 10:13 AM IST
Russia Ukraine War: ಜನರ ತೆರವು ವೇಳೆ ಕದನವಿರಾಮ: ನನ್ನ ಜತೆ ನೇರವಾಗಿ ಮಾತಾಡಿ: ಪುಟಿನ್‌ಗೆ ಝೆಲೆನ್‌ಸ್ಕಿ ಆಹ್ವಾನ

ಸಾರಾಂಶ

*2ನೇ ಹಂತದ ಮಾತುಕತೆಯಲ್ಲಿ ಮಹತ್ವದ ನಿರ್ಧಾರ *ಔಷಧ, ಆಹಾರ ಪೂರೈಕೆಗೂ ಅಡ್ಡಿ ಮಾಡದಿರಲು ನಿರ್ಧಾರ *ಅಣ್ವಸ್ತ್ರ ದಾಳಿ ಚಿಂತನೆ ಪಾಶ್ಚಾತ್ಯ ದೇಶದ್ದು, ನಮ್ಮದಲ್ಲ: ರಷ್ಯಾ

ಕೀವ್‌ (ಮಾ. 03): ಪುಟಿನ್‌ಗೆ ಝೆಲೆನ್‌ಸ್ಕಿ ಆಹ್ವಾನ:  ನನ್ನ ಜತೆ ನೇರವಾಗಿ ಮಾತನಾಡಿ. ಆಗ ಮಾತ್ರ ಯುದ್ಧದ ಬಿಕ್ಕಟ್ಟು ಇತ್ಯರ್ಥ ಆಗಬಹುದು ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಆಹ್ವಾನಿಸಿದ್ದಾರೆ.‘ರಷ್ಯಾ ಮೇಲೆ ನಾವು ಯುದ್ಧ ಮಾಡಲ್ಲ. ನಮ್ಮಿಂದ ನೀವೇನು ಬಯಸುತ್ತೀರಿ. ಬನ್ನಿ ಮಾತನಾಡೋಣ. ಆಗ ಯುದ್ಧ ನಿಲ್ಲಬಹುದು’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

2ನೇ ಹಂತದ ಮಾತುಕತೆಯಲ್ಲಿ ಮಹತ್ವದ ನಿರ್ಧಾರ: ಸತತ 8 ದಿನಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬೆಲಾರಸ್‌ನಲ್ಲಿ 2ನೇ ಹಂತದ ಸಂಧಾನ ಮಾತುಕತೆ ನಡೆಸಿದ್ದು, ಚರ್ಚೆಯು ಮಹತ್ವದ ಪ್ರಗತಿ ಕಂಡಿದೆ. ಯುದ್ಧಪೀಡಿತ ಸ್ಥಳಗಳಲ್ಲಿ ಜನರ ತೆರವು ಕಾರಾರ‍ಯಚರಣೆಗೆ ಅನುವು ಮಾಡಿಕೊಡಲು ಉಭಯ ದೇಶಗಳು ಸಮ್ಮತಿಸಿವೆ.

ಇದೇ ವೇಳೆ, ನಾಗರಿಕರ ತೆರವು ಕಾರ್ಯಾಚರಣೆಯಲ್ಲದೆ ಆಹಾರ ಹಾಗೂ ಔಷಧ ಪೂರೈಕೆಗೆ ಯಾವುದೇ ಅಡ್ಡಿ ಮಾಡಬಾರದು. ಇಂಥ ಕೆಲಸಗಳು ನಡೆಯುವಾಗ ತಾತ್ಕಾಲಿಕವಾಗಿ ಕದನವಿರಾಮ ನೀತಿಯನ್ನು ಅನುಸರಿಸಬೇಕು ಎಂದು ಮಾತುಕತೆಯಲ್ಲಿ ನಿರ್ಧರಿಸಲಾಗಿದೆ. ಇದೇ ವೇಳೆ, ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ 3ನೇ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ.

ಇದನ್ನೂ ಓದಿ: Russia Ukraine War: ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿಗಳಿಂದ ಟೀ, ಬನ್‌!

ಮಾತುಕತೆ ಆರಂಭದಲ್ಲಿ, ‘ತಕ್ಷಣದಿಂದಲೇ ಕದನ ರಾಮ ಘೋಷಣೆಯಾಗಬೇಕು. ಯುದ್ಧ ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಬೇಕು. ಯುದ್ಧದಿಂದ ನಾಶವಾದ ಪ್ರದೇಶಗಳಿಂದ ನಾಗರಿಕರನ್ನು ರಕ್ಷಿಸಲು ಮಾನವೀಯ ಕಾರಿಡಾರ್‌ ರಚಿಸಬೇಕು’ ಎಂಬ ಷರತ್ತುಗಳನ್ನು ಉಕ್ರೇನ್‌ ವಿಧಿಸಿತ್ತು ಎಂದು ಮೂಲಗಳು ಹೇಳಿವೆ. ಇದಕ್ಕೂ ಮೊದಲು ಫೆ.28ರಂದು ಉಭಯ ದೇಶಗಳು ಮೊದಲ ಸುತ್ತಿನ ಮಾತುಕತೆ ನಡೆಸಿದ್ದವು. 2 ದೇಶಗಳ ನಿಯೋಗಗಳು ಪರಸ್ಪರ ಷರತ್ತುಗಳನ್ನು ವಿಧಿಸಿದ ಕಾರಣ ಈ ಮಾತುಕತೆ ಅಪೂರ್ಣವಾಗಿತ್ತು.

