ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲಿವೇ ದೇಶ ಬಿಡಿ: ಸಿಖ್ಖರಿಗೆ ಧಮಕಿ!

By Suvarna News  |  First Published Oct 23, 2021, 8:04 AM IST

* ಆಫ್ಘಾನಿಸ್ತಾನ ಸಿಖ್ಖರಿಗೆ ತಾಲಿಬಾನ್‌ ಬೆದರಿಕೆ

* ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲಿವೇ ದೇಶ ಬಿಡಿ

* ತಾಲಿಬಾನ್‌ನಿಂದ ಮುಂದುವರಿದ ಅಟ್ಟಹಾಸ


ಕಾಬೂಲ್‌(ಅ.23): ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್‌(Taliban) ಉಗ್ರರ ಅಟ್ಟಹಾಸ ಮುಂದುವರೆದಿದ್ದು, ‘ಅಲ್ಪಸಂಖ್ಯಾತ ಸಿಖ್‌(Sikh) ಸಮುದಾಯಕ್ಕೆ ಮತಾಂತರವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ’ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ದೊಡ್ಡ ಸಂಖ್ಯೆಯ ಸಿಖ್‌(Sikh) ಸಮುದಾಯ ಇಲ್ಲಿನ ಕಾಬೂಲ್‌(Kabul), ಘಜ್ನಿ ಮತ್ತು ನಂಗಾಘರ್‌ನಲ್ಲಿ ನೆಲೆಸಿದೆ. ಈ ಸಮುದಾಯವನ್ನು ಗುರಿಯಾಗಿಸಿಕೊಂಡು ತಾಲಿಬಾನ್‌(Taliban) ಉಗ್ರರು ಹಲವೆಡೆ ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಗುರುದ್ವಾರಕ್ಕೆ ನುಗ್ಗಿ ಅಲ್ಲಿದ್ದ ಕಾವಲುಗಾರರನ್ನು ಕಟ್ಟಿಹಾಕಿದ್ದರು. ಅಲ್ಲದೇ ಮತಾಂತರಗೊಳ್ಳಿ(Convertion) ಎಂಬ ಬೆದರಿಕೆ ಹಾಕಿದರು ಎಂದು ವರದಿಯಾಗಿದೆ.

Latest Videos

undefined

ಕಳೆದ ವರ್ಷ ಜೂನ್‌ನಲ್ಲಿ ಸಿಖ್‌(Sikh) ನಾಯಕನನ್ನು ಉಗ್ರರು ಅಪಹರಿಸಿದ್ದರು. 2019ರಲ್ಲಿ ಮತ್ತೊಬ್ಬ ಸಿಖ್‌ ವ್ಯಕ್ತಿಯನ್ನು ಅಪಹರಿಸಿ ಕೊಲ್ಲಲಾಗಿತ್ತು. ಈ ವರ್ಷ ಮಾಚ್‌.26ರಂದು ನಡೆದ ಸಿಖ್‌ ಹತ್ಯಾಕಾಂಡದ ನಂತರ ಹಿಂಸೆಗೆ ಹೆದರಿ ಆಫ್ಘನ್‌ ಸಿಖ್‌ ಸಮುದಾಯ ಆಶ್ರಯ ಅರಸಿ ಭಾರತಕ್ಕೆ ಆಗಮಿಸುತ್ತಿದೆ.

ಆಫ್ಘನ್‌ನಲ್ಲಿ ಸರ್ಕಾರದ ಪತನಕ್ಕೂ ಮುನ್ನವೇ ಸಿಖ್‌ ಸಮುದಾಯದ ಪರಿಸ್ಥಿತಿ ಘೋರವಾಗಿತ್ತು. ಹತ್ತು ಸಾವಿರದಷ್ಟಿದ್ದ ಸಿಖ್‌ ಜನಸಂಖ್ಯೆ ವಿರುದ್ಧ ನಡೆದ ವ್ಯವಸ್ಥಿತ ತಾರತಮ್ಯ, ಹಿಂಸೆ, ಸಾವು, ವಲಸೆ ಮತ್ತಿತರ ಕಾರಣಗಳಿಂದ ಸಮುದಾಯ ಅಧಃಪತನದ ಹಾದಿ ಹಿಡಿದಿದೆ ಎಂದು ಅಂತಾರಾಷ್ಟ್ರೀಯ ಹಕ್ಕುಗಳು ಮತ್ತು ಭದ್ರತಾ ವೇದಿಕೆ (ಐಎಫ್‌ಎಫ್‌ಆರ್‌ಎಎಸ್‌) ತಿಳಿಸಿದೆ.

