
ರಿಯಾದ್: ಆಧುನಿಕ ಸೌದಿ ಅರೇಬಿಯಾದ ಇತಿಹಾಸದೊಂದಿಗೆ ಸಾಗಿದ ವಿಸ್ಮಯ ವ್ಯಕ್ತಿತ್ವ, ಹಿರಿಯ ನಾಗರೀಕ ಶೇಖ್ ನಾಸರ್ ಬಿನ್ ರದ್ದಾನ್ ಅಲ್ ರಶೀದ್ ಅಲ್ ವಾದಾಇ ತಮ್ಮ 142ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಶೇಖ್ ನಾಸರ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ರಿಯಾದ್‌ನ ತಮ್ಮ ನಿವಾಸದಲ್ಲಿ ಶೇಖ್ ನಾಸರ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ ಶೇಖ್ ನಾಸರ್ ಅವರು ಸೌದಿ ಅರೇಬಿಯಾದ ಅತ್ಯಂತ ಹಿರಿಯ ನಾಗರಿಕರು ಎಂದು ಗುರುತಿಸಲ್ಪಟ್ಟಿದ್ದರು. ಆಧುನಿಕ ಸೌದಿಯ ಸ್ಥಾಪಕ ಅಬ್ದುಲ್ ಅಜೀಜ್ ರಾಜರಿಂದ ಹಿಡಿದು ಪ್ರಸ್ತುತ ಆಡಳಿತಗಾರ ಸಲ್ಮಾನ್ ರಾಜರವರೆಗಿನ ಎಲ್ಲಾ ರಾಜರ ಆಳ್ವಿಕೆಯ ಅವಧಿಗೆ ಸಾಕ್ಷಿಯಾದ ಅಪರೂಪದ ವ್ಯಕ್ತಿಯಾಗಿದ್ದರು.
ಶೇಖ್ ನಾಸರ್ ಅವರ ಜೀವನದ ಅತಿದೊಡ್ಡ ವಿಶೇಷತೆಯೆಂದರೆ ಅವರ 110ನೇ ವಯಸ್ಸಿನ ಮದುವೆಯಾಗಿದ್ದರು. ತಮ್ಮ 110ನೇ ವಯಸ್ಸಿನಲ್ಲಿ ಕೊನೆಯ ಬಾರಿಗೆ ಮದುವೆಯಾದ ಅವರಿಗೆ ಆ ದಾಂಪತ್ಯದಲ್ಲಿ ಹೆಣ್ಣು ಮಗು ಜನಿಸಿತ್ತು. ಜಗತ್ತನ್ನೇ ಬೆರಗುಗೊಳಿಸಿದ ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. 110ನೇ ವಯಸ್ಸಿನಲ್ಲೂ ತಂದೆಯಾಗಲು ಸಾಧ್ಯವಾದ ಅವರ ಆರೋಗ್ಯ ಮತ್ತು ಜೀವನಶೈಲಿ ವೈದ್ಯಕೀಯ ಲೋಕದಲ್ಲೂ ಚರ್ಚೆಯಾಗಿತ್ತು. ಶೇಖ್ ನಾಸರ್ ಅವರದ್ದು ಸರಳ ಮತ್ತು ಭಕ್ತಿಪೂರ್ವಕ ಜೀವನವಾಗಿತ್ತು.
ತಮ್ಮ ಜೀವಿತಾವಧಿಯಲ್ಲಿ ಅವರು 40 ಬಾರಿ ಪವಿತ್ರ ಹಜ್ ಕರ್ಮವನ್ನು ನೆರವೇರಿಸಿದ್ದಾರೆ. ಮಕ್ಕಳು, ಮೊಮ್ಮಕ್ಕಳು ಮತ್ತು ಅವರ ಮಕ್ಕಳೊಂದಿಗೆ 134 ಜನರ ದೊಡ್ಡ ಕುಟುಂಬದ ಮುಖ್ಯಸ್ಥರಾಗಿದ್ದರು. ಮರುಭೂಮಿಯಾಗಿದ್ದ ಸೌದಿ ಅರೇಬಿಯಾ ಅತ್ಯಾಧುನಿಕ ರಾಷ್ಟ್ರವಾಗಿ ಬದಲಾದ ಪ್ರತಿಯೊಂದು ಹಂತವನ್ನು ಅವರು ಕಣ್ಣಾರೆ ಕಂಡಂತಹ ವ್ಯಕ್ತಿಯಾಗಿದ್ದರು.
ರಿಯಾದ್‌ನ ಪ್ರಮುಖ ಮಸೀದಿಯಲ್ಲಿ ನಡೆದ ಅಂತಿಮ ಯಾತ್ರೆ ಮತ್ತು ಪ್ರಾರ್ಥನೆಯಲ್ಲಿ ಸಮಾಜದ ವಿವಿಧ ಸ್ತರಗಳ ಅನೇಕ ಗಣ್ಯರು ಭಾಗವಹಿಸಿದ್ದರು. ಸೌದಿ ಅರೇಬಿಯಾದ ಸಂಪ್ರದಾಯ ಮತ್ತು ಆರೋಗ್ಯಕರ ಜೀವನಶೈಲಿಯ ಸಂಕೇತವಾಗಿ ಜನರು ಅವರನ್ನು ನೋಡುತ್ತಿದ್ದರು. ಸದ್ಯ ಶೇಖ್ ನಾಸರ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ದೊಡ್ಡ ಮರುಭೂಮಿಯನ್ನೇ ಹೊಂದಿದ್ದರೂ ಈ ಮುಸ್ಲಿಂ ದೇಶಗಳು ಮರಳನ್ನು ವಿದೇಶದಿಂದ ಆಮದು ಮಾಡಿಕೊಳ್ಳೋದೇಕೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