Russia Ukraine War: ರಷ್ಯಾನೋ? ಉಕ್ರೇನೋ? ನಿಲುವು ಸ್ಪಷ್ಟಪಡಿಸಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಅಮೆರಿಕ ಆಕ್ರೋಶ

By Kannadaprabha NewsFirst Published Mar 4, 2022, 9:13 AM IST
Highlights

*ವಿಶ್ವಸಂಸ್ಥೆಯಲ್ಲಿ ಮತದಾನಕ್ಕೆ ಗೈರಾಗಿದ್ದಕ್ಕೆ ಭಾರತಕ್ಕೆ ಅಮೆರಿಕ ಆಕ್ರೋಶ
*ಆಕ್ರೋಶಗೊಂಡ ಸಂಸದರಿಗೆ ವಿದೇಶಾಂಗ ಇಲಾಖೆ ಅಧಿಕಾರಿ ಸ್ಪಷ್ಟನೆ

ವಾಷಿಂಗ್ಟನ್‌ (ಮಾ. 04) : ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮತದಾನದಿಂದ ದೂರವೇ ಉಳಿದ ಭಾರತ ಸರ್ಕಾರದ ಬಗ್ಗೆ ಅಮೆರಿಕ ಸಂಸದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ಮತದಾನದಲ್ಲಿ ಭಾರತ ಸೇರಿದಂತೆ 35 ದೇಶಗಳು ಗೈರಾಗಿದ್ದವು. ಈ ವಿಷಯದ ಕುರಿತು ನಡೆದ ಚರ್ಚೆಯ ವೇಳೆ ಡೆಮಾಕ್ರೆಟ್‌ ಮತ್ತು ರಿಪಬ್ಲಿಕನ್‌ ಎರಡೂ ಪಕ್ಷದ ಸಂಸದರು ಭಾರತ ಯಾವುದೇ ಸ್ಪಷ್ಟನಿರ್ಧಾರಕ್ಕೆ ಬರದೇ ಇರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈ ವಿಷಯದಲ್ಲಿ ತಾನು ರಷ್ಯಾ ಪರವೋ ಅಥವಾ ಉಕ್ರೇನ್‌ ಪರವೋ ಎಂಬುದರ ಬಗ್ಗೆ ಭಾರತ ಖಚಿತ ನಿಲುವು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಡೊನಾಲ್ಡ್‌ ಲು ‘ರಷ್ಯಾ- ಉಕ್ರೇನ್‌ ಬಿಕ್ಕಟ್ಟಿನ ವಿಷಯದಲ್ಲಿ ಭಾರತ ಎರಡು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನಿಲವುಗಳನ್ನು ಪ್ರದರ್ಶಿಸುತ್ತಿದೆ. ಮೊದಲನೆಯದಾಗಿ ಬಿಕ್ಕಟ್ಟು ಇತ್ಯರ್ಥಕ್ಕೆ ಮಾತುಕತೆಯ ವೇದಿಕೆಯೇ ಸೂಕ್ತ ಎಂಬುದಾಗಿದೆ. 

Latest Videos

ಇದನ್ನೂ ಓದಿ: Russia Ukraine War: ಉಕ್ರೇನ್‌ ಮೇಲಿನ ದಾಳಿಯ ಗುರಿ ಈಡೇರಿಸದೆ ಬಿಡಲ್ಲ: ಪುಟಿನ್‌ ಶಪಥ

ಎರಡನೆಯದು, ಉಕ್ರೇನ್‌ನಲ್ಲಿ ಭಾರತದ 18000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರುವ ಕುರಿತು ಅದು ಉಕ್ರೇನ್‌ ಮತ್ತು ರಷ್ಯಾ ಎರಡೂ ಸರ್ಕಾರಗಳೊಂದಿಗೆ ಸತತ ಸಂಪರ್ಕದಲ್ಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಉಕ್ರೇನ್‌-ರಷ್ಯಾ ಬಿಕ್ಕಟ್ಟು: ಮನಮೋಹನ್‌ ಕೂಡ ತಟಸ್ಥವಾಗಿದ್ದರು:  ಉಕ್ರೇನ್‌ ಹಾಗೂ ರಷ್ಯಾದ ನಡುವಿನ ಬಿಕ್ಕಟ್ಟಿನ ವಿಚಾರದಲ್ಲಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿಯಲ್ಲಿ ತನ್ನ ತಟಸ್ಥ ನಿಲುವನ್ನು ಮುಂದುವರೆಸಿದೆ. 2014 ರಲ್ಲಿ ರಷ್ಯಾ ಉಕ್ರೇನಿನ ಭಾಗವಾದ ಕ್ರಿಮಿಯಾವನ್ನು ರಷ್ಯಾ ಬಲವಂತವಾಗಿ ವಶಪಡಿಸಿಕೊಂಡಾಗಲೂ ಅಂದಿನ ಮನಮೋಹನ್‌ ಸಿಂಗ್‌ ಸರ್ಕಾರವು ತಟಸ್ಥ ನಿಲುವನ್ನೇ ಹೊಂದಿತ್ತು.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾದ ಟಿ.ಎಸ್‌. ತಿರುಮೂರ್ತಿ ‘ಉಕ್ರೇನಿನಲ್ಲಿ ಕೂಡಲೇ ಕದನ ವಿರಾಮ ಘೋಷಣೆಯಾಗಬೇಕು. ಎರಡೂ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬುದೇ ಭಾರತದ ಅಭಿಪ್ರಾಯವಾಗಿದೆ’ ಎಂದಿದ್ದರು.