ಇತ್ತೀಚೆಗೆ ತಾಲಿಬಾನಿಗಳು ಮಹಿಳಾ ಫುಟ್ಬಾಲ್‌ ಆಟಗಾರ್ತಿಯೊಬ್ಬಳ ತಲೆ ಕಡಿದು ಪೈಶಾಚಿಕತೆ ಮೆರೆದಿದ್ದರು.

ಆತ್ಮಾಹುತಿ ಬಾಂಬರ್‌ಗಳಿಗೆ ತಾಲಿಬಾನ್‌ ‘ಹುತಾತ್ಮ’ ಪಟ್ಟ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ರಚನೆಗೂ ಮುನ್ನ ಅಮೆರಿಕ ಮತ್ತು ಆಫ್ಘನ್‌ ಸೇನೆ ಮೇಲೆ ಆತ್ಮಾಹುತಿ ದಾಳಿ ನಡೆಸಿದವರನ್ನು ತಾಲಿಬಾನ್‌ ಸರ್ಕಾರ ‘ಹುತಾತ್ಮರು’ ಎಂದು ಘೋಷಣೆ ಮಾಡಿದೆ. ಅಲ್ಲದೆ ಆತ್ಮಾಹುತಿ ದಾಳಿ ಎಸಗಿದ ಕುಟುಂಬ ಸದಸ್ಯರಿಗೆ ಜಮೀನು, ನಿವೇಶನ, ಬಟ್ಟೆ-ಬರೆ ಹಣಕಾಸು ನೆರವು ಸೇರಿದಂತೆ ಇನ್ನಿತರ ನೆರವು ನೀಡುವುದಾಗಿ ತಾಲಿಬಾನ್‌ ಸರ್ಕಾರ ಭರವಸೆ ನೀಡಿದೆ.

ಅಮೆರಿಕ ಮತ್ತು ಆಫ್ಘನ್‌ ಸೈನಿಕರ ಮೇಲೆ ಆತ್ಮಾಹುತಿ ದಾಳಿ ಮುಖಾಂತರ ತಾಲಿಬಾನ್‌ ಸರ್ಕಾರ ರಚನೆಗೆ ದಾರಿಮಾಡಿಕೊಟ್ಟಬಾಂಬರ್‌ಗಳ ಕುಟುಂಬಗಳನ್ನು ಹಂಗಾಮಿ ಗೃಹ ಸಚಿವನೂ ಆದ ಕುಖ್ಯಾತ ಭಯೋತ್ಪಾದಕ ಸಿರಾಜುದ್ದೀನ್‌ ಹಕ್ಕಾನಿ ಹೋಟೆಲ್‌ವೊಂದರಲ್ಲಿ ಭೇಟಿ ಮಾಡಿದ. ಈ ವೇಳೆ ಮಾತನಾಡಿದ ಹಕ್ಕಾನಿ, ‘ಆತ್ಮಾಹುತಿ ದಾಳಿಕೋರರು ಹುತಾತ್ಮರು’ ಎಂದು ಸಂಬೋಧಿಸಿದ. ಅಲ್ಲದೆ ಅವರು ಇಸ್ಲಾಂ ಮತ್ತು ದೇಶದ ನಿಜವಾದ ಹೀರೋಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ.

‘ಕೊನೆಗೆ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೆ ಸುಮಾರು 8500 ರು., ಬಟ್ಟೆಬರೆ ನೀಡಲಾಯಿತು. ಜತೆಗೆ ಎಲ್ಲರಿಗೂ ಒಂದು ನಿವೇಶನ ನೀಡುವುದಾಗಿ ಘೋಷಣೆ ಸಚಿವರು ಮಾಡಿದರು’ ಎಂದು ಗೃಹ ಸಚಿವಾಲಯದ ವಕ್ತಾರ ಸಯೀದ್‌ ಖಾಸ್ಟಿಟ್ವೀಟ್‌ ಮಾಡಿದ್ದಾನೆ. ಆದರೆ ಎಷ್ಟುಉಗ್ರರ ಕುಟುಂಬಗಳಿಗೆ ಈ ಸಹಾಯ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

click me!