* ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದ ಸೂಚನೆ
* ಅಮೆರಿಕದಲ್ಲಿ ಈರುಳ್ಳಿ ತಿಂದು 650 ಜನಕ್ಕೆ ಸಾಲ್ಮೊನೆಲ್ಲಾ ರೋಗ
ವಾಷಿಂಗ್ಟನ್(ಅ.23): ಕೋವಿಡ್(Covid 19) ವಿರುದ್ಧ ಅಮೆರಿಕ ಹೋರಾಟ ನಡೆಸುತ್ತಿರುವಾಗಲೇ ದೇಶದಲ್ಲಿ ಸಾಲ್ಮೊನೆಲ್ಲಾ(Salmonella) ಬ್ಯಾಕ್ಟೀರಿಯಾ ಸೋಂಕು ಹರಡಿರುವುದು ಹೊಸ ಆತಂಕ ಸೃಷ್ಟಿಸಿದೆ. ಈ ಬ್ಯಾಕ್ಟೀರಿಯಾ ಸೋಂಕಿತ ಈರುಳ್ಳಿ(Onion) ಸೇವಿಸಿ ಸುಮಾರು 650 ಮಂದಿ ಅಸ್ವಸ್ಥರಾಗಿದ್ದು, ಜನರು ತಮ್ಮ ಮನೆಯಲ್ಲಿರುವ ಸ್ಟಿಕ್ಕರ್‌ರಹಿತ ಅಥವಾ ಪ್ಯಾಕೇಜಿಂಗ್ ಮಾಹಿತಿಯಿಲ್ಲದ ಈರುಳ್ಳಿಯನ್ನು ಎಸೆಯಿರಿ ಎಂದು ಸರ್ಕಾರ ಸೂಚನೆ ನೀಡಿದೆ.
ಮೆಕ್ಸಿಕೋದ(Mexico) ಚಿವಾವಾ ಎಂಬಲ್ಲಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಹಸಿಯಾಗಿ ಸೇವಿಸಿದ ಜನರಿಗೆ ಈ ಸೋಂಕು ಹರಡಿದೆ. ಪ್ರೋಸೋರ್ಸ್ ಎಂಬ ಕಂಪನಿ ಈ ಈರುಳ್ಳಿ ಆಮದು ಮಾಡಿಕೊಂಡು ಮಾರಾಟ ಮಾಡಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್‌ನಿಂದಲೇ ದೇಶದಲ್ಲಿ ರೋಗ ಹರಡುತ್ತಿದ್ದು, ಟೆಕ್ಸಾಸ್(Texas) ಮತ್ತು ಓಕ್ಲಹಾಮಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದಾರೆ. 129 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯಪೀಡಿತರಲ್ಲಿ ಶೇ.75ರಷ್ಟು ಜನರು ತಾವು ಹಸಿ ಈರುಳ್ಳಿ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ.
undefined
‘ಈರುಳ್ಳಿಯನ್ನು ತಿಂಗಳುಗಟ್ಟಲೆ ಇಡುವುದರಿಂದ ಜನರ ಬಳಿ ಈಗಲೂ ಸೋಂಕಿತ ಈರುಳ್ಳಿ ಇರಬಹುದು. ಹೀಗಾಗಿ ಕೆಂಪು, ಹಳದಿ ಮತ್ತು ಬಿಳಿ ಈರುಳ್ಳಿಗಳು ಮನೆಯಲ್ಲಿದ್ದರೆ ಎಸೆದುಬಿಡಿ’ ಎಂದು ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.
ಏನಿದು ಸಾಲ್ಮೊನೆಲ್ಲಾ?
ಇದೊಂದು ಬ್ಯಾಕ್ಟೀರಿಯಾ. ಇದರ ಸೋಂಕು ಜನರಿಗೆ ತಗಲಿದರೆ ಹೊಟ್ಟೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ. ಕೆಲವರಲ್ಲಿ ಟೈಫಾಯ್ಡ್ ಬರಬಹುದು. ಭೇದಿ, ಜ್ವರ ಹಾಗೂ ಹೊಟ್ಟೆನೋವು ಇನ್ನಿತರ ಲಕ್ಷಣಗಳು. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿಸಿದ ಆರು ತಾಸಿನಿಂದ ಆರು ದಿನದೊಳಗೆ ಅನಾರೋಗ್ಯ ಉಂಟಾಗುತ್ತದೆ. ಮೂತ್ರ, ರಕ್ತ, ಮೂಳೆ, ಕೀಲು ನರ, ಮೆದುಳಿಗೂ ನಂಜು ಹರಡಬಹುದು.