ಭಾರತದ ತಟಸ್ಥ ನಿಲುವನ್ನು ಕೆಲವು ನಾಯಕರು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದು ನರೇಂದ್ರ ಮೋದಿ ಸರ್ಕಾರವು ಅಪ್ರಚೋದಿತವಾಗಿ ಉಕ್ರೇನಿನ ಮೇಲೆ ಯುದ್ಧ ಘೋಷಿಸಿದ ರಷ್ಯಾ ವಿರುದ್ಧ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳಿಗೆ ಬೆಂಬಲ ಘೋಷಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಭಾರತವು ಎಂದಿನಂತೇ ಉಕ್ರೇನ್‌ ಹಾಗೂ ರಷ್ಯಾ ವಿಚಾರದಲ್ಲಿ ತಟಸ್ಥ ನಿಲುವನ್ನೇ ಮುಂದುವರೆಸಿಕೊಂಡು ಬಂದಿದೆ.

ಇದನ್ನೂ ಓದಿ: Russia- Ukraine Crisis: ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೇಕೆ ಉಕ್ರೇನ್ ಮೇಲೆ ಸಿಟ್ಟು.?

ಜೊತೆಗೆ, ಅಧ್ಯಕ್ಷ ಜೋ ಬೈಡೆನ್‌, ರಕ್ಷಣಾ ಸಚಿವ ಆ್ಯಂಟನಿ ಬ್ಲಿಂಕನ್‌ ಸೇರಿದಂತೆ ಹಲವು ಸಚಿವರು, ಹಿರಿಯ ಅಧಿಕಾರಿಗಳು ಉಕ್ರೇನ್‌ ವಿಷಯ ಸಂಬಂಧ ಭಾರತದ ಜೊತೆಗೆ ಉನ್ನತ ಮಟ್ಟದಲ್ಲಿ ಸತತವಾಗಿ ಮಾತುಕತೆಯನ್ನು ನಡೆಸುತ್ತಲೇ ಇದ್ದಾರೆ ಎಂದು ಭರವಸೆ ನೀಡಿದ್ದಾರೆ.

ಶಾಂತಿ ಮಾತುಕತೆ: ರಷ್ಯಾ-ಉಕ್ರೇನ್‌ಗೆ ಮೋದಿ ಕರೆ: ರಷ್ಯಾ ಉಕ್ರೇನ್‌ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಉಕ್ರೇನ್‌ ಬಿಕ್ಕಟ್ಟಿನ ಸಂಬಂಧ ನಡೆಸಲಾದ ಕ್ವಾಡ್‌ ರಾಷ್ಟ್ರಗಳ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.ಯುದ್ಧದ ಬದಲು ಶಾಂತಿ ಮಾತುಕತೆಗೆ ಹೆಚ್ಚಿನ ಒತ್ತು ನೀಡಬೇಕು. ಉಭಯ ದೇಶಗಳು ಪರಸ್ಪರ ಸಾರ್ವಭೌಮತೆಯನ್ನು ಗೌರವಿಸಬೇಕು. ಕ್ವಾಡ್‌ ರಾಷ್ಟ್ರಗಳು ಯಾವಾಗಲೂ ತಮ್ಮ ಮೂಲ ಉದ್ದೇಶಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು.

ಇಂಡೋ ಪೆಸಿಫಿಕ್‌ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕ್ವಾಡ್‌ ದೇಶಗಳು ಸಹಕಾರ ನೀಡಬೇಕು. ಉಕೇನ್‌ನಲ್ಲಿ ನಡೆದಿರುವಂತಹ ಘಟನೆ ಇಂಡೋ ಪೆಸಿಫಿಕ್‌ ವಲಯದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು.ಕ್ವಾಡ್‌ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡಿದ್ದರು.

click me!