ಮಾತುಕತೆಗೂ ಮೊದಲು ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ನಮ್ಮ ಗುರಿ ಈಡೇರುವವರೆಗೂ ಯುದ್ಧ ನಿಲ್ಲಿಸುವುದಿಲ್ಲ. ಸಂಘರ್ಷವನ್ನು ನಿಧಾನಗೊಳಿಸಲು ಉಕ್ರೇನ್‌ ಮಾತುಕತೆಗೆ ಪ್ರಯತ್ನ ನಡೆಸಿದರೆ, ರಷ್ಯಾ ಇನ್ನಷ್ಟುಬೇಡಿಕೆಯನ್ನು ಉಕ್ರೇನ್‌ ಮುಂದಿಡಲಿದೆ. ಇದರ ಪರಿಣಾಮ ಏನೇ ಆದರೂ ಎದುರಿಸಲು ಸಿದ್ಧ’ ಎಂದು ಹೇಳಿದ್ದರು.

ಅಣ್ವಸ್ತ್ರ ದಾಳಿ ಚಿಂತನೆ ಪಾಶ್ಚಾತ್ಯ ದೇಶದ್ದು, ನಮ್ಮದಲ್ಲ: ರಷ್ಯಾ: ಕಳೆದ ಕೆಲ ದಿನಗಳಿಂದ ಅಮೆರಿಕ ಸೇರಿದಂತೆ ನ್ಯಾಟೋ ದೇಶಗಳಿಗೆ ಹಲವು ಬಾರಿ ಪರಮಾಣು ದಾಳಿಯ ಪರೋಕ್ಷ ಎಚ್ಚರಿಕೆ ನೀಡುತ್ತಲೇ ಬಂದಿದ್ದ ರಷ್ಯಾ, ಇದೀಗ ಪೂರ್ಣ ಉಲ್ಟಾಹೊಡೆದಿದೆ. ‘ಪರಮಾಣು ದಾಳಿಯ ವಿಷಯ ಗಿರಕಿ ಹೊಡೆಯುತ್ತಿರುವುದು ಪಾಶ್ಚಾತ್ಯ ದೇಶಗಳ ತಲೆಯಲ್ಲೇ ಹೊರತೂ ನಮ್ಮಲ್ಲಲ್ಲ’ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪರಮಾಣು ಯುದ್ಧದ ಭೀತಿಯನ್ನು ಸ್ವಲ್ಪ ತಿಳಿಗೊಳಿಸುವ ಯತ್ನ ಮಾಡಿದೆ.

ಇದನ್ನೂ ಓದಿRussia Ukraine War: ಉಕ್ರೇನ್‌ ಮೇಲಿನ ದಾಳಿಯ ಗುರಿ ಈಡೇರಿಸದೆ ಬಿಡಲ್ಲ: ಪುಟಿನ್‌ ಶಪಥ

ಗುರುವಾರ ದೇಶಿ ಮತ್ತು ವಿದೇಶಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೇಯ್‌ ಲಾವ್ರೋವ್‌, ‘ಒಂದಂದೂ ಸತ್ಯ, ಮೂರನೇ ಮಹಾಯುದ್ಧವೇನಾದರೂ ಆದರೆ ಪರಮಾಣು ಅಸ್ತ್ರಗಳನ್ನೇ ಒಳಗೊಂಡಿರಲಿದೆ. ಆದರೆ ಪರಮಾಣು ದಾಳಿಯ ವಿಷಯ ಹಲವು ದಿನಗಳಿಂದ ಗಿರಕಿ ಹೊಡೆಯುತ್ತಿರುವುದು ಪಾಶ್ಚಾತ್ಯ ದೇಶಗಳ ತಲೆಯಲ್ಲೇ ಹೊರತೂ ರಷ್ಯಾ ತಲೆಯಲ್ಲಲ್ಲ. 

ಆದರೂ ಒಂದು ವಿಷಯ ಖಚಿತಪಡಿಸುತ್ತೇನೆ. ಈ ವಲಯದಲ್ಲಿ ಸಮತೋಲನವನ್ನು ಹದಗೆಡಿಸುವ ಯಾವುದೇ ಪ್ರಚೋದನೆಗಳಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದರು. ಈ ಮೂಲಕ ಉಕ್ರೇನ್‌ಗೆ ನ್ಯಾಟೋ ಸೇರಿದಂತೆ ಯಾವುದೇ ದೇಶಗಳು ಪರಮಾಣು ಅಸ್ತ್ರವನ್ನು ನೀಡಿದರೆ ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕಳೆದ ಭಾನುವಾರ ಅಣ್ವಸ್ತ್ರ ಪಡೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ರಷ್ಯಾದ ಪರಮಾಣು ಪಡೆಯು ಸತತವಾಗಿ ಸಮರಾಭ್ಯಾಸ ನಡೆಸುತ್ತಲೇ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